ಕಾರವಾರ: ಸಾರ್ವಜನಿಕರಿಗೆ ಗ್ಯಾರಂಟಿ ಎಂಬ ಬಿಸ್ಕೆಟ್ ಹಾಕಿ ಕಾಂಗ್ರೆಸ್ (Congress) ಅಧಿಕಾರಕ್ಕೆ ಬಂದಿದೆ ಎಂದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಸಂಸದ ಬಿ.ವೈ ರಾಘವೇಂದ್ರ (BY Raghavendra) ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೀಗ ಜನರಿಗೆ ಅನ್ನಿಸಿದೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ತಂದು ತಪ್ಪು ಮಾಡಿದ್ದೇವೆ. ಅನೇಕ ವರ್ಷಗಳ ನಂತರ ರಾಜ್ಯಕ್ಕೆ ಬಹಳ ಕೆಟ್ಟ ಪರಿಸ್ಥಿತಿ ಬಂದಿದೆ. ಮದ್ಯದ ಬೆಲೆ ಏರಿಸಿ ಆ ಹಣದಲ್ಲೇ ಗೃಹ ಲಕ್ಷ್ಮಿ ಮೂಲಕ ಮಹಿಳೆಯರಿಗೆ ಎರಡು ಸಾವಿರ ನೀಡುತ್ತಿದ್ದಾರೆ ಎಂದರು.
ಸಮರ್ಥ ಅಧಿಕಾರ ನಡೆಸುವಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ (Congress Govt) ಸಂಪೂರ್ಣ ವಿಫಲವಾಗಿದೆ. ರೈತರ-ಬಡವರ ಅಭಿವೃದ್ಧಿಗೆ ಪೂರಕ ಯೋಜನೆ ನೀಡದೆ ಸಮಯ ವ್ಯರ್ಥದ ಆಡಳಿತ ನಡೆಸುತ್ತಿದೆ. ಸಿಎಂ ಸಿದ್ದರಾಮಯ್ಯ ಕೇವಲ ಪ್ರಧಾನಿ ಮೋದಿ-ಸಂಸದರನ್ನು ದೂರುವ ಕಾರ್ಯ ಮಾಡುತ್ತಿದ್ದಾರೆ. ರಾಜ್ಯ ಬರದಿಂದ ತತ್ತರಿಸಿ ಹೋಗಿದೆ. ಸರ್ಕಾರ ಮಾತ್ರ ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ಹೇಳಿದರು. ಇದನ್ನೂ ಓದಿ: ದೇವರಿಗೆ ಕೈ ಮುಗಿದು ದೇವಸ್ಥಾನದ ಹುಂಡಿಯನ್ನೇ ದೋಚಿದ ಖದೀಮರು
ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳು ಕಳೆದ್ರು ರಾಜ್ಯದ ಜನತೆ ಬಗ್ಗೆ ಚಿಂತನೆ ನಡೆಸುತ್ತಿಲ್ಲ. ಕೇವಲ ಗ್ಯಾರಂಟಿ ಯೋಜನೆ ಬಗ್ಗೆ ಭಾಷಣ ಮಾಡುತ್ತಾ ಸಮಯ ವ್ಯರ್ಥ ಮಾಡುತ್ತಿದ್ದಾರೆ. ಬಡವರ ದೀಪಾವಳಿ (Deepavali) ಸಂತೋಷವನ್ನು ಸರ್ಕಾರ ಕಿತ್ತುಕೊಳ್ಳುತ್ತಿದೆ ಎಂದು ಕಿಡಿಕಾರಿದರು.