ಚಿಕ್ಕಬಳ್ಳಾಪುರ: ಗೌರಿ ಗಣೇಶ ಹಬ್ಬದ ಸಂಭ್ರಮದಲ್ಲಿರಬೇಕಾದ ಮನೆಯಲ್ಲಿ ಸೂತಕ ಛಾಯೆ ಆವರಿಸಿದೆ. ಮನೆಯ ಮುಂದೆ ಒಣಗಿ ಹಾಕಿದ್ದ ಬಟ್ಟೆ ತೆಗೆದುಕೊಳ್ಳುವಾಗ ವಿದ್ಯುತ್ ಶಾಕ್‌ಗೆ ತಾಯಿ ಮತ್ತು ಮಗ ಬಲಿಯಾಗಿರುವ ಘಟನೆ ನಡೆದಿದೆ.
ಲಲಿತಮ್ಮ ಮತ್ತು ಮಲಮಗ ಸಂಜಯ್ ಮನೆಯ ಎದುರೇ ಉಸಿರು ಚೆಲ್ಲಿದ್ದಾರೆ. ಲಲಿತಮ್ಮ ಮನೆಯ ಮುಂದೆ ಕಂಬಿ ಮೇಲೆ ಒಣಗಿ ಹಾಕಿದ್ದ ಬಟ್ಟೆ ತೆಗೆದುಕೊಳ್ಳೋಕೆ ಮುಂದಾಗಿದ್ದರು. ವಿದ್ಯುತ್ ಶಾಕ್‌ನಿಂದ ಲಲಿತಮ್ಮ ಕುಸಿದು ಬಿದ್ದಿದ್ದಾಳೆ. ದೊಡ್ಡಮ್ಮನ ರಕ್ಷಣೆಗೆ ಬಂದ ಮಲಮಗ ಸಂಜಯ್ ಕೂಡ ಪ್ರಾಣ ಬಿಟ್ಟಿದ್ದಾನೆ. ಇವರಿಬ್ಬರನ್ನ ಕಂಡು ಮನೆಯಲ್ಲಿ ಅಡುಗೆ ಮಾಡುತ್ತಿದ್ದ ಮಲ ಮಗಳು ಲಕ್ಷಮ್ಮ ಸಹ ರಕ್ಷಣೆಗೆ ಧಾವಿಸಿದರು. ಆಕೆಗೂ ಕೆರೆಂಟ್ ಶಾಕ್ ಹೊಡೆದು ಕೈಗೆ ಗಂಭೀರ ಗಾಯವಾಗಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಗಾಯಾಳು ಲಕ್ಷಮ್ಮಳ ಕಿರುಚಾಟ ಕೇಳಿ ಗ್ರಾಮಸ್ಥರೆಲ್ಲಾ ಮನೆ ಮುಂದೆ ಜಮಾಯಿಸಿದ್ದಾರೆ. ಅಷ್ಟರಲ್ಲೇ ಕರೆಂಟ್ ಶಾಕ್ ಹೊಡೆದಿರೋದು ಗೊತ್ತಾಗಿದೆ. ಇದರಿಂದ ಗ್ರಾಮದ ಯುವಕರು ಕೋಲಿನ ಸಹಾಯದಿಂದ ಕಂಬಿ ಪಕ್ಕಕ್ಕೆ ಸರಿಸಿ ಲಲಿತಮ್ಮ ಹಾಗೂ ಸಂಜಯ್‌ನನ್ನ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಅಷ್ಟರಲ್ಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಧೃಡೀಕರಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಸಿಪಿಐ ಸಾಧಿಕ್ ಪಾಷಾ ಹಾಗೂ ಬೆಸ್ಕಾಂ ಇಲಾಖಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.