ಮಗು ಬೇಕು ಮಗು ಎಂದು ಸಾವಿನ ದವಡೆಯಲ್ಲಿರುವ ತಾಯಿಯ ಅಳಲು!

Public TV
1 Min Read

ಹಾಸನ: ಎರಡೂ ಕಿಡ್ನಿ ವೈಫಲ್ಯವಾಗಿದ್ದು ತಾನು ಕಣ್ಮುಚ್ಚುವ ಮುನ್ನ ತನ್ನ ಕಂದನನ್ನೊಮ್ಮೆ ನೋಡಿ ಕಣ್ತುಂಬಿಕೊಳ್ಳಬೇಕು ಎಂಬ ಮಹಿಳೆ ಆಸೆಪಟ್ಟಿದ್ದಾರೆ. ಆದರೆ ಕಳೆದೊಂದು ವರ್ಷದಿಂದ ಎಷ್ಟೇ ಪ್ರಯತ್ನ ಪಟ್ಟರೂ ತಾನೇ ಹಡೆದ ಮಗುವನ್ನು ಆಕೆ ನೋಡಲಾಗುತ್ತಿಲ್ಲ. ಬೇಕು ಅಂತಲೇ ತಾಯಿ-ಮಗನನ್ನು ಬೇರ್ಪಡಿಸಿದ್ದಾರೆ. ನನಗೆ ನನ್ನ ಮಗುವನ್ನು ತೋರಿಸಿ ಎಂದು ನೋವಿನಲ್ಲೂ ಕಣ್ಣೀರು ಹಾಕುತ್ತಿದ್ದಾರೆ.

ರೂಪಶ್ರೀ ನತದೃಷ್ಟ ತಾಯಿ. 2 ವರ್ಷಗಳ ಹಿಂದೆ ಆಲೂರು ತಾಲೂಕು ರಾಜನಹಳ್ಳಿಯ ಮಹೇಶ್‍ನೊಂದಿಗೆ ರೂಪಶ್ರೀ ಮದುವೆಯಾಗಿದ್ದರು. ಮೊದಲ ಮಗು ಜನಿಸಿದ ನಂತರ ಮತ್ತೊಂದು ಮಗುವಿಗೆ ಅಂತರ ಇರಲಿ ಎಂದು ವೈದ್ಯರು ಹೇಳಿದ್ದರೂ, ರೂಪಶ್ರೀ ಗರ್ಭಿಣಿಯಾಗಿದ್ದರು. 2ನೇ ಮಗುವಾದರೆ ತಾಯಿ ಜೀವಕ್ಕೆ ಅಪಾಯ ಎಂದು ವೈದ್ಯರು ಹೇಳಿದ ಬಳಿಕ ರೂಪಶ್ರೀಗೆ ಶಸ್ತ್ರಚಿಕಿತ್ಸೆ ಮಾಡಿಸಲಾಯಿತು. ಆಗಲೇ ರೂಪಶ್ರೀಗೆ ಎರಡೂ ಕಿಡ್ನಿ ವೈಫಲ್ಯವಾಗಿ ಎಂಬ ಆಘಾತಕಾರಿ ಸುದ್ದಿ ತಿಳಿಯಿತ್ತು. ಅಲ್ಲಿಂದ ಇಲ್ಲಿಯವರೆಗೂ ರೂಪಶ್ರೀಗೆ ಆಸ್ಪತ್ರೆಯೇ ವಾಸದ ಮನೆಯಾಗಿದೆ.

ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೂಪಶ್ರೀಗೆ ತನ್ನ ಒಬ್ಬನೇ ಮಗ ಲಲಿತ್ ಕುಮಾರ್ ನನ್ನು ಒಂದು ಬಾರಿ ನೋಡೋ ಆಸೆಯಾಗಿದೆ. ಅದಕ್ಕಾಗಿ ಮಗ ಬೇಕು, ಮಗಬೇಕು ಅಂತ ರೂಪಶ್ರೀ ಒಂದೇ ಸಮನೆ ಹಲುಬುತ್ತಿದ್ದಾರೆ. ಯಾವಾಗ ಸಾಯುತ್ತೇನೋ ಗೊತ್ತಿಲ್ಲ. ಅಷ್ಟರೊಳಗೆ ತನ್ನ ಮಗನನ್ನು ಒಮ್ಮೆ ಒಡಲಲ್ಲಿ ಮಲಗಿಸಿ ಮುದ್ದಾಡಬೇಕು ಅಂತ ತನ್ನ ಸುತ್ತಮುತ್ತ ಇರೋ ರೋಗಿಗಳ ಬಳಿ ಹೇಳಿಕೊಂಡು ಕಣ್ಣೀರಿಡುತ್ತಿದ್ದಾರೆ.

ರೂಪಶ್ರೀ ತಂದೆ ಹೆಸರಿನಲ್ಲಿ 2 ಎಕರೆ ಆಸ್ತಿಯಿದೆ. ಅದರಲ್ಲಿ ಪಾಲು ಬೇಕು ಎಂದು ದುರಾಸೆಗೆ ಬಿದ್ದಿರುವ ಪತಿ ಮಹೇಶ್ ಮತ್ತು ಆತನ ಮನೆಯವರು, ತಾಯಿಯಿಂದ ಮಗುವನ್ನು ಬೇರ್ಪಡಿಸಿ ಕೊಡಬಾರದ ಕಿರುಕುಳ ಕೊಡುತ್ತಿದ್ದಾರೆ ಎಂದು ರೂಪಶ್ರಿ ಪೋಷಕರು ಆರೋಪಿಸಿದ್ದು, ಹಾಸನ ನಗರ ಠಾಣೆಯಲ್ಲಿ ದೂರು ಕೂಡ ದಾಖಲಿಸಿದ್ದಾರೆ. ಪತ್ನಿ ಅನಾರೋಗ್ಯದಿಂದ ನರಳುತ್ತಿದ್ದರೂ ಒಮ್ಮೆಯೂ ಆಸ್ಪತ್ರೆಯತ್ತ ಪತಿ ಮಹಾಶಯ ಸುಳಿಯದ ಕಾರಣ, ಈಗಾಗಲೇ 2 ಲಕ್ಷ ಖರ್ಚು ಮಾಡಿರುವ ಹೆತ್ತವರೇ ಮಗಳನ್ನು ಆರೈಕೆ ಮಾಡುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Share This Article
Leave a Comment

Leave a Reply

Your email address will not be published. Required fields are marked *