ಅತ್ತೆಯನ್ನೇ ಕಿಡ್ನಾಪ್ ಮಾಡಿ ತಲೆ ಬೋಳಿಸಿದ ಅಳಿಯ

Public TV
2 Min Read

-ತಮಿಳುನಾಡಿನಿಂದ ತುಳುನಾಡಿಗೆ ಬಂದ ಸಂತ್ರಸ್ತೆ

ಮಂಗಳೂರು: ತನ್ನ ಪತ್ನಿಯ ತಾಯಿಯನ್ನು ಕಿಡ್ನಾಪ್ ಮಾಡಿ ಆಕೆಯ ತಲೆಯನ್ನು ಬೋಳಿಸಿ ಚಿತ್ರಹಿಂಸೆ ನೀಡಿದ ಅಳಿಯನ ವಿರುದ್ಧ ಮಂಗಳೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಲತಃ ತಮಿಳುನಾಡಿನವರಾದ ಕಲಾವತಿ ಎಂಬವರು ಬೆಂಗಳೂರಿನಲ್ಲಿ ವಾಸವಾಗಿದ್ದರು. ತಮಿಳುನಾಡು ಮೂಲದ ಚಂದ್ರಶೇಖರ್ ಎಂಬವರ ಜೊತೆ ಕಲಾವತಿ ತನ್ನ ಮಗಳನ್ನು ಮದುವೆ ಮಾಡಿಕೊಟ್ಟಿದ್ದರು. ಆದರೆ ಇಬ್ಬರ ನಡುವೆ ಮನಸ್ತಾಪ ಬಂದು ಇದು ಕೋರ್ಟ್ ಮೆಟ್ಟಿಲೇರಿತ್ತು. ಇದರಿಂದ ಆಗಾಗ ಕೋರ್ಟ್ ಕಚೇರಿ ಅಲೆಯುವ ಪರಿಸ್ಥಿತಿ ಈ ಕುಟುಂಬಕ್ಕೆ ಎದುರಾಗಿತ್ತು. ಈ ವ್ಯಾಜ್ಯದ ಹಿನ್ನೆಲೆಯಲ್ಲಿ ಕಳೆದ 15 ದಿನಗಳ ಹಿಂದೆ ಕಲಾವತಿ ಅವರನ್ನು ಚಂದ್ರಶೇಖರ್ ಗೂಂಡಾಗಳೊಂದಿಗೆ ಕಿಡ್ನಾಪ್ ಮಾಡಿಸಿದ್ದನು ಎನ್ನಲಾಗಿದೆ.

ಕಿಡ್ನಾಪ್ ಮಾಡಿದ 15 ಜನರ ತಂಡ ಈಕೆಯನ್ನು ತಮಿಳುನಾಡಿನ ತಿರುಪ್ಪುರದಲ್ಲಿ ಕೂಡಿ ಹಾಕಿ, ಈಕೆಯ ತಲೆಯನ್ನು ಬೋಳಿಸಿ ಚಿತ್ರಹಿಂಸೆ ನೀಡಿದ್ದಾರೆ. ನಂತರ ಕಲಾವತಿಯ ಆರೋಗ್ಯ ತೀರಾ ಹದಗೆಟ್ಟಿದ್ದರಿಂದ ನಿನ್ನನ್ನು ಊರಿಗೆ ಕಳುಹಿಸುತ್ತೇನೆ ಎಂದು ಪಾಲಕ್ಕಾಡ್ ರೈಲ್ವೆ ಸ್ಟೇಷನ್‍ಗೆ ಕರೆದುಕೊಂಡು ಬಂದಿದ್ದಾರೆ. ಅಲ್ಲಿ ತಮಿಳುನಾಡಿನ ರೈಲು ಎಂದು ಸುಳ್ಳು ಹೇಳಿ ಮಂಗಳೂರಿನ ರೈಲನ್ನು ಹತ್ತಿಸಿದ್ದಾರೆ. ಫೆ. 22ರಂದು ಮಂಗಳೂರು ರೈಲ್ವೆ ನಿಲ್ದಾಣಕ್ಕೆ ಬಂದು ಇಳಿದಿದ್ದಾರೆ. ನಂತರ ಮೂರು ದಿನ ರೈಲ್ವೆ ನಿಲ್ದಾಣದಲ್ಲೇ ಉಪವಾಸ ಇದ್ದುಕೊಂಡು ಕಾಲ ಕಳೆದು ಬಳಿಕ ಮಂಗಳೂರಿನಲ್ಲಿರುವ ಜಿಲ್ಲಾ ನ್ಯಾಯಾಲಯಕ್ಕೆ ಬಂದಿದ್ದಾರೆ.

ರೈಲು ನಿಲ್ದಾಣದಿಂದ ನಡೆದುಕೊಂಡೇ ನ್ಯಾಯಾಲಯಕ್ಕೆ ಬಂದು ಅಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯೆ ಎ.ಜಿ ಶಿಲ್ಪಾ ಅವರನ್ನು ಸಂಪರ್ಕಿಸಿ, ಕಮಲ ತನ್ನ ಕಷ್ಟಗಳನ್ನು ಹೇಳಿಕೊಂಡಿದ್ದಾರೆ. ಇನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಇವರ ಬಗ್ಗೆ ವಿಚಾರಿಸಿದ್ದಾರೆ. ಕಲಾವತಿಗೆ ಉಚಿತ ಕಾನೂನು ಸಲಹೆಗಳನ್ನು ನೀಡಿದ್ದಾರೆ. ಬಳಿಕ ಒಬ್ಬ ವಕೀಲೆಯನ್ನು ನೇಮಿಸಿ, ಬಳಿಕ ವರ್ತಮಾನಗಳನ್ನು ಸ್ವೀಕರಿಸಿ ಎಂದು ಮಂಗಳೂರು ಮಹಿಳಾ ಪೊಲೀಸರಿಗೆ ತಿಳಿಸಿದ್ದಾರೆ.

ಸದ್ಯ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ವೃದ್ಧೆಯ ಬಳಿ ಅಳಿಯ ಚಂದ್ರಶೇಖರನ ವಿಳಾಸ ಕೂಡ ಸರಿಯಾಗಿ ಗೊತ್ತಿಲ್ಲ. ಫೋನ್ ನಂಬರ್ ಮರೆತುಹೋಗಿದೆ. ಯಾವ ಗುರುತಿನ ಚೀಟಿಗಳು ಕೂಡ ಇಲ್ಲಿ. ಹೀಗಾಗಿ ಪೊಲೀಸರು ಪಾಪಿ ಚಂದ್ರಶೇಖರ್ ನನ್ನು ಹಿಡಿದು ಈಕೆಗೆ ನ್ಯಾಯ ಕೊಡಿಸುವ ಅವಶ್ಯಕತೆಯಿದೆ.

Share This Article
Leave a Comment

Leave a Reply

Your email address will not be published. Required fields are marked *