ದೆಹಲಿ ಸ್ಫೋಟದಲ್ಲೂ ಕಾಂಗ್ರೆಸ್ ಕೆಟ್ಟ ರಾಜಕಾರಣ – ಉಗ್ರರಿಗೆ ಹಾಸಿಗೆ ಹಾಸಿಕೊಟ್ಟಂತೆ ಮಾತಾಡ್ತಾರೆ: ಜೋಶಿ ಕಿಡಿ

Public TV
1 Min Read

ನವದೆಹಲಿ: ದೇಶದಲ್ಲಿ ಎಲ್ಲಿಯೇ ಸ್ಫೋಟ, ಭಯೋತ್ಪಾದನೆ ದಾಳಿ ನಡೆದಾಗಲೂ ಕಾಂಗ್ರೆಸ್ (Congress) ತೀರಾ ಕೀಳುಮಟ್ಟದ ರಾಜಕೀಯಕ್ಕೆ ಇಳಿಯುತ್ತದೆ. ಈಗ ದೆಹಲಿ ಸ್ಫೋಟದಲ್ಲೂ ಅದನ್ನೇ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Prahlad Joshi) ಕಿಡಿಕಾರಿದ್ದಾರೆ.

ದೆಹಲಿ ಕೆಂಪುಕೋಟೆ ಬಳಿ ಸಂಭವಿಸಿದ ಕಾರ್ ಸ್ಫೋಟದಿಂದ ದೇಶವೇ ತಲ್ಲಣಗೊಂಡಿದೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಒಗ್ಗಟ್ಟಿನ ಬಲ ಪ್ರದರ್ಶಿಸದೆ, ಉಗ್ರರಿಗೆ ಹಾಸಿಗೆ ಹಾಸಿಕೊಟ್ಟಂತೆ ವ್ಯತಿರಿಕ್ತ ಮಾತುಗಳನ್ನಾಡುತ್ತಿದ್ದಾರೆ. ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಕಾರ್ ಸ್ಫೋಟಕ್ಕೂ ಬಿಹಾರ ಚುನಾವಣೆಗೂ ಏನು ಸಂಬಂಧ? ಕಾಂಗ್ರೆಸ್ ನಾಯಕರು ಸ್ವಲ್ಪ ಸೂಕ್ಷ್ಮಮತೀಯರಾಗಿ ವರ್ತಿಸಲಿ. ಉಗ್ರರಿಗೆ ಇಂಬು ನೀಡುವಂತೆ ಬೇಜವಾಬ್ದಾರಿ ಹೇಳಿಕೆ, ಕೀಳುಮಟ್ಟದ ರಾಜಕೀಯ ಮಾಡುವುದನ್ನು ಬಿಡಬೇಕೆಂದು ಎಂದು ಜಮೀರ್ ಅಹ್ಮದ್‌ಗೆ ಚಾಟಿ ಬೀಸಿದ್ದಾರೆ.ಇದನ್ನೂ ಓದಿ: ಮೇಕೆದಾಟು ಯೋಜನೆಗೆ ಕ್ಯಾತೆ – ತಮಿಳುನಾಡಿನ ಅರ್ಜಿ ವಜಾಗೊಳಿಸಿದ ಸುಪ್ರೀಂ

ದೆಹಲಿಯಲ್ಲಿ ಕಾರ್ ಸ್ಪೋಟದಿಂದ 12 ಜನ ಅಮಾಯಕರು ಮೃತಪಟ್ಟು, ಹಲವರು ಗಾಯಗೊಂಡರೂ ಇವರು ಜೀವದ ಬೆಲೆ ಅರಿಯದವರಂತೆ ಮಾತನಾಡುತ್ತಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ದೆಹಲಿ ಸ್ಫೋಟ-ಭಯೋತ್ಪಾದಕ ಕೃತ್ಯದ ಬಗ್ಗೆ ತನಿಖೆ ನಡೆಯುತ್ತಿದೆ. ಆದರೆ, ಕಾಂಗ್ರೆಸ್ ನಾಯಕರು ಮುಂಚಿತವಾಗಿಯೇ ತೀರ್ಮಾನಕ್ಕೆ ಬಂದು ಬಿಡುತ್ತಿದ್ದಾರೆ. ಬೆಂಗಳೂರು ಕೆಫೆ ಸ್ಫೋಟ, ಪೆಹಲ್ಗಾಮ್ ಭಯೋತ್ಪಾದನಾ ದಾಳಿ ಹೀಗೆ ಪ್ರತಿ ಸಂದರ್ಭದಲ್ಲೂ ಪಾಕಿಸ್ತಾನದ ಮಾದರಿಯಲ್ಲೇ ಹೇಳಿಕೆ ನೀಡುತ್ತಾರೆ ಎಂದು ಹರಿಹಾಯ್ದಿದ್ದಾರೆ.

ದೇಶದಲ್ಲಿ ಎಲ್ಲೇ ಆಗಲಿ ಭಯೋತ್ಪಾದನಾ ದಾಳಿ ನಡೆದಾಗ ಉಗ್ರರನ್ನು ಸೆದೆಬಡಿಯಲು ಪಕ್ಷಾತೀತವಾಗಿ ಬೆಂಬಲಿಸಬೇಕು ಮತ್ತು ಒಗ್ಗಟ್ಟಿನ ಬಲ ಪ್ರದರ್ಶಿಸಬೇಕು. ಉಗ್ರರ ವಿರುದ್ಧ ಒಂದೇ ಗಟ್ಟಿ ಧ್ವನಿ ಮೊಳಗಿಸಬೇಕು. ಆದರೆ ಕಾಂಗ್ರೆಸ್ ನಾಯಕರು ಹೀಗೆ ಕೀಳುಮಟ್ಟದ ರಾಜಕೀಯ ಮಾಡುತ್ತಿರುವುದು ದುರಂತ ಮತ್ತು ದೇಶದ ದೌರ್ಭಾಗ್ಯ ಎಂದು ಆಕ್ರೋಶ ಹೊರಹಾಕಿದ್ದಾರೆ.ಇದನ್ನೂ ಓದಿ: ದಾವಣಗೆರೆ | 150 ಕೋಟಿ ವಂಚನೆ ಪ್ರಕರಣ – ದೂರುದಾರನೇ ಸೈಬರ್‌ ವಂಚಕರ ಗ್ಯಾಂಗ್‌ ಸದಸ್ಯ!

Share This Article