ಸಹಿಷ್ಣುತೆಯ ಪಾಠ ಹೇಳೋ ಲದ್ದಿಜೀವಿಗಳು ಈಗ ಎಲ್ಲಿದ್ದಾರೆ- ಸುಹಾನ ವಿಚಾರದಲ್ಲಿ ಪ್ರತಾಪ್ ಸಿಂಹ ಪ್ರಶ್ನೆ

Public TV
3 Min Read

ಮೈಸೂರು: ಝೀ ಕನ್ನಡ ವಾಹಿನಿಯ ರಿಯಾಲಿಟಿ ಶೋ ಸರಿಗಮಪದಲ್ಲಿ ಹಾಡಿದ ಮುಸ್ಲಿಂ ಯುವತಿ ಸುಹಾನ ಸೈಯದ್ ವಿಚಾರದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಮೈಸೂರು ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿದ್ದಾರೆ.

ಝೀ ಕನ್ನಡ ವಾಹಿನಿಯಲ್ಲಿ ಸುಹಾನ ಸೈಯದ್ ಹಾಡಿರೋದನ್ನ ನೋಡಿದ್ದೇನೆ. ಶ್ರೀಕಾರನೇ ಅನ್ನೋ ಹಾಡು ಭಕ್ತಿಯಿಂದ ಹಾಡುವಾಗ ಎಂಥವರ ಮನಸ್ಸನ್ನು ಥಟ್ಟತ್ತೆ. ಆ ರೀತಿಯಲ್ಲಿ ಆಕೆ ಬಹಳ ಅದ್ಭುತವಾಗಿ ಹಾಡಿದ್ದಾಳೆ. ಹಾಗೆಯೇ ಆಕೆಯ ಹಾಡಿನಿಂದ ಜಡ್ಜಸ್ ಕೂಡ ಭಾವುಕರಾಗಿದ್ದರು. ಮೆಚ್ಚುಗೆಯನ್ನು ಕೂಡ ವ್ಯಕ್ತಪಡಿಸಿದ್ದರು. ಇದನ್ನ ನಾನು ಕೂಡ ನನ್ನ ಫೇಸ್ಬುಕ್ ವಾಲ್‍ನಲ್ಲಿ ಶೇರ್ ಮಾಡಿದ್ದೆ ಅಂತಾ ಸಂಸದ ಪ್ರತಾಪ್ ಸಿಂಹ ಹೇಳಿದ್ರು.

ವಿಚಾರವ್ಯಾದಿಗಳು ಎಲ್ಲಿದ್ದಾರೆ?: ಆಕೆ ಶಾಸ್ತ್ರಬದ್ಧವಾಗಿ ಹಾಡಿದ್ದನ್ನು ನೋಡಿ ಇಡೀ ಕರ್ನಾಟಕವೇ ಆಕೆಯನ್ನು ಕೊಂಡಾಡಿದೆ. ಮಾತ್ರವಲ್ಲದೇ ಎಲ್ಲರ ವಾಟ್ಸಾಪ್, ಫೆಸ್ಬುಕ್‍ನಲ್ಲಿ ಆಕೆಯ ಬಗ್ಗೆ ಬಹಳ ಮೆಚ್ಚುಗೆಯ ಮಾತುಗಳು ಕೇಳಿಬಂದಿತ್ತು. ಆದ್ರೆ ಅಚ್ಚರಿಯ ವಿಷಯ ಅಂದ್ರೆ ಅನ್ಯಧರ್ಮದ ಒಂದು ದೇವರನ್ನು ಸ್ತುತಿಸುವಂತಹ ಗೀತೆಯನ್ನು ಹಾಡಿದ್ರೆನೇ ಸಹಿಸಿಕೊಳ್ಳದ ಇಂತಹ ವ್ಯಕ್ತಿಗಳಿಂದ ನಾವು ಸಹಿಷ್ಣುತೆ, ಸಹಬಾಳ್ವೆಯನ್ನು ನಿರೀಕ್ಷಿಸಲು ಸಾಧ್ಯವಿದೆಯೇ? ಅದೆಲ್ಲಕ್ಕಿಂತ ಮಿಗಿಲಾಗಿ ಮಾತೆತ್ತಿದ್ರೆ ಹಿಂದೂ ಧರ್ಮದ ಬಗ್ಗೆ ಮಾತಾಡ್ತಾರೆ. ಹಿಂದೂಗಳಿಗೇ ಪಾಠ ಹೇಳಿಕೊಡಲು ಬರ್ತಾರೆ. ಇಂತಹವರನ್ನು ನಾವು ವಿಚಾರವ್ಯಾದಿಗಳು, ಲದ್ದಿಜೀವಿಗಳು ಅಂತಾ ಕರೆತೀವಿ. ಈ ವಿಚಾರವ್ಯಾದಿಗಳು, ಲದ್ದಿಜೀವಿಗಳು ಇಂದು ಮೌನಕ್ಕೆ ಶರಣಾಗುವ ಮೂಲಕ ಲದ್ದಜೀವಿಗಳು ಅನ್ನೋದನ್ನ ಪ್ರೂವ್ ಮಾಡಿದ್ದಾರೆ ಅಂತಾ ಕಿಡಿಕಾರಿದ್ರು.

ಇಂತಹವರಿಂದ ಸಹಿಷ್ಣುತೆಯ ಪಾಠ ಬೇಕೆ?: ನಿನ್ನೆ ರಾಷ್ಟ್ರೀಯ ಚಾನೆಲ್‍ಗಳಲ್ಲೂ ಕೂಡ ಆಕೆಯ ವಿರುದ್ಧ ನಡೆಯುತ್ತಿರುವ ಅಭಿಯಾನದ ಬಗ್ಗೆ ವರದಿಯಾಗಿತ್ತು. ಟ್ವಿಟ್ಟರ್‍ನಲ್ಲಿರೋ ಕೆಲವು ಸೆಲೆಬ್ರಿಟಿಗಳು ಕೂಡ ಇದನ್ನ ಖಂಡಿಸಿದ್ರು. ಆದ್ರೆ ನಮ್ಮಲ್ಲಿ ಮಾತೆತ್ತಿದ್ರೆ ಆಗಾಗ ಬಾಯಿ ಬಿಡೋ ಭಗವಾನ್, ಜಿ.ಕೆ ಗೋವಿಂದ ರಾವ್, ಗಿರೀಶ್ ಕಾರ್ನಾಡ್ ಇನ್ನು ಕೆಲವರೆಲ್ಲಾ ನಮ್ಮ ಕರ್ನಾಟಕದ ಒಬ್ಬ ಹೆಣ್ಣು ಮಗಳ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿದೆ. ಮಾತ್ರವಲ್ಲದೇ ಆಕೆಗೆ ಮತ್ತು ಆಕೆಯ ಕುಟುಂಬಕ್ಕೆ ಅಪಾಯ ಎದುರಾಗುತ್ತಿರೋ ಈ ಹೊತ್ತಿನಲ್ಲಿ ಮೌನವಹಿಸಿರೋದನ್ನು ನೋಡಿದ್ರೆ ಇವರನ್ನು ವಿಚಾರವ್ಯಾದಿಗಳು ಅಂದ್ರೆ ತಪ್ಪಾಗಲಾರದು. ಸಹಿಷ್ಣುತೆಯ ಪಾಠ, ಪ್ರಜಾ ತಾಂತ್ರಿಕತೆ, ಸರ್ವಧರ್ಮ ಸಹಿಷ್ಣುತೆ, ಎಲ್ಲರೂ ಕೂಡಿ ಬಾಳಬೇಕು ಅನ್ನೋ ಇವರ ಪಾಠಗಳು ಇವಾಗ ಮರೆತು ಹೋಗಿದೆಯೇ ಅಂತಾ ಸಿಂಹ ಪ್ರಶ್ನಿಸಿದ್ರು.

ಅಲ್ಲಲ್ಲಿ ತಲೆಎತ್ತಿದ ಗೋಸುಂಬೆಗಳು: ಸಂಗೀತ ಕ್ಷೇತ್ರದಲ್ಲಿ ಮುಸ್ಲಿಂ ಧರ್ಮಕ್ಕೆ ಸೇರಿದವರು ಬಹಳ ದೊಡ್ಡ ಹೆಸರು ಮಾಡಿದ್ದಾರೆ. ಅವರನ್ನೆಲ್ಲಾ ಧರ್ಮ ನೋಡದೇ ಮನಸ್ಸಿನೊಳಗಿಟ್ಟು ಆರಾಧಿಸಿದ್ದೇವೆ. ಆದ್ರೆ ಇತ್ತೀಚೆಗೆ ಕೆಲವು ಗೋಸುಂಬೆಗಳು ಅಲ್ಲಲ್ಲಿ ತಲೆಎತ್ತಿವೆ. ಅವರೆಲ್ಲಾ ಒಂದು ಕಾಲದಲ್ಲಿ ಎಲ್ಲಾ ಧರ್ಮಗಳನ್ನು ಒಂದು ಮಾಡುವಂತವರು. ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಂದು ಎಲ್ಲರಿಗೂ ಬೆದರಿಕೆ ಹಾಕಿ, ತಮ್ಮ ನೀಚ ಮನಸ್ಥಿತಿಯನ್ನ ತೋರಿಸುತ್ತಿದ್ದಾರೆ. ಹೀಗಾಗಿ ಇಂದು ನಾಗರೀಕ ಸಮಾಜ ಎದ್ದುನಿಂತು ಅವರನ್ನು ಮಟ್ಟ ಹಾಕಬೇಕು. ಇಂತಹವರ ವಿರುದ್ಧ ಸರ್ಕಾರ ಕೂಡ ಕ್ರಮ ಕೈಗೊಳ್ಳಬೇಕು ಅಂತಾ ವಿನಂತಿ ಮಾಡಿದ್ರು.

ಮಹಿಳಾದಿನಾಚರಣೆಯ ಶುಭಾಶಯ: ಈ ಸಂದರ್ಭದಲ್ಲಿ ನಮ್ಮ ಎಲ್ಲಾ ಸುಖ, ಸಂತೋಷದಲ್ಲಿ ಹೆಣ್ಣು ಬಹಳ ಮುಖ್ಯ ಪಾತ್ರ ವಹಿಸುತ್ತಾಳೆ. ಹಾಗೆಯೇ ಹೆಣ್ಣು ಇಲ್ಲದೇ ಈ ಜಗತ್ತನ್ನು ಕಲ್ಪಸಿಕೊಳ್ಳಲು ಸಾಧ್ಯವಿಲ್ಲ. ಇಂದು ವಿಶ್ವಾದಾದ್ಯಂತ ಮಹಿಳಾ ದಿನಾಚರಣೆಯನ್ನು ಆಚರಣೆ ಮಾಡುತ್ತಿದ್ದೇವೆ ಎಂದ ಅವರು ಎಲ್ಲಾ ಮಹಿಳೆಯರಿಗೂ ಈ ದಿನದ ಶುಭಾಶಯ ಕೋರಿದ್ರು.

ಇತ್ತೀಚೆಗೆ ಸರಿಗಮಪ ರಿಯಾಲಿಟಿ ಶೋದ ಆಡಿಶನ್ ಕಾರ್ಯಕ್ರಮದಲ್ಲಿ ಶಿವಮೊಗ್ಗ ಸಾಗರ ಮೂಲದ ಮುಸ್ಲಿಂ ಯುವತಿ ಸುಹಾನ್ ಸೈಯದ್ ಶ್ರೀಕಾರನೇ ಅನ್ನೋ ದೇವರ ನಾಮವನ್ನು ಮೆಗಾ ಆಡಿಷನ್‍ನಲ್ಲಿ ಹಾಡಿದ್ದರು. ಮಾತ್ರವಲ್ಲದೇ ನನ್ನ ನೋಡಿಯಾದ್ರು ಮುಸ್ಲಿಂ ಹೆಣ್ಣು ಮಕ್ಕಳು ತಮ್ಮ ಪ್ರತಿಭೆಯನ್ನು ಹೊರಹಾಕಬೇಕು ಅಂತಾ ಹೇಳಿದ್ರು. ಇದೀಗ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಹೊಗಳಿಕೆ ಮತ್ತು ಟೀಕೆಗಳು ವ್ಯಕ್ತವಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *