ನಿರುದ್ಯೋಗದಿಂದ ಬೇಸತ್ತು ಸಾಯೋದೇ ಲೇಸು ಅನ್ನುತ್ತಿದ್ದಳು- ಸಂಸತ್ತಿನ ಹೊರಗಡೆ ಬಂಧಿಸಲ್ಪಟ್ಟವಳ ತಾಯಿ ಮಾತು

Public TV
1 Min Read

ಚಂಡೀಗಢ: ಆಕೆ ಚೆನ್ನಾಗಿ ಓದಿದ್ದು, ಉದ್ಯೋಗದಿಂದ ವಂಚಿತಳಾಗಿದ್ದಳು. ಎಲ್ಲಿಯೂ ಕೆಲಸ ಸಿಗುತ್ತಿಲ್ಲ ಎಂದು ಬೇಸರಗೊಂಡಿದ್ದಳು. ಅಲ್ಲದೆ ಇದಕ್ಕಿಂತ ಸಾಯುವುದೇ ಬೆಸ್ಟ್ ಅಂತ ಹೇಳುತ್ತಿದ್ದಳು ಎಂದು ಸಂಸತ್ತಿನ ಹೊರಗಡೆ ಬಂಧಿಸಲ್ಪಟ್ಟಿರುವ ನೀಲಂ ತಾಯಿ ಹೇಳಿದ್ದಾರೆ.

ಘಟನೆಯ (Security breach in Lok Sabha)  ಬಳಿಕ ಹರಿಯಾಣದ ಜಿಂದ್‌ ಪ್ರದೇಶದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಗಳು ಯಾವಾಗಲೂ ಉದ್ಯೋಗ ಸಿಗುತ್ತಿಲ್ಲ ಎಂದು ಚಿಂತಿತಳಾಗಿದ್ದಳು. ಇಂದು ಆಕೆಯ ಜೊತೆ ಮಾತನಾಡಿದ್ದೇನೆ. ಆದರೆ ಆಕೆ ದೆಹಲಿ ಘಟನೆಯ ಬಗ್ಗೆ ಹೇಳಿಲ್ಲ. ನಾನು ಇಷ್ಟೆಲ್ಲಾ ಓದಿದರೂ ನನಗೆ ಕೆಲಸ ಸಿಗುತ್ತಿಲ್ಲ. ಹೀಗಾಗಿ ಕೆಲಸ ಇಲ್ಲದೇ ಬದುಕುವುದಕ್ಕಿಂತ ಸಾಯುವುದೇ ಒಳ್ಳೆಯದು ಎಂದು ಹೇಳಿರುವುದಾಗಿ ನೀಲಂ ತಾಯಿ ಹೇಳಿದ್ದಾರೆ.

ನೀಲಂ (Neelam) ಸಹೋದರ ಮಾತನಾಡಿ, ಅವಳು ದೆಹಲಿಗೆ ಹೋಗಿದ್ದಾಳೆಂದು ನಮಗೆ ತಿಳಿದಿರಲಿಲ್ಲ. ಅವಳು ತನ್ನ ಅಧ್ಯಯನಕ್ಕಾಗಿ ಹಿಸಾರ್‍ನಲ್ಲಿದ್ದಾಳೆಂದು ನಮಗೆ ತಿಳಿದಿತ್ತು. ನಿನ್ನೆಯಷ್ಟೇ ನಮ್ಮನ್ನು ಭೇಟಿ ಮಾಡಿ ವಾಪಸ್ಸಾಗಿದ್ದಳು. ಬಿಎ, ಎಂಎ, ಬಿಎಡ್, ಎಂಎಡ್, ಸಿಟಿಇಟಿ, ಎಂಫಿಲ್ ಮತ್ತು ನೆಟ್ ವಿದ್ಯಾರ್ಹತೆ ಪಡೆದಿದ್ದಾಳೆ. ನಿರುದ್ಯೋಗ ಸಮಸ್ಯೆ ಕುರಿತು ಹಲವು ಬಾರಿ ಪ್ರಸ್ತಾಪಿಸಿದ್ದಳು. ರೈತರ ಪ್ರತಿಭಟನೆಯಲ್ಲೂ ಪಾಲ್ಗೊಂಡಿದ್ದಳು ಎಂದಿದ್ದಾರೆ.

ಇಂದು ಸಂಸತ್ತಿನ (Smoke Bomb in Loksabha) ಒಳಗಡೆ ಹಾಗೂ ಹೊರಗಡೆ ಎರಡು ಪ್ರತ್ಯೇಕ ಘಟನೆ ನಡೆದಿದೆ. ಒಳಗಡೆ ಕಲಾಪ ನಡೆಯುತ್ತಿದ್ದ ಸಂದರ್ಭದಲ್ಲಿ ಮೈಸೂರು ಮೂಲದ ಮನೋರಂಜನ್ ಹಾಗೂ ಸಾಗರ್ ಶರ್ಮಾ ಎಂಬಿಬ್ಬರು ಯುವಕರು ಗ್ಯಾಲರಿಯಿಂದ ಜಿಗಿದು ಏಕಾಏಕಿ ಸ್ಮೋಕ್ ಬಾಂಬ್ ಹಾಕಿದ್ದಾರೆ. ಇದರಿಂದ ಕಲಾಪದಲ್ಲಿ ತಲ್ಲೀನರಾಗಿದ್ದ ಸಂಸದರೆಲ್ಲರೂ ಒಂದು ಬಾರಿ ಗಲಿಬಿಲಿಗೊಂಡಿದ್ದಾರೆ. ಅಲ್ಲದೇ ಆರೋಪಿಗಳಲ್ಲಿ ಒಬ್ಬನಾದ ಸಾಗರ್ ಶರ್ಮಾನನ್ನು ಹಿಡಿದು ಥಳಿಸಿದ್ದಾರೆ.

ಇತ್ತ ಸಂಸತ್ತಿನ ಹೊರಗಡೆ ಪ್ರತಿಭಟನೆ ನಡೆಸುತ್ತಿದ್ದ ಹಿಸಾರ್‍ನ ನೀಲಂ (42) ಮತ್ತು ಮಹಾರಾಷ್ಟ್ರದ ಲಾತೂರ್‍ನ ಅಮೋಲ್ ಶಿಂಧೆ (25) ಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

Share This Article