ಲೋಕಸಭೆಗೆ ಸ್ಪರ್ಧಿಸಲು ಸಂಸದೆ ಶೋಭಾ ಕರಂದ್ಲಾಜೆ ನಿರಾಸಕ್ತಿ..!

Public TV
2 Min Read

ಬೆಂಗಳೂರು: ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಸಂಸದೆ ಶೋಭಾ ಕರಂದ್ಲಾಜೆ ನಿರಾಸಕ್ತಿ ತೋರಿದ್ದಾರೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭಿಸಿದೆ. ಶೋಭಾ ಕರಂದ್ಲಾಜೆ ಅವರು ತಮ್ಮ ಆಪ್ತರ ಬಳಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲ್ಲ ಎಂದು ಹೇಳಿಕೊಂಡಿದ್ದಾರಂತೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದೆಯಾಗಿರುವ ಶೋಭಾ ಕರಂದ್ಲಾಜೆ ರಾಜ್ಯ ರಾಜಕಾರಣಕ್ಕೆ ಮರಳುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ.

ಒಂದು ವೇಳೆ 2019ರಲ್ಲಿ ಕರ್ನಾಟಕದಲ್ಲಿ ಮತ್ತೊಮ್ಮೆ ಚುನಾವಣೆ ನಡೆದರೆ ತಾವು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಬಹುದು ಎಂಬುದನ್ನು ಶೋಭಾ ಕರಂದ್ಲಾಜೆ ಲೆಕ್ಕ ಹಾಕುತ್ತಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಪಕ್ಷದ ಪ್ರಾಥಮಿಕ ಮಟ್ಟದಲ್ಲಿಯೇ ಚರ್ಚೆಗಳು ನಡೆಯುತ್ತಿವೆ. ಉಡುಪಿ -ಚಿಕ್ಕಮಗಳೂರು ಕ್ಷೇತ್ರ ಬಿಜೆಪಿಗೆ ಸೇಫ್ ಎನ್ನಲಾಗುತ್ತಿದ್ದು, ಮಾಜಿ ಸಿಎಂ ಸದಾನಂದಗೌಡ ಹಾಗೂ ಮಾಜಿ ಸಚಿವ ಜೀವರಾಜ್ ನಡುವೆ ಪೈಪೋಟಿ ಏರ್ಪಟ್ಟಿದೆ. ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿರುವ ಜೀವರಾಜ್ ಹೆಸರು ಅಭ್ಯರ್ಥಿಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ.

ಉಡುಪಿ-ಚಿಕ್ಕಮಗಳೂರು ಲೋಕಸಭಾ ವ್ಯಾಪ್ತಿಯಲ್ಲಿ ಬಿಜೆಪಿ ಶಾಸಕರೇ ಹೆಚ್ಚಾಗಿದ್ದಾರೆ. ಶಾಸಕರಾದ ಸಿ.ಟಿ ರವಿ, ಸುರೇಶ್, ಕುಮಾರಸ್ವಾಮಿ, ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಲಾಲಾಜಿ ಮೆಂಡನ್, ರಘುಪತಿ ಭಟ್, ಸುನಿಲ್ ಕುಮಾರ್ ಎಲ್ಲ ಪ್ರಬಲ ನಾಯಕರು ಉಡುಪಿ-ಚಿಕ್ಕಮಗಳೂರು ಲೋಕಸಭಾ ವ್ಯಾಪ್ತಿಯಲ್ಲಿ ಬರುತ್ತಾರೆ. ಈ ಕ್ಷೇತ್ರದಿಂದ ಬಿಜೆಪಿಯ ಯಾವುದೇ ನಾಯಕ ಸ್ಪರ್ಧೆ ಮಾಡಿದ್ರೂ ಪ್ರಚಂಡ ಗೆಲುವು ಪಡೆಯಬಹುದು ಎಂಬುದು ಸದಾನಂದ ಗೌಡರ ಲೆಕ್ಕಾಚಾರವಾಗಿದೆ.

ಜೀವರಾಜ್ ಅವರಿಗೆ ಹಾಲಿ ಸಂಸದೆಯಾಗಿರುವ ಶೋಭಾ ಕರಂದ್ಲಾಜೆ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಬೆಂಬಲ ಸೂಚಿಸಿದ್ದಾರಂತೆ. ಈ ಬಾರಿ ಸದಾನಂದ ಗೌಡರು ಬೆಂಗಳೂರು ಉತ್ತರ ಕ್ಷೇತ್ರದಿಂದಲೇ ಸ್ಪರ್ಧಿಸಲಿ ಎಂಬುದು ಯಡಿಯೂರಪ್ಪ ಅವರ ಲೆಕ್ಕಾಚಾರವಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಕ್ಷೇತ್ರದ ವ್ಯಾಪ್ತಿಯ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವಲ್ಲಿ ಸದಾನಂದಗೌಡ ವಿಫಲರಾಗಿದ್ದರು. ಈ ಹಿನ್ನೆಲೆಯಲ್ಲಿ ಬೆಂಗಳೂರು ಉತ್ತರ ಕ್ಷೇತ್ರವನ್ನು ನೀಡುವ ಕುರಿತು ಚರ್ಚೆಗಳು ನಡೆಯುತ್ತಿವೆ ಎಂದು ಹೇಳಲಾಗುತ್ತಿದೆ.

ಇತ್ತ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆಯಾಗಿರುವ ರಮ್ಯಾ ಸಹ ಕ್ಷೇತ್ರ ಬದಲಾವಣೆಗೆ ಚಿಂತಿಸುತ್ತಿದ್ದು, ಮಂಡ್ಯದಿಂದ ಬೆಂಗಳೂರು ಉತ್ತರ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಗಳಿವೆ. ಒಂದು ವೇಳೆ ರಮ್ಯಾ ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿದ್ರೆ, ಎದುರಾಳಿಯಾಗಿ ಬಿಜೆಪಿ ಶೋಭಾ ಕರಂದ್ಲಾಜೆ ಅವರನ್ನು ಚುನಾವಣಾ ಕಣಕ್ಕಿಳಿಸುವುದರ ಬಗ್ಗೆ ಚಿಂತನೆಯೂ ನಡೆಸುತ್ತಿದೆ. ತಮ್ಮ ಸ್ವಕ್ಷೇತ್ರ ಬಿಟ್ಟು ಬಂದ್ರೆ, ಖಾಲಿಯಾಗುವ ಕ್ಷೇತ್ರದ ಟಿಕೆಟ್‍ಗಾಗಿ ಡಿ.ವಿ.ಸದಾನಂದಗೌಡ ಮತ್ತು ಜೀವರಾಜ್ ನಡುವೆ ಪೈಪೋಟಿ ಏರ್ಪಟ್ಟಿದೆ ಎನ್ನಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *