ಕಲಬುರಗಿ: ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಪಡಿಸಿದಳು ಎಂಬ ಕಾರಣಕ್ಕೆ ಸ್ವಂತ ಮಗಳನ್ನೇ ಕೊಲೆ ಮಾಡಲು ತಾಯಿಯೊಬ್ಬಳು ಪ್ರಿಯಕರನೊಂದಿಗೆ ಸೇರಿ ಪ್ಲಾನ್ ಮಾಡಿರುವ ಆಘಾತಕಾರಿ ಘಟನೆ ತಾಲೂಕಿನ ಧೂತ್ತರಗಾಂಗ ಗ್ರಾಮದಲ್ಲಿ ನಡೆದಿದೆ.
ತನ್ನ ಸ್ವಂತ ಮಗಳನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ ಮಹಿಳೆ ಹೆಸರು ಹೀರಾಬಾಯಿ. ಈಕೆ ಇದೇ ಗ್ರಾಮದ ಭೀಮಣ್ಣ ಎಂಬ ವ್ಯಕ್ತಿಯ ಜೊತೆ ಅನೈತಿಕ ಸಂಬಂಧ ಹೊಂದಿದ್ದು, ಈ ವಿಷಯ ತಿಳಿದ ಮಗಳು ನಾಗಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ಕೋಪಗೊಂಡ ಹೀರಾಬಾಯಿ ಮಗಳನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಾಳೆ.
ತಾಯಿಯ ಅನೈತಿಕ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದಕ್ಕೆ ಹೀರಾಬಾಯಿ, ನೀನೂ ಬೇಕಾದರೂ ಆತನ ಜೊತೆ ಮಲಗು. ಆದರೆ ತನ್ನ ಕೃತ್ಯದ ಕುರಿತು ಯಾರಿಗೂ ಹೇಳಬೇಡ ಎಂದು ಹೇಳಿದ್ದಾಳೆ. ಇನ್ನು ಭೀಮಣ್ಣ ಸಹ ನಾಗಮ್ಮ ಅವರಿಗೆ ತನ್ನ ಜೊತೆ ಮಲಗಲು ಹೇಳಿದ್ದಾನೆ.
ತಾಯಿಯ ಆಕ್ರಮ ಸಂಬಂಧವನ್ನು ತಪ್ಪಿಸಲು ನಾಗಮ್ಮ ಆಕೆಯ ಮೊಬೈಲ್ ಕಸಿದುಕೊಂಡಿದ್ದಾರೆ. ಆದರೆ ಹೀರಾಬಾಯಿ ಮಗಳ ಮೊಬೈಲ್ ನಿಂದ ತನ್ನ ಪ್ರಿಯಕರನಿಗೆ ಕರೆ ಮಾಡಿ ಕೊಲೆ ಮಾಡಲು ಸೂಚಿಸಿದ್ದಾಳೆ. ನಂತರ ಮೊಬೈಲ್ ಸಂಭಾಷಣೆ ಕೇಳಿದ ವೇಳೆ ತಾಯಿಯ ಸಂಚು ಬೆಳಕಿಗೆ ಬಂದಿದೆ. ಈ ಕುರಿತು ನಾಗಮ್ಮ ಪೊಲೀಸ್ ಠಾಣೆಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನಲಾಗಿದೆ.
ಈಗಾಗಲೇ ನಾಗಮ್ಮರಿಗೆ ಮದುವೆಯಾಗಿದ್ದು, ಗಂಡನ ಕಿರುಕುಳದಿಂದ ನೊಂದ ಆಕೆ ತಾಯಿಯ ಬಳಿ ಆಶ್ರಯ ಪಡೆದಿದ್ದರು. ಆದರೆ ಸದ್ಯ ತಾಯಿಯೇ ಕೊಲೆ ಮಾಡಲು ಸಂಚು ರೂಪಿಸಿರುವುದು ನಾಗಮ್ಮಗೆ ಸಂಕಷ್ಟವನ್ನು ಉಂಟು ಮಾಡಿದೆ. ಆದರೆ ಪ್ರಕರಣದ ದೂರು ಪಡೆದು ನಾಗಮ್ಮರಿಗೆ ರಕ್ಷಣೆ ನೀಡಬೇಕಾದ ಪೊಲೀಸರು ಭೀಮಣ್ಣನ ಪ್ರಭಾವಕ್ಕೆ ಒಳಗಾಗಿ ದೂರು ದಾಖಲಿಸಿಕೊಂಡಿಲ್ಲ ಎಂದು ಆರೋಪ ಕೇಳಿಬಂದಿದೆ.