ಮಂಗ್ಳೂರಿಂದ ನಿರ್ಗಮಿಸುವಾಗ ಪ್ರಧಾನಿ ಮೋದಿಗೆ ಸಂಸದ ನಳಿನ್ ಗಿಫ್ಟ್!

Public TV
1 Min Read

ಮಂಗಳೂರು: ಲಕ್ಷದ್ವೀಪಕ್ಕೆ ತೆರಳಲೆಂದು ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ತಡರಾತ್ರಿ ಮಂಗಳೂರಿಗೆ ಬಂದಿಳಿದಿದ್ದು, ಅಲ್ಲಿಂದ ನಿರ್ಗಮಿಸುವಾಗ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಉಡುಗೊರೆಯೊಂದನ್ನು ನೀಡಿದ್ದಾರೆ.

ಶ್ರೀಕ್ಷೇತ್ರ ಧರ್ಮಸ್ಥಳದಿಂದ ರಚಿತವಾದ ಮೋದಿಯ ಧರ್ಮಸ್ಥಳ ಭೇಟಿಯ ಸಚಿತ್ರ ವರದಿಯ ಪುಸ್ತಕವನ್ನು ಪ್ರಧಾನಿ ಮೋದಿಗೆ ಹಸ್ತಾಂತರಿಸಲಾಗಿದೆ. ಬೆಳಗ್ಗೆ ಮಂಗಳೂರು ವಿಮಾನ ನಿಲ್ದಾಣದಿಂದ ನಿರ್ಗಮಿಸುವ ಹೊತ್ತಿಗೆ ಸಂಸದ ನಳಿನ್‍ಕುಮಾರ್ ಕಟೀಲ್ ಪ್ರಧಾನಿಗೆ ಈ ಪುಸ್ತಕ ನೀಡಿದ್ದಾರೆ.

ಧರ್ಮಸ್ಥಳದಿಂದ ರಚಿತವಾಗಿದ್ದು ಅಂದಾಕ್ಷಣ ಖುಷಿಯಿಂದ ಸ್ವೀಕರಿಸಿದ ಮೋದಿ ಸಂಪೂರ್ಣ ಓದೋದಾಗಿ ಹೇಳಿದ್ದಾರೆ. ಕಳೆದ ಅಕ್ಟೋಬರ್ 29ರಂದು ಧರ್ಮಸ್ಥಳ ಕ್ಕೆ ಭೇಟಿ ನೀಡಿದ ಮೋದಿ ಶ್ರೀ ಕ್ಷೇತ್ರದಲ್ಲಿ ಹೆಗ್ಗಡೆ ಕುಟುಂಬದ ಆತಿಥ್ಯ ಸ್ವೀಕರಿಸಿ ಮಂಜುನಾಥನಿಗೆ ವಿಶೇಷ ಪೂಜೆ ಸಲ್ಲಿಸಿದ್ದರು. ನಂತರ ಉಜಿರೆಯಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ರೂಪೇ ಕಾರ್ಡ್ ಬಿಡುಗಡೆಯ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರಧಾನಿಯ ಐತಿಹಾಸಿಕ ಭೇಟಿಯ ಪ್ರತಿಯೊಂದು ಕ್ಷಣವನ್ನು ಪುಸ್ತಕದಲ್ಲಿ ಸಚಿತ್ರ ವರದಿ ಮಾಡಲಾಗಿದ್ದು, ಈಗ ಸ್ವತಃ ನರೇಂದ್ರ ಮೋದಿಯವರಿಗೇ ನೆನಪಿನ ಉಡುಗೊರೆಯಾಗಿ ನೀಡಲಾಗಿದೆ.

ಸೋಮವಾರ ರಾತ್ರಿ ಮಂಗಳೂರಿನ ಸರ್ಕ್ಯೂಟ್ ಹೌಸ್ ನಲ್ಲಿ ತಂಗಿದ್ದ ಮೋದಿ ಬೆಳಗ್ಗೆ 7.30ಕ್ಕೆ ರಸ್ತೆ ಮಾರ್ಗ ಮೂಲಕ ಹೊರಟರು. ಮಂಗಳೂರಿನ ಬಜ್ಪೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ನರೇಂದ್ರ ಮೋದಿ, ಭಾರತೀಯ ವಾಯುಸೇನೆಯ ವಿಶೇಷ ವಿಮಾನದ ಮೂಲಕ ಲಕ್ಷದ್ವೀಪಕ್ಕೆ ಪ್ರಯಾಣಿಸಿದ್ದರು. ಮುಂಜಾಗ್ರತಾ ಕ್ರಮವಾಗಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಕೆಲ ನಿಮಿಷಗಳ ಕಾಲ ತಡೆಹಿಡಿಯಲಾಗಿತ್ತು.

ಪ್ರಧಾನಿ ನರೇಂದ್ರ ಮೋದಿಯವರ ಲಕ್ಷದ್ವೀಪ ಪ್ರವಾಸಕ್ಕೆ ಎರಡು ವಿಶೇಷ ವಿಮಾನಗಳನ್ನು ರೆಡಿ ಮಾಡಲಾಗಿತ್ತು. ಈ ಪೈಕಿ ಒಂದು ವಿಮಾನದ ಮೂಲಕ ಮೋದಿ ಲಕ್ಷದ್ವೀಪಕ್ಕೆ ತೆರಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಲಕ್ಷದ್ವೀಪಕ್ಕೆ ಹಾರಿದ ಕೆಲವೇ ನಿಮಿಷಗಳಲ್ಲಿ ಮತ್ತೊಂದು ವಿಶೇಷ ವಿಮಾನ ಕೂಡ ಲಕ್ಷದ್ವೀಪಕ್ಕೆ ಪ್ರಯಾಣ ಬೆಳೆಸಿದೆ. ಇತ್ತೀಚೆಗೆ ಓಖಿ ಚಂಡಮಾರುತದಿಂದ ಹಾನಿಗೀಡಾದ ಲಕ್ಷದ್ವೀಪದ ಪ್ರದೇಶಗಳಿಗೆ ಭೇಟಿ ನೀಡಿ, ಪುನರ್ವಸತಿ ಕಾರ್ಯಗಳನ್ನು ವೀಕ್ಷಿಸಲಿದ್ದಾರೆ. ಸಂಜೆ ಅಲ್ಲಿಂದ ತಿರುವನಂತಪುರದ ಮೂಲಕ ದೆಹಲಿಗೆ ಪ್ರಯಾಣಿಸಲಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *