ಬೆಂಗಳೂರು ರಸ್ತೆ ಅಗಲೀಕರಣ ಕಾಮಗಾರಿ ತ್ವರಿತಗೊಳಿಸಿ.. ಸಂಚಾರ ದಟ್ಟಣೆ ನಿವಾರಿಸಿ: ಡಿಸಿಎಂಗೆ ಲೆಹರ್‌ ಸಿಂಗ್‌ ಪತ್ರ

By
2 Min Read

ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಬಾಕಿ ಇರುವ ರಸ್ತೆ ಅಗಲೀಕರಣ ಕಾಮಗಾರಿಯನ್ನು ತ್ವರಿತಗೊಳಿಸಿ ಸ್ಥಳೀಯರು ಹಾಗೂ ಪ್ರಯಾಣಿಕರನ್ನು ಸಂಚಾರ ದಟ್ಟಣೆಯಿಂದ ಪಾರು ಮಾಡಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ (D.K.Shivakumar) ಅವರಿಗೆ ಬಿಜೆಪಿ ಸಂಸದ ಲೆಹರ್‌ ಸಿಂಗ್‌ (Lahar Singh Siroya) ಪತ್ರ ಬರೆದು ಒತ್ತಾಯಿಸಿದ್ದಾರೆ.

ಪ್ರತಿದಿನ ಟ್ರಾಫಿಕ್ ಜಾಮ್‌ನಿಂದಾಗಿ ಸಮಸ್ಯೆಗೊಳಗಾಗಿರುವ ಪ್ರಯಾಣಿಕರ ಹಿತದೃಷ್ಟಿಯಿಂದ ಈ ಕುರಿತು ಕ್ರಮ ವಹಿಸುವಂತೆ ಒತ್ತಾಯಿಸಿ ಲೆಹರ್‌ ಸಿಂಗ್‌ ಅವರು ಉಪ ಮುಖ್ಯಮಂತ್ರಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವರಾದ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ನ.25 ರಂದು ಬೆಂಗಳೂರಿಗೆ ಬರಲಿದ್ದಾರೆ ಮೋದಿ

ಬೆಂಗಳೂರಿನ ಹೃದಯ ಭಾಗದಲ್ಲಿರುವ ಪ್ರಮುಖ ರಸ್ತೆಗಳಲ್ಲಿ ಸಂಚರಿಸುವ ಪ್ರಯಾಣಿಕರ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತಂದಿರುವ ಬಿಜೆಪಿ ಸಂಸದ ಲೆಹರ್ ಸಿಂಗ್, ಬೆಂಗಳೂರಿನಲ್ಲಿ ವಿಶೇಷವಾಗಿ ಮೇಖ್ರಿ ವೃತ್ತದಿಂದ ನಗರಕ್ಕೆ ಮತ್ತು ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣಕ್ಕೆ ಪ್ರಯಾಣಿಸುವವರ ಅನುಕೂಲಕ್ಕಾಗಿ ರಸ್ತೆ ಅಗಲೀಕರಣ ಯೋಜನೆಗಳನ್ನು ತ್ವರಿತಗೊಳಿಸುವಂತೆ ಆಗ್ರಹಿಸಿದ್ದಾರೆ.

ಹೆಬ್ಬಾಳ ಕಡೆಯಿಂದ ಮೇಖ್ರಿ ವೃತ್ತದ ಕಡೆಗೆ ಬರುವ ರಸ್ತೆ ವಿಸ್ತಾರವಾಗಿದೆ. ಆದರೆ ಮೇಖ್ರಿ ವೃತ್ತದ ಅಂಡರ್‌ಪಾಸ್‌ ದಾಟಿ ನಗರದ ಕಡೆಗೆ ಬರುವಾಗ 6 ಪಥಗಳಿದ್ದ ರಸ್ತೆ 4 ಪಥಗಳಾಗಿ ಕಿರಿದಾಗುತ್ತದೆ. ಈ ಜಾಗದಲ್ಲಿ ಉಂಟಾಗುವ ಅಡಚಣೆಯು ನಿರಂತರ ಟ್ರಾಫಿಕ್ ಜಾಮ್‌ಗೆ ಕಾರಣವಾಗಿ ವಾಹನಗಳು ದೂರದವರೆಗೆ ಸರತಿಯಲ್ಲಿ ನಿಲ್ಲುವಂತಾಗಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಹಾಗೆಯೇ, ಮೇಖ್ರಿ ವೃತ್ತದಿಂದ ಕಂಟೋನ್ಮೆಂಟ್ ನಿಲ್ದಾಣದವರೆಗೆ ಹೆಚ್ಚು ಸಂಚಾರ ದಟ್ಟಣೆ ಉಂಟಾಗಿ ಬಳ್ಳಾರಿ ರಸ್ತೆಯಲ್ಲಿ ಸಮಸ್ಯೆ ಬಿಗಡಾಯಿಸುತ್ತದೆ. ಈ ಭಾಗದಲ್ಲಿ ರಸ್ತೆ ಅಗಲೀಕರಣ ಯೋಜನೆಗಳಿಗೆ ಬಿಬಿಎಂಪಿಯಿಂದ ಪ್ರಸ್ತಾವನೆ ರೂಪಿಸಿದ್ದರೂ, ಸುಪ್ರೀಂ ಕೋರ್ಟ್‌ನಿಂದ ಅನುಮೋದನೆ ಪಡೆದಿದ್ದರೂ ಕಾಮಗಾರಿ ವಿಳಂಬವಾಗುತ್ತಿದೆ ಎಂದು ಅವರು ಗಮನ ಸೆಳೆದಿದ್ದಾರೆ.

ರಸ್ತೆ ಅಗಲೀಕರಣ ಕಾಮಗಾರಿಯು ಡಿ.ಕೆ.ಶಿವಕುಮಾರ್‌ ಅವರ ಬ್ರ್ಯಾಂಡ್‌ ಬೆಂಗಳೂರಿನ ಗುರಿಗೆ ಪೂರಕವಾಗಿದೆ. ರಸ್ತೆ ಅಗಲೀಕರಣ ಕಾಮಗಾರಿ ಜೊತೆಗೆ ಮೇಖ್ರಿ ವೃತ್ತ ಹಾಗೂ ಕಾವೇರಿ ವೃತ್ತದ ಸುಂದರೀಕರಣ ಕಾಮಗಾರಿ ನಡೆದರೆ, ಅದಕ್ಕೆ ತಮ್ಮ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ಅನುದಾನ ನೀಡುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಕಳೆದ ಬಾರಿ ಬೆಳಗಾವಿಯಿಂದ ಬಿದ್ದಿತ್ತು, ಈ ಸಲ ದುಬೈ‌ನಿಂದ ಸರ್ಕಾರ ಬೀಳುತ್ತೆ: ಆರ್.ಅಶೋಕ್ ಹೊಸ ಬಾಂಬ್

ತ್ವರಿತ ಕ್ರಮಕ್ಕೆ ಸಂಸದರ ಕರೆ
ರಾಜ್ಯಸಭಾ ಸಂಸದರ ಈ ಮನವಿಯು ರಸ್ತೆ ವಿಸ್ತರಣೆ ಯೋಜನೆಗಳಿಗೆ ಸರ್ಕಾರ ಕೂಡಲೇ ಗಮನ ಹರಿಸುವಂತೆ ಕರೆ ನೀಡಿದೆ. ಸಂಚಾರ ದಟ್ಟಣೆಯನ್ನು ನಿವಾರಿಸುವಲ್ಲಿ ಮತ್ತು ಬೆಂಗಳೂರಿನ ನಿವಾಸಿಗಳಿಗೆ ಸುಲಲಿತವಾದ ಪ್ರಯಾಣದ ಅನುಭವ ದೊರಕಿಸಿಕೊಡುವ ಬಗ್ಗೆ ಈ ಪತ್ರ ಪ್ರಸ್ತಾಪಿಸಿದೆ.

Share This Article