ರೈಲ್ವೆ ಹಳಿಯ ಬಳಿ ಮನಕಲಕುವ ಘಟನೆ: ಮೃತಪಟ್ಟ ಅಮ್ಮನ ಎದೆಹಾಲು ಕುಡಿಯಲು ಯತ್ನಿಸಿತು ಕಂದಮ್ಮ

Public TV
1 Min Read

ಭೋಪಾಲ್: ತನ್ನ ಅಮ್ಮ ಮೃತಪಟ್ಟಿದ್ದಾಳೆ ಅಂತಾ ತಿಳಿಯದ ಪುಟ್ಟ ಮಗುವೊಂದು ತಾಯಿಯ ಎದೆ ಹಾಲು ಕುಡಿಯಲು ಯತ್ನಿಸುತ್ತಿದ್ದ ಮನಕುಲಕುವ ಘಟನೆಯೊಂದು ಮಧ್ಯಪ್ರದೇಶದಲ್ಲಿ ನಡೆದಿದೆ.

ಘಟನೆಯ ಫೋಟೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಫೋಟೋ ನೋಡಿದರೆ ಎಂಥವರ ಕಣ್ಣಲ್ಲೂ ನೀರು ತರಿಸುವಂತಿದೆ.

ಏನಿದು ಘಟನೆ?: ಮಧ್ಯಪ್ರದೇಶ ರಾಜಧಾನಿ ಭೋಪಾಲ್ ನಿಂದ ಸುಮಾರು 250 ಕಿ.ಮೀ ದೂರದ ದಮೋಹ್ ಎಂಬಲ್ಲಿ ರೈಲ್ವೇ ಹಳಿ ಬಳಿ ಮಹಿಳೆಯ ಶವ ಪತ್ತೆಯಾಗಿದೆ. ಶವದ ಪಕ್ಕದಲ್ಲೇ ಒಂದು ವರ್ಷದ ಪಟ್ಟ ಮಗುವೊಂದು ಕುಳಿತು ತನ್ನ ಅಮ್ಮನ ಎದೆ ಹಾಲು ಕುಡಿಯಲು ಪ್ರಯತ್ನಿಸುತ್ತಿತ್ತು. ತನ್ನ ತಾಯಿ ಕೊಟ್ಟಿರಬಹುದಾದ ಬಿಸ್ಕೆಟ್‍ವೊಂದನ್ನ ಕೂಡ ಮಗು ತಿನ್ನುತ್ತಿತ್ತು. ಇದನ್ನ ನೋಡಿದ ಕೆಲ ಪ್ರತ್ಯಕ್ಷದರ್ಶಿಗಳು ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.

ರೈಲಿನಿಂದ ಕೆಳಗೆ ಬಿದ್ದು ಅಥವಾ ರೈಲು ಡಿಕ್ಕಿಯಾಗಿ ಮಹಿಳೆ ಸಾವನಪ್ಪಿರಬಹುದು ಅಂತಾ ಪೊಲಿಸರು ಶಂಕೆ ವ್ಯಕ್ತಪಡಿಸಿದ್ದಾರೆ. ಮಹಿಳೆಯ ತಲೆಯಲ್ಲಿ ಗಾಯದ ಗುರುತುಗಳು ಪತ್ತೆಯಾಗಿದೆ. ತಾಯಿ ಮಗುವನ್ನು ಹಿಡಿದುಕೊಂಡಿದ್ದರಿಂದ ಮಗು ಬಚಾವಾಗಿರಬಹುದು ಎಂದು ಊಹಿಸಲಾಗಿದೆ. ಅಧಿಕಾರಿಗಳು ಹೇಳೋ ಪ್ರಕಾರ ರೈಲು ಡಿಕ್ಕಿಯಾದ ನಂತರ ತಾಯಿಗೆ ಕೆಲ ಕಾಲ ಪ್ರಜ್ಞೆ ಇದ್ದು, ತನ್ನ ಮಗುವಿಗೆ ಹಾಲುಣಿಸುವ ಪ್ರಯತ್ನ ಮಾಡಿರಬೇಕು ಎನ್ನಲಾಗಿದೆ.

ಪೊಲೀಸರು ಹಾಗೂ ಅಧಿಕಾರಿಗಳು ತಾಯಿಯ ಶವವನ್ನ ಅಲ್ಲಿಂದ ತೆಗೆದುಕೊಂಡು ಹೋದಾಗ ಮಗುವಿನ ಅಳು ಕಂಡು ಮಮ್ಮಲ ಮರುಗಿದ್ದಾರೆ.

ಮತ್ತೊಂದು ದುರಂತ ಅಂದ್ರೆ ಮಗು ಮತ್ತು ಮೃತ ತಾಯಿಯನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದ್ರೆ ಅಲ್ಲಿ ಮಗುವನ್ನು ಸೇರಿಸಿಕೊಳ್ಳಲು ಕೇವಲ 10 ರೂ. ಕೊಟ್ಟು ಅಡ್ಮಿಶನ್ ಮಾಡಿಕೊಳ್ಳಲು ಯಾರೊಬ್ಬರೂ ಮುಂದೆ ಬಂದಿಲ್ಲ. ನಂತರ ವಾರ್ಡ್ ಬಾಯ್ ಹಣ ಕೊಟ್ಟಿದ್ದರಿಂದ ಮಗುವನ್ನ ಆಸ್ಪತ್ರೆಗೆ ಸೇರಿಸಿಕೊಳ್ಳಲಾಗಿದೆ. ಸದ್ಯ ಮಗು ಮಕ್ಕಳ ರಕ್ಷಣಾ ಕೇಂದ್ರದಲ್ಲಿದ್ದು, ಮಗುವಿನ ಕುಟುಂಬಸ್ಥರು ಅಥವಾ ಸಂಬಂಧಿಕರಾದ ಯಾರಾದ್ರೂ ಬರಬಹುದು ಎಂದು ಅಧಿಕಾರಿಗಳು ಎದುರುನೋಡುತ್ತಿದ್ದಾರೆ.

ಮಹಿಳೆಯನ್ನ ಗುರುತಿಸಲು ನಡೆಸಿದ ಪ್ರಯತ್ನದಲ್ಲಿ ಪೊಲೀಸರಿಗೆ ಮಹಿಳೆಯ ಪಕ್ಕದಲ್ಲಿ ಬಿದ್ದಿದ್ದ ಪರ್ಸ್‍ವೊಂದು ಸಿಕ್ಕಿದೆ.

Share This Article
Leave a Comment

Leave a Reply

Your email address will not be published. Required fields are marked *