ಹೈದರಾಬಾದ್: ಮಗಳನ್ನು ಕೊಲೆ ಮಾಡಿ ನಂತರ ತಾಯಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರ ಪ್ರದೇಶದ ಗುಂಟೂರ್ ನಗರದಲ್ಲಿ ನಡೆದಿದೆ.
ಕೀರ್ತಿಕಾ ತಾಯಿಯಿಂದಲೇ ಕೊಲೆಯಾದ ದುರ್ದೈವಿ. ಸ್ವಪ್ನ ಆತ್ಮಹತ್ಯೆಗೆ ಶರಣಾದ ತಾಯಿ. ಸ್ವಪ್ನ 2012 ರಲ್ಲಿ ಶ್ರೀನಿವಾಸ್ ರಾವ್ ಅವರನ್ನು ಮದುವೆಯಾಗಿದ್ದರು. ಮದುವೆಯಾಗಿ ಮೂರು ವರ್ಷ ಹೈದರಾಬಾದ್ ನಲ್ಲಿ ಕೆಲಸ ಮಾಡುತ್ತಿದ್ದರು. ನಂತರ ಈ ದಂಪತಿ ಎರಡು ವರ್ಷಗಳ ಹಿಂದೆ ಗುಂಟೂರಿಗೆ ಬಂದು ನೆಲೆಸಿದ್ದರು.
ಈ ದಂಪತಿ ಗುಂಟೂರಿಗೆ ಬಂದ ಮೇಲೆ ಪತಿಗೆ ಉದ್ಯೋಗವಿಲ್ಲದೆ ಮನೆಯಲ್ಲಿಯೇ ಇದ್ದರು. ಈ ನಡುವೆ ಪತಿಯ ಆರೋಗ್ಯ ಕೆಟ್ಟಿತ್ತು. ಅಷ್ಟೇ ಅಲ್ಲದೇ ತಂದೆಗೆ ಬಂದಿದ್ದ ಕಾಯಿಲೆ ಮಗಳು ಕೀರ್ತಿಕಾಗೂ ಬರುತ್ತದೆ. ಬಳಿಕ ಸ್ವಪ್ನ ಮಗಳಿಗೆ ಒಂದು ಬಾರಿ ಆಪರೇಷನ್ ಮಾಡಿಸುತ್ತಾರೆ. ಆದರೆ ಮಗಳು ಸಂಪೂರ್ಣವಾಗಿ ಚೇತರಿಸಿಕೊಳ್ಳ ಬೇಕಾದರೆ ಆಕೆಗೆ 10 ವರ್ಷ ಇದ್ದಾಗ ಇನ್ನೊಂದು ಬಾರಿ ಆಪರೇಷನ್ ಮಾಡಿಸಬೇಕಾಗಿತ್ತು.
ಮಗಳಿಗೆ ಆಪರೇಷನ್ ಮಾಡಿಸಲು ಹಣದ ಸಮಸ್ಯೆ ಎದುರಾಗುತ್ತದೆ. ಜೊತೆಗೆ ಪತಿಯನ್ನು ನೋಡಿಕೊಳ್ಳಲು ಆರ್ಥಿಕವಾಗಿ ಸಂಕಷ್ಟ ಉಂಟಾಗುತ್ತದೆ. ಆದ್ದರಿಂದ ಸ್ವಪ್ನ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗುತ್ತಾರೆ. ಆದರೆ ತಾನು ಹೋದ ಮೇಲೆ ಮಗಳನ್ನು ನೋಡಿಕೊಳ್ಳುವವರು ಯಾರು ಇಲ್ಲ ತಿಳಿದು ಮೊದಲು ಮಗಳನ್ನು ಕೊಲೆ ಮಾಡಿ ನಂತರ ತಾನು ನೇಣಿಗೆ ಶರಣಾಗಿದ್ದಾರೆ.
ಈ ಘಟನೆ ಸಂಬಂಧ ಪಟ್ಟಾಭಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.