ಬಿಜೆಪಿ ಕಾರ್ಯಕರ್ತ ರಾಜು ಕುಟುಂಬಕ್ಕೆ ಪರಿಹಾರ- ಗುಂಡೂರಾವ್ ಆರೋಪಕ್ಕೆ ಪ್ರತಾಪ್ ಸಿಂಹ ಕೆಂಡಾಮಂಡಲ

Public TV
3 Min Read

ಮೈಸೂರು: ಬಿಜೆಪಿ ಕಾರ್ಯಕರ್ತ ರಾಜು ಕುಟುಂಬಕ್ಕೆ ಬಿಜೆಪಿ ಪರಿಹಾರ ನೀಡಿದೆ ಅಂತ ಕೆಪಿಸಿಸಿ ಕಾರ್ಯದರ್ಶಿ ದಿನೇಶ್ ಗುಂಡೂರಾವ್ ಮಾಡಿರುವ ಆರೋಪಕ್ಕೆ ಸಂಸದ ಪ್ರತಾಪ್ ಸಿಂಹ ಕೆಂಡಾಮಂಡಲರಾಗಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಂಹ, ಅಮಿತ್ ಶಾ ಅವರನ್ನು ಕ್ರಿಮಿನಲ್ ಅಂತ ಕರೆದು ಗಡಿಪಾರು ಮಾಡಬೇಕುಂತ ಹೇಳಿ ಕರೆ ಕೊಟ್ಟು ಚುನಾವಣಾ ಆಯೋಗಕ್ಕೆ ದಿನೇಶ್ ಗುಂಡೂರಾವ್ ಅವರು ದೂರು ಕೊಟ್ಟಿದ್ದಾರೆ. ಇದರ ಜೊತೆಗೆ ಬಿಜೆಪಿ ನಾಯಕರು ಇಲ್ಲಿಯವರೆಗೆ ಏನ್ ಮಾಡಿದ್ದಾರೆ ಅನ್ನೋ ಪ್ರಶ್ನೆಯನ್ನು ಕೂಡ ಹಾಕಿದ್ದಾರೆ. ನಾನು ಮೈಸೂರಿನವನು, ಮೈಸೂರು ಬಗ್ಗೆ ಪ್ರೀತಿಯಿದೆ ಅಂತ ಬಾಡೂಟ, ಮೀನೂಟ ಹಾಗೂ ಮದುವೆ ಮುಂಜಿ ಅಂತ ಮೈಸೂರಿಗೆ ಆಗಾಗ ಬರುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜು ಹತ್ಯೆಯಾಗಿ ಒಂದೂವರೆ ವರ್ಷ ಕಳೆದ್ರೂ, ಅವರ ತಾಯಿಯ ಕಣ್ಣೀರು ಒರೆಸುವ ಅಥವಾ ಸಾಂತ್ವಾನ ಹೇಳುವ ಕೆಲಸವನ್ನು ಮಾಡಿದ್ದಾರೆಯೇ ಅಂತ ಗುಂಡೂರಾವ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜುವನ್ನು ಹತ್ಯೆ ಮಾಡಿದ ಅಬೀಬ್ ಪಾಷಾ ಮೇಲಿನ ಚಾರ್ಜ್ ಶೀಟನ್ನು ವೀಕ್ ಮಾಡಿ ಆತನ ಬಿಡುಗಡೆಯಾಗುವವರೆಗೆ ನೋಡಿಕೊಂಡರು. ಅಲ್ಲದೇ ಆತ ಜೈಲಿನಿಂದ ಬಿಡುಗಡೆಯಾದ ಬಳಿಕ ಆತನನ್ನು ಮೆರವಣಿಗೆ ಮೂಲಕ ಕರೆದುಕೊಂಡು ಹೋಗಿದ್ದಾರೆ. ಈ ಎಲ್ಲಾ ಘಟನೆಗಳನ್ನು ನೋಡಿಯೂ ಕಣ್ಮುಚ್ಚಿಕೊಂಡು ಕುಳಿತಿದ್ದಾರೆ. ಇಂದು ಅದೇ ಅಬೀಬ್ ಪಾಷಾ ಯಾರೋ ಒಬ್ಬ ಸಂಸದರನ್ನು ಹತ್ಯೆ ಮಾಡಲು ಹೊಂಚುಹಾಕಿದ್ದಾನೆ ಎಂಬುವುದನ್ನು ಮಾಧ್ಯಮಗಳು ವರದಿ ಮಾಡಿದ್ದವು. ದಿನೇಶ್ ಗುಂಡೂರಾವ್ ಅವರಿಗೆ ಕನಿಷ್ಠ ಸೌಜನ್ಯ, ನೈತಿಕತೆ ಇದ್ದಿದ್ದೇ ಆದ್ರೆ ಅವರ ಮುಖ್ಯಮಂತ್ರಿ ನಡೆದುಕೊಳ್ಳುವ ರೀತಿಯ ಬಗ್ಗೆ ಮಾತನಾಡಲಿ ಅಂತ ಸಚಿವರ ವಿರುದ್ಧ ಕೆಂಡಾಮಂಡಲರಾದ್ರು.  ಇದನ್ನೂ ಓದಿ: ಅಮಿತ್ ಶಾ ರಿಂದ ನೀತಿ ಸಂಹಿತೆ ಉಲ್ಲಂಘನೆ – ಗಡಿಪಾರಿಗೆ ಆಗ್ರಹಿಸಿದ ದಿನೇಶ್ ಗುಂಡೂರಾವ್

ಚುನಾವಣಾ ಆಯೋಗಕ್ಕೆ ದೂರು: ರಾಜು ಕುಟುಂಬಕ್ಕೆ ಪರಿಹಾರ ಕೊಟ್ಟಿರುವ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ಕೊಡ್ತೀವಿ ಅಂತ ಹೇಳ್ತಾ ಇರೋ ನೀವುಗಳು, ನಮ್ಮ ಕಾರ್ಯಕರ್ತ ಸತ್ತಾಗ ಅವರ ಬೆಂಬಲಕ್ಕೆ ಯಾರು ನಿಂತಿದ್ದರು ಎಂಬುವುದು ನಿಮಗೆ ತಿಳಿದಿದೆಯಾ?. ನಿನ್ನೆ ಅಮಿತ್ ಶಾ ಅವರು ಏನೂ ಪರಿಹಾರ, ದುಡ್ಡು ಕೊಟ್ಟಿಲ್ಲ. ಒಂದು ವೇಳೆ ಕೊಟ್ಟಿದ್ದೇವೆ ಅಂತಾನೇ ತಿಳ್ಕೊಳ್ಳಿ. ನಾವು ಕಾಂಗ್ರೆಸ್ ಅಥವಾ ಸಾರ್ವಜನಿಕರ ಹಣ ಕೊಟ್ಟಿಲ್ಲ. ನಮ್ಮ ಪಕ್ಷದ ಕಾರ್ಯಕರ್ತನ ಕಷ್ಟಕ್ಕೆ ಸ್ಪಂದಿಸುವುದು ನಮ್ಮ ಜವಾಬ್ದಾರಿ. ಹೀಗಾಗಿ ನಮ್ಮ ಪಕ್ಷದ ಹಣವನ್ನೇ ನೀಡಿದ್ದೇವೆ ಅಂತ ತಿಳ್ಕೊಳ್ಳಿ. ಇದರಿಂದ ನಿಮಗೇನು ತೊಂದ್ರೆ ಅಂತ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ್ರು.

ಅಬೀಬ್ ಪಾಷಾನನ್ನು ಬಿಡುಗಡೆಗೊಳಿಸಿ ಇದೀಗ ಆತ ಮತ್ತೊಂದು ಹತ್ಯೆ ಮಾಡಿದ್ರೆ ನಿಮ್ಮ ನೀತಿ ಸಂಹಿತೆ ತಡೆಯುತ್ತಾ ಅಂತ ಮರುಪ್ರಶ್ನೆ ಹಾಕಿದ ಅವರು ದಿನೇಶ್ ಗುಂಡೂರಾವ್ ಅವರು ಸ್ವಲ್ಪ ಎಚ್ಚರಿಕೆಯಿಂದ ಮಾತನಾಡುವಂತೆ ತಿಳಿಹೇಳಿದ್ದಾರೆ. ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತ ರಾಜು ಹತ್ಯೆಯ ಪ್ರಮುಖ ಆರೋಪಿಗೆ ಜಾಮೀನು-ಹಾರ, ತುರಾಯಿ ಹಾಕಿ ಭರ್ಜರಿ ಸ್ವಾಗತ

ಕಾಂಗ್ರೆಸ್ ನ ರಾಜಕಾರಣ ಏನು ಎಂಬುದು ನಮಗೆ ತಿಳಿದಿದೆ. ಒಬ್ಬ ಮಗನನ್ನು ಕಳೆದುಕೊಂಡ ತಾಯಿಯ ಆ ದುಃಖವನ್ನು ಅರ್ಥಮಾಡಿಕೊಳ್ಳಿ. ಚುನಾವಣೆಗೂ ಈ ವಿಚಾರಕ್ಕೂ ಸಂಬಂಧ ಕಲ್ಪಿಸಬೇಡಿ. ರಾಷ್ಟ್ರೀಯ ಅಧ್ಯಕ್ಷರು ಇಲ್ಲಿಗೆ ಬಂದಿರುವ ಸಂದರ್ಭದಲ್ಲಿ ರಾಜು ಮನೆಗೆ ಭೇಟಿ ನೀಡಿ ಅವರ ತಾಯಿಗೆ ಸಾಂತ್ವಾನ ಹೇಳಿ, ಧೈರ್ಯ ತುಂಬಿದ್ದಾರೆ ಅಷ್ಟೇ ಅಂತ ಸ್ಪಷ್ಟಪಡಿಸಿದ್ದಾರೆ.

24 ಜನರನ್ನ ಕಳೆದುಕೊಂಡ ನೋವು ನಮಗಿದೆ: ಒಟ್ಟಿನಲ್ಲಿ ಶಾ ಅವರು ರಾಜು ಮನೆಗೆ ಭೇಟಿ ನೀಡಿದ್ದರ ಕುರಿತು ಕೇಸ್ ಹಾಕೋದಾದ್ರೆ ಹಾಕಿ. ಇದರಿಂದ ನಮಗೇನೂ ಬೇಜಾರಿಲ್ಲ. 24 ಜನ ಕಾರ್ಯಕರ್ತರನ್ನು ಕಳೆದುಕೊಂಡ ನಮ್ಮ ನೋವು ಬೇರೆ ಇದೆ. ಹೀಗಾಗಿ ನಮ್ಮ ನೋವನ್ನು ಅರ್ಥ ಮಾಡಿಕೊಳ್ಳಲು ಯಾವ ನೀತಿ ಸಂಹಿತೆಗೂ ಸಾಧ್ಯವಿಲ್ಲ. ಸಿಎಂ ಅವರು ಅರ್ಧ ಗಂಟೆ ಸಮಯ ನಿಗದಿ ಮಾಡಿಕೊಂಡು ರಾಜು ಮನೆಗೆ ಹೊಗಿಲ್ಲ. 8 ಕೊಲೆ ಪ್ರಕರಣದ ಆರೋಪಿಯಾಗಿರುವ ಅಬೀಬ್ ಪಾಷಾ ಬಿಡುಗಡೆಗೆ ಅನುಕೂಲ ಮಾಡಿದ್ರಿ ಅಂತ ಸಿಎಂ ಅವರನ್ನು ಪ್ರಶ್ನಿಸಿದ್ರು.  ಇದನ್ನೂ ಓದಿರಾಜಮಾತೆ ಪ್ರಮೋದಾ ದೇವಿ ಜೊತೆ ಶಾ ಮಹತ್ವದ ಚರ್ಚೆ – ಇನ್‍ಸೈಡ್ ಸ್ಟೋರಿ ಇಲ್ಲಿದೆ

ರಾಜ್ಯ ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ನಿನ್ನೆ ಮೈಸೂರಿಗೆ ಬೇಟಿ ನಿಡಿದ್ದು, ಇದೇ ವೇಳೆ ದುಷ್ಕರ್ಮಿಗಳ ಕೃತ್ಯಕ್ಕೆ ಬಲಿಯಾದ ರಾಜು ಮನೆಗೆ ಭೇಟಿ ನೀಡಿ ಅವರ ತಾಯಿಗೆ ಸಾಂತ್ವಾನ ಹೇಳಿ ಧೈರ್ಯ ತುಂಬಿದ್ದರು. ಈ ಸಂದರ್ಭದಲ್ಲಿ ರಾಜು ಕುಟುಂಬಕ್ಕೆ ಬಿಜೆಪಿ ಪರಿಹಾರ ನೀಡಿದೆ ಅಂತ ಕಾಂಗ್ರೆಸ್ ಆರೋಪಿಸಿ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಹೇಳಿತ್ತು.

Share This Article
Leave a Comment

Leave a Reply

Your email address will not be published. Required fields are marked *