ಗಣಪ ನೈವೈದ್ಯ ಪ್ರಿಯ. ಎಷ್ಟು ಭಕ್ಷ್ಯಗಳನ್ನು ಸಲ್ಲಿಸುತ್ತಿರೋ ಅಷ್ಟು ಸುಲಭವಾಗಿ ಗಣಪ ಒಲಿಯುತ್ತಾನೆ ಎಂಬ ನಂಬಿಕೆ ಇದೆ. ಅದರಲ್ಲೂ ಮೋದಕ, ಪಂಚಕಜ್ಜಾಯ, ಕರ್ಜಿಕಾಯಿ, ಚಕ್ಕುಲಿ ಜೊತೆಗೆ ಮೋತಿಚೂರ್ ಲಡ್ಡು ಕೂಡ ಗಣೇಶನಿಗೆ ಅತ್ಯಂತ ಪ್ರಿಯ. ಕೇಸರಿ ಹಾಗೂ ಸಿಹಿಯನ್ನು ಒಳಗೊಂಡ ಮೋತಿಚೂರ್ ಲಡ್ಡು ಮಾಡೋದು ಕೂಡ ಅಷ್ಟೇ ಸುಲಭ. ಹಾಗಿದ್ರೇ ಗಣೇಶನಿಗೆ ಪ್ರಿಯವಾದ ಮೋತಿಚೂರ್ ಲಡ್ಡು ಮಾಡೋದು ಹೇಗೆ ಎಂಬುದನ್ನು ನಾವಿಂದು ತಿಳಿಸಿಕೊಡುತ್ತಿದ್ದೇವೆ.
ಬೇಕಾಗುವ ವಸ್ತುಗಳು:
ಕಡಲೆಹಿಟ್ಟು – 1 ಕಪ್
ಎಣ್ಣೆ – 1 ಕಪ್
ಕೇಸರಿ – ಚಿಟಿಕೆ
ಒಣದ್ರಾಕ್ಷಿ – ಕಾಲು ಕಪ್
ಗೋಡಂಬಿ – ಕಾಲು ಕಪ್
ಸಕ್ಕರೆ – ಒಂದೂವರೆ ಕಪ್
ತುಪ್ಪ – 3ರಿಂದ ನಾಲ್ಕು ಚಮಚ
ಮಾಡುವ ವಿಧಾನ:
*ಮೊದಲು ಒಂದು ಬೌಲ್‌ಗೆ ಜರಡಿ ಹಿಡಿದ ಕಡಲೆಹಿಟ್ಟು ಹಾಕಿ ದಪ್ಪನೆಯ ಹಿಟ್ಟಿನ ರೂಪದಲ್ಲಿ ಕಲೆಸಿಕೊಳ್ಳಿ. ಬಳಿಕ ಗ್ಯಾಸ್ ಮೇಲೆ ಎಣ್ಣೆ ಕಾಯಲು ಇಟ್ಟು ಜರಡಿ ಸೌಟಿನ ಮೇಲೆ ಹಿಟ್ಟನ್ನು ಹಾಕಿ ನಿಧಾನಕ್ಕೆ ಸಣ್ಣ ಸಣ್ಣ ಗುಳ್ಳೆಗಳಂತೆ ಕಡಲೆಹಿಟ್ಟನ್ನು ಕರಿದುಕೊಳ್ಳಿ.
*ಹೊಂಬಣ್ಣ ಬರುವವರೆಗೂ ಕರಿದ ಕಡಲೆಹಿಟ್ಟಿನ ಮಿಕ್ಸರ್ ನ್ನು ಆರಿದ ಬಳಿಕ ಮಿಕ್ಸಿ ಜಾರಿಗೆ ಹಾಕಿ ಒಂದು ರೌಂಡ್ ತಿರುಗಿಸಿ. ಇದರಿಂದ ಕಡಲೆಹಿಟ್ಟಿನ ಕಾಳುಗಳು ಒಡೆದು ಮಿಶ್ರಣ ಸಿದ್ಧವಾಗುತ್ತದೆ.
*ಬಳಿಕ ಒಂದು ದಪ್ಪ ತಳದ ಪಾತ್ರೆಗೆ ಸಕ್ಕರೆ ನೀರು ಹಾಕಿ ಪಾಕ ಮಾಡಿಕೊಳ್ಳಿ. ಈ ಪಾಕಕ್ಕೆ ಚಿಟಿಕೆ ಕೇಸರಿ ಸೇರಿಸಿ.
*ನಂತರ ಒಂದೆಳೆ ಪಾಕವಾಗುತ್ತಿದ್ದಂತೆ ಸಿದ್ಧಪಡಿಸಿದ ಕಡಲೆ ಹಿಟ್ಟಿನ ಕಾಳುಗಳ ಮಿಶ್ರಣವನ್ನು ಸೇರಿಸಿಕೊಂಡು, ಡ್ರೈಫ್ರೂಟ್ಸ್‌ಗಳನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ತಣಿಯಲು ಬಿಡಿ.
*ಕೊಂಚ ತಣ್ಣಗಾಗುತ್ತಿದ್ದಂತೆ ಕೈಗೆ ತುಪ್ಪ ಸವರಿಕೊಂಡು ಉಂಡೆಕಟ್ಟಿದರೇ ನೋಡಲು ಆಕರ್ಷಕವಾದ ಹಾಗೂ ರುಚಿಕರವಾದ ಮೋತಿಚೂರ್ ಲಡ್ಡು ಸವಿಯಲು ಸಿದ್ಧ.