ಜೆಡಿಎಸ್‍ನಲ್ಲಿ ನಾನಿರೋದು ಬಹಳ ಜನಕ್ಕೆ ಇಷ್ಟವಿಲ್ಲ – ಜಿಟಿಡಿ

Public TV
3 Min Read

– ಗೌಡರ ಕುಟುಂಬದ ವಿರುದ್ಧ ಸ್ಫೋಟಕ ಹೇಳಿಕೆ
– ಚುನಾವಣಾ ನಿವೃತ್ತಿ ಘೋಷಿಸಿದ ಜಿಟಿಡಿ

ಮೈಸೂರು: ಗೌಡರ ಕುಟುಂಬದ ವಿರುದ್ಧ ಮಾಜಿ ಸಚಿವ ಜಿ.ಟಿ ದೇವೇಗೌಡ ಅವರು ಸ್ಫೋಟಕ ಹೇಳಿಕೆ ನೀಡಿದ್ದಾರೆ. ನಾನು ಜೆಡಿಎಸ್‍ನಲ್ಲಿ ಇರುವುದು ಬಹಳ ಮಂದಿಗೆ ಇಷ್ಟವಿಲ್ಲ ಎಂದು ಹೇಳಿಕೆ ನೀಡಿ ಭಾರೀ ಚರ್ಚೆಗೆ ಕಾರಣವಾಗಿದ್ದಾರೆ.

ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಜೆಡಿಎಸ್ ನಾಯಕರ ವಿರುದ್ಧ ಹರಿಹಾಯ್ದರು. ಎಚ್.ಡಿ ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ನನಗೆ ಉನ್ನತ ಶಿಕ್ಷಣ ಸಚಿವ ಸ್ಥಾನ ಬೇಡ ಎಂದು ಮುನಿಸಿಕೊಂಡಿದ್ದೆ. ಆಗ ಅವರು ನಾನು ಹಾಗೇ ದೂರವಾಗಲಿ ಎಂದು ಕಾಯುತ್ತಿದ್ದರು. ಮಂತ್ರಿ ಸ್ಥಾನ ತೆಗೆದುಕೊಳ್ಳದೆ ವಾಪಸ್ ಹೋಗಲಿ ಎಂದು ಕಾಯುತ್ತಿದ್ದರು. ನಾನು ಮಾತ್ರ ಈ ಸರ್ಕಾರ ಉಳಿಸಲು ಕೊನೆ ಕ್ಷಣದವರೆಗೂ ಹೋರಾಡಿದೆ. ಕುಮಾರಸ್ವಾಮಿಯನ್ನು ಸಿಎಂ ಮಾಡಲು, ಉಳಿಸಲು ನಾನು ಶತ ಪ್ರಯತ್ನ ಮಾಡಿದ್ದೇನೆ. ಆದರೆ ನಾನು ಜೆಡಿಎಸ್‍ನಲ್ಲಿ ಇರುವುದು ಬಹಳ ಮಂದಿಗೆ ಇಷ್ಟವಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ಜಿ.ಟಿ.ದೇವೆಗೌಡ ಅವರ ಈ ಹೇಳಿಕೆ ಸದ್ಯ ರಾಜಕೀಯ ವಲಯದಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯರನ್ನು ಜನ ಸೋಲಿಸಿ, ನನ್ನನ್ನು ಗೆಲ್ಲಿಸಿ ಕುಮಾರಸ್ವಾಮಿ ಅವರು ಸಿಎಂ ಆಗಲು ಕಾರಣವಾದರು. ಆಗ ಎಲ್ಲಾ ಕಡೆ ಕುಮಾರಸ್ವಾಮಿ ಅವರು ಸಿಎಂಗೆ ಇರುವ ಅಧಿಕಾರ ಜಿಟಿಡಿಗೂ ಇದೆ ಎಂದು ಹೇಳಿದ್ದರು. ಆದರೆ ಸಿಎಂ ಆದ ಮೇಲೆ ನಾನು ಯಾವ ಖಾತೆ ಬೇಡ ಎಂದು ಹೇಳಿದ್ದೆನೋ ಅದೇ ಖಾತೆ ಕೊಟ್ಟರು. ನಾನು ಮುನಿಸಿಕೊಂಡರೂ ಸಮಾಧಾನ ಮಾಡಲು ಬರಲಿಲ್ಲ. ನಾನು ಖಾತೆ ಬಿಟ್ಟು ಹೋಗಲಿ ಎಂದು ಕಾಯುತ್ತಿದ್ದರು. ಬಳಿಕ ಮಂಡ್ಯ ರಮೇಶ್ ಅವರು ಸಹಕಾರ ಕೊಡುತ್ತೇನೆ ಎಂದು ಕರೆದುಕೊಂಡು ಹೋದರೂ ಸಹಕರಿಸಲಿಲ್ಲ. ಕೊನೆಗೆ ಉನ್ನತ ಶಿಕ್ಷಣ ಖಾತೆಯನ್ನೇ ತಗೆದುಕೊಂಡು ಯಶಸ್ವಿಯಾಗಿ ನಿರ್ವಹಿಸಿದೆ. ನಾನು ಡಿ.ಕೆ ಶಿವಕುಮಾರ್ ಅವರು ಮುಂಬೈಗೆ ಹೋಗಿದ್ದ ಶಾಸಕರನ್ನು ಕರೆತರಲು ಹೋಗಿದ್ದೇವು. ಕೊನೆ ಕ್ಷಣದವರೆಗೂ ಕುಮಾರಸ್ವಾಮಿ ಸಿಎಂ ಆಗಿರಬೇಕು ಎಂದು ಹೋರಾಡಿದೆವು. ಆದರೆ ಪ್ರಯೋಜನವಾಗಿಲ್ಲ ಎಂದು ಹೇಳಿದರು.

ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಮಾಜಿ ಸಚಿವ ಸಾರಾ ಮಹೇಶ್ ಅವರೇ ಸಿಎಂ ಆಗಿರುವ ರೀತಿ ಆ್ಯಕ್ಟಿಂಗ್ ಮಾಡಿ ಕೆಲಸ ಮಾಡಿದ್ದಾರೆ. ಆದ್ದರಿಂದ ಅವರನ್ನೇ ಕಾರ್ಯಕಾರಣ ಸಮಿತಿಗೆ ಹಾಕಿದ್ದಾರೆ. ರಾಜ್ಯ ಮಟ್ಟದಲ್ಲಿ ಪಕ್ಷಕ್ಕಾಗಿ ಕೆಲಸ ಮಾಡಿದ್ದಾರೆ, ರಾಷ್ಟ್ರಮಟ್ಟದಲ್ಲೂ ಪಕ್ಷ ಬೆಳೆಸುವ ಕೆಲಸ ಮಾಡಲಿ ಎಂದು ಸಾರಾ ಮಹೇಶ್ ಅವರನ್ನು ಸಮಿತಿಗೆ ಹಾಕಿದ್ದಾರೆ. ಅವರಿಗೆ ನಾನು ಅಭಿನಂದನೆ ತಿಳಿಸುತ್ತೇನೆ ಎಂದರು.

ನನ್ನನ್ನು ಜೆಡಿಎಸ್ ಬೇಡ ಎಂದಿಲ್ಲ, ನಾನು ಕೂಡ ಜೆಡಿಎಸ್ ಪಕ್ಷವನ್ನು ಬೇಡ ಎಂದಿಲ್ಲ. ಆದರೆ ನಾನು ಬಿಜೆಪಿಗೆ ಹೋದಾಗ ಹುಣಸೂರು ಕ್ಷೇತ್ರದಿಂದ ಸೋತಿದ್ದೆ. ಆಗ ಸಿಎಂ ಯಡಿಯೂರಪ್ಪ ಅವರು ನನಗೆ ಸೋತ್ತಿದ್ದರೂ ಕ್ಯಾಬಿನೆಟ್ ದರ್ಜೆ ಕೊಟ್ಟು, ಗೃಹ ಮಂಡಳಿ ಅಧ್ಯಕ್ಷನ್ನಾಗಿ ಮಾಡಿದ್ದರು. ಬಳಿಕ ಇವರೇ ನನ್ನನ್ನು ವಾಪಸ್ ಪಕ್ಷಕ್ಕೆ ಬನ್ನಿ ಎಂದು ಕರೆದರು. ಧರ್ಮಸಿಂಗ್ ಅವರು ಸಿಎಂ ಆಗಿದ್ದಾಗ ನನಗೆ ಸಚಿವ ಸ್ಥಾನ ನೀಡಲಿಲ್ಲ, ಬೇರೆ ನಾಯಕರಿಗೆ ಸಚಿವ ಸ್ಥಾನ ಕೊಟ್ಟಿದ್ದರು. ಆದರೆ ಸಿದ್ದರಾಮಯ್ಯ ಅವರು ಚುನಾವಣೆಯಲ್ಲಿ ಸೋತ ಬಳಿಕ ನನ್ನನ್ನು ಏಳು ತಿಂಗಳ ಕಾಲ ಮಂತ್ರಿ ಮಾಡಿದರು ಎಂದು ಕಿಡಿಕಾರಿದರು.

ಹುಣಸೂರು ಉಪಚುನಾವಣೆ ನಡೆದರೆ ಜೆಡಿಎಸ್ ಸೋಲುತ್ತದೆ ಎಂದು ಚುನಾವಣೆಗೂ ಮುನ್ನವೆ ಜಿಟಿಡಿ ಭವಿಷ್ಯ ನುಡಿದಿದ್ದಾರೆ. ಹುಣಸೂರು ಉಪ ಚುನಾವಣೆಯಲ್ಲಿ ಜೆಡಿಎಸ್ ಸೋಲು ಖಚಿತ. ಕಾಂಗ್ರೆಸ್ ಅಭ್ಯರ್ಥಿ ಅಲ್ಲಿ ಗೆಲ್ಲುತ್ತಾರೆ. ನನ್ನ ಮಗನನ್ನು ಅಲ್ಲಿಂದ ಸ್ಪರ್ಧಿಸುವಂತೆ ಹೆಚ್‍ಡಿಕೆ ಕೇಳಿದ್ದರು. ನಾನು ಇಲ್ಲ ಎಂದಿದ್ದೇನೆ. ನನ್ನ ಮಗ ಬೇಕಾದರೆ ಚಾಮುಂಡೇಶ್ವರಿ ಕ್ಷೇತ್ರದಿಂದ ಮುಂದೆ ಸ್ಪರ್ಧೆ ಮಾಡಲಿ. ಸದ್ಯಕ್ಕೆ ನಾವು ಯಾವ ಉಪಚುನಾವಣೆಯಲ್ಲು ಸ್ಪರ್ಧೆ ಮಾಡುತ್ತಿಲ್ಲ ಎಂದು ತಮ್ಮ ನಿರ್ಧಾರ ತಿಳಿಸಿದರು.

ಸಚಿವನಾಗಿದ್ದಾಗ ಕ್ಷಣ ಕ್ಷಣಕ್ಕೂ ಅವಮಾನ ಮತ್ತು ನೋವು ಉಣ್ಣುತ್ತಿದ್ದೆ. ನಾನು ಈಗ ಬಹಳ ಆರಾಮಾಗಿದ್ದೇನೆ. ಯಾವ ಅವಮಾನವು ಇಲ್ಲ, ನೋವು ಇಲ್ಲ. ಈಗ ಜೆಡಿಎಸ್ ಸಂಘಟನೆ ಪಟ್ಟಿಯಲ್ಲಿ ನನ್ನ ಹೆಸರಿಲ್ಲದ ಕಾರಣ ತಲೆಯ ಮೇಲಿದ್ದ ದೊಡ್ಡ ಬಂಡೆ ಇಳಿದಂತಾಗಿದೆ. ಚುನಾವಣೆ ರಾಜಕಾರಣದಿಂದ ನಿವೃತ್ತಿ ಪಡೆದು ಮಗನಿಗೆ ಬಿಟ್ಟುಕೊಡುತ್ತಿದ್ದೇನೆ. ಈಗ ಬಡವರ ಸೇವೆ ಮಾಡಿಕೊಂಡು ನೆಮ್ಮದಿಯಾಗಿದ್ದೇನೆ ಎಂದು ಹೇಳಿದರು.

ದಸರಾದಲ್ಲಿ ಬಿಜೆಪಿಯವರ ಜೊತೆ ಕೂರೋಲ್ಲ ಎಂಬ ಸಾ.ರಾ.ಮಹೇಶ್ ಹೇಳಿಕೆ ವಿಚಾರವಾಗಿ ಮಾತನಾಡಿ, ನಾನು ಸಾ.ರಾ.ಮಹೇಶ್‍ರನ್ನ ಬಹು ಹತ್ತಿರದಿಂದ ನೋಡಿದ್ದೇನೆ. ಅವರು ಬಿಜೆಪಿಯಲ್ಲಿದ್ದಾಗ, ನಂತರ ಜೆಡಿಎಸ್ ಬಂದಾಗಲೂ ಅವರನ್ನು ನೋಡಿದ್ದೇನೆ. ಸಿಎಂ ಜೊತೆ ಇದ್ದಾಗಲೂ ನೋಡಿದ್ದೇನೆ. ಅವರ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *