ಧರ್ಮಸ್ಥಳದ ಮುಂದೆ ನಿಂತು ಹೇಳಿದ್ರಲ್ಲ ಹಾಗಾದ್ರೆ, ಎಷ್ಟು ಜನಕ್ಕೆ ಋಣಮುಕ್ತ ಪತ್ರ ಕೊಟ್ಟಿದ್ರಿ- ಎಚ್‍ಡಿಕೆಗೆ ಕರಂದ್ಲಾಜೆ ಪ್ರಶ್ನೆ

Public TV
2 Min Read

ಬೆಳಗಾವಿ: ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲೇ ರೈತರ ಸಂಪೂರ್ಣ ಸಾಲಮನ್ನಾ ಮಾಡುತ್ತೀರೆಂದು ಧರ್ಮಸ್ಥಳದ ಮುಂದೆ ನಿಂತು ಹೇಳಿದ್ದೀರಿ. ಹಾಗಾದರೆ ಇಲ್ಲಿಯವರೆಗೂ ಎಷ್ಟು ರೈತರಿಗೆ ಋಣಮುಕ್ತ ಪತ್ರ ಕೊಟ್ಟಿದ್ದೀರೆಂದು ಸಂಸದೆ ಶೋಭಾ ಕರಂದ್ಲಾಜೆ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಪ್ರಶ್ನಿಸಿದ್ದಾರೆ.

ರೈತ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ಅಧ್ಯಕ್ಷರಾಗಿರುವ ಬಿಎಸ್ ಯಡಿಯೂರಪ್ಪನವರ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಸುವರ್ಣಸೌಧ ಕಟ್ಟಲಾಯಿತು. ಆದರೆ ಅದಾದ ನಂತರ ಬಂದ ಸರ್ಕಾರಗಳು ಸುವರ್ಣ ಸೌಧದಲ್ಲಿ ಯಾವುದೇ ಕೆಲಸಗಳನ್ನು ನಡೆಸುತ್ತಿಲ್ಲ. ಸಿಎಂ ಕುಮಾರಸ್ವಾಮಿ ಮಾತನಾಡುತ್ತಿರುವುದನ್ನು ನೋಡಿದರೆ, ನಮಗೆ ನ್ಯಾಯ ಸಿಗುತ್ತೆ ಎಂದು ಅನಿಸುತ್ತಿಲ್ಲ. ರೈತ ಹೋರಾಟಗಾರರ ಬಗ್ಗೆ ಸಿಎಂ ಕೀಳಾಗಿ ಮಾತನಾಡುತ್ತಾರೆ. ಅಲ್ಲದೇ ಏನು ಕಿಸಿಯೋಕೆ ರೈತ ಹೋರಾಟ ಮಾಡುತ್ತಾರೆಂದು ಕೇಳಿದ್ದಾರೆ. ಮಾತನಾಡುವ ಭಾಷೆ ಯಾವ ರೀತಿ ಇದೇ ಎನ್ನುವುದು ಅವರ ಮಾನಸಿಕ ಸ್ಥಿತಿಯನ್ನೇ ತೋರಿಸುತ್ತದೆಂದು ಕಿಡಿಕಾರಿದರು.

ಅಧಿಕಾರಕ್ಕೆ 24 ಗಂಟೆಗಳಲ್ಲೆ ರೈತರ ಸಾಲಮನ್ನಾ ಮಾಡುತ್ತೇನೆಂದು ಧರ್ಮಸ್ಥಳ ಹಾಗೂ ಶೃಂಗೇರಿ ದೇವಾಲಯಗಳ ಮುಂದೆ ನಿಂತು ಹೇಳಿದ್ದಿರಿ. ಆದರೆ ಈಗ ಎಷ್ಟು ರೈತರಿಗೆ ಋಣಮುಕ್ತ ಪ್ರಮಾಣ ಪತ್ರ ನೀಡಿದ್ದೀರಿ ಎಂಬುದನ್ನು ತೋರಿಸಿ. ಅಲ್ಲದೇ ಉತ್ತರಕರ್ನಾಟಕ ಭಾಗದ ಜನರ ಎಷ್ಟು ಮಂದಿಯ ಸಾಲ ಮನ್ನಾ ಆಗಿದೆ? ಕುಮಾರಸ್ವಾಮಿ ಈ ಬಗ್ಗೆ ಎಚ್ಚರಿಕೆಯಿಂದ ಮಾತನಾಡಬೇಕು. ನಾಲ್ಕು ಜನರಿಗಾದರೂ ಋಣಮುಕ್ತ ಪತ್ರ ನೀಡಿದ್ದೀರಾ ಎಂದು ಸವಾಲು ಹಾಕಿದರು.

ನಮಗೆ ಹೆಮ್ಮೆ ಇದೆ. ಬಿಜೆಪಿ ಸರ್ಕಾರ 70 ವರ್ಷದ ಕೆಲಸವನ್ನು ಮಾಡಿದೆ. ರೈತರ ಸಾಲಮನ್ನಾ, ಹಾಲಿಗೆ ಪ್ರೋತ್ಸಹ ಧನ, ಉಚಿತ ಪಂಪ್‍ಸೆಟ್ ವಿದ್ಯುತ್ ಕೊಟ್ಟಿದ್ದೆವು. ಅಲ್ಲದೇ ಜಲ ಸಂಪನ್ಮೂಲ ಸಚಿವರು ಮೈಸೂರಿನಲ್ಲಿ ಡಿಸ್ನಿ ಲ್ಯಾಂಡ್ ಮಾಡುತ್ತಾರಂತೆ. ಮೊದಲು ನದಿಯಲ್ಲಿ ತುಂಬಿರುವ ಹುಳುವನ್ನು ಸ್ವಚ್ಛಗೊಳಿಸಿ. ಕೃಷ್ಣೆ ಮೇಲಾಣೆ ಹಾಕಿ ಪಾದಯಾತ್ರೆ ಮಾಡಿ, ತೊಡೆ ತಟ್ಟಿದ್ದೀರಿ. ಆದರೆ ಯಾವುದೇ ಕೆಲಸ ಮಾತ್ರ ಆಗಿಲ್ಲ. ಇದು ನಿಮ್ಮ ಸರ್ಕಾರದ ಅಂಧಾ ದರ್ಬಾರ್ ಆಗಿದೆ. ಅಲ್ಲದೇ ಕೇಂದ್ರದ ಹಣವನ್ನು ರಾಜ್ಯ ಸರ್ಕಾರ ದುರುಪಯೋಗ ಮಾಡಿಕೊಳ್ಳುತ್ತಿದೆ. ನೀವು ರಾಜ್ಯಕ್ಕೆ ಮುಖ್ಯಮಂತ್ರಿಯೇ ಹೊರತು, ಮೂರು ಜಿಲ್ಲೆಗಳಿಗೆ ಮಾತ್ರ ಸೀಮಿತವಲ್ಲ. ಇಂದಿನ ನಮ್ಮ ಹೋರಾಟ ಕೇವಲ ಆರಂಭ ಮಾತ್ರ. ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಡುತ್ತೇವೆ. ದೇವರು ಇವರಿಗೆ ಸರಿಯಾದ ಬುದ್ಧಿ ಕೊಡಲಿ ಎಂದು ಹೇಳಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *