ಬೆಲೆಯಲ್ಲಿ ಚಿನ್ನವನ್ನೇ ಹಿಂದಿಕ್ಕಿದ ಸ್ಪೆಶಲ್ ವಯಗ್ರಾ ಮೂಲಿಕೆ

Public TV
1 Min Read

-ಯಾಕಿಷ್ಟು ಬೇಡಿಕೆ? ಏನಿದರ ವಿಶೇಷತೆ?

ವಾಷಿಂಗ್ಟನ್ ಡಿಸಿ: ಬೆಲೆ ಬಾಳುವ ವಯಾಗ್ರ ಮೂಲಿಕೆಗೆ ಮಾರುಕಟ್ಟೆಯಲ್ಲಿ ಬೇಡಿಕೆ ನಿರ್ಮಾಣವಾಗಿದ್ದು, ಬೆಲೆಯಲ್ಲಿ ಚಿನ್ನವನ್ನೇ ಈ ಮೂಲಿಕೆ ಅಥವಾ ಶಿಲೀಂಧ್ರ ಅಥವಾ ಬೇರು ಹಿಂದಿಕ್ಕಿದೆ. ಏಷ್ಯಾ ಖಂಡದ ಹಿಮಾಲಯ ಭಾಗಗಳಲ್ಲಿ ಕಂಡು ಬರುವ ಈ ವಿಶೇಷ ಬೇರನ್ನು ‘ಹಿಮಾಲಯ ವಯಾಗ್ರ’ ಅಂತಾನೇ ಕರೆಯುವುದುಂಟು. ಹವಾಮಾನದ ಏರುಪೇರುಗಳಿಂದಾಗಿ ಈ ಬೇರು ವಿನಾಶದ ಅಂಚು ತಲುಪಿದೆ ಎಂದು ಸಂಶೋಧಕರು ಸ್ಪಷ್ಟಪಡಿಸಿದ್ದಾರೆ.

ಚೀನಾ ಮತ್ತು ನೇಪಾಳ ದೇಶದ ಜನರು ಈ ಅತ್ಯಮೂಲ್ಯ ಮೂಲಿಕೆಯನ್ನು ಬಹಳ ವರ್ಷಗಳಿಂದ ನಾಶಗೊಳಿಸುತ್ತಾ ಬಂದಿದ್ದಾರೆ ಎಂದು ಸಂಶೋಧಕರು ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಇದೊಂದು ಪ್ರಪಂಚದ ಅತಿ ಹೆಚ್ಚು ಮೌಲ್ಯವುಳ್ಳ ಜೈವಿಕ ವಸ್ತು. ಈ ವಸ್ತುವಿನ ಮಾರಾಟದ ಮೂಲಕ ಜನರು ಹಣ ಸಂಪಾದನೆಗೆ ಇಳಿದಿದ್ದಾರೆ. ಮತ್ತೆ ಕೆಲವರು ವಿಶೇಷ ಬೇರಿನ ಸಂಗ್ರಹದಲ್ಲಿ ತೊಡಗಿದ್ದಾರೆ ಎಂದು ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್ ವರದಿಯಲ್ಲಿ ತಿಳಿಸಲಾಗಿದೆ.

ಹಿಮಾಲಯ ಪ್ರದೇಶದಲ್ಲಿ ಈ ಬೇರನ್ನು ‘ಯರಚಗುಂಬಾ’ ಎಂದೇ ಕರೆಯಲಾಗುತ್ತಿದೆ. ಈ ಮೂಲಿಕೆಯ ಸೇವನೆಯಿಂದ ಲೈಂಗಿಕ ಶಕ್ತಿ ವೃದ್ಧಿ ಆಗುತ್ತೆ ಎಂದು ನಂಬಲಾಗುತ್ತದೆ. ಈ ಹಿನ್ನೆಲೆಯಲ್ಲಿ ಜನರು ಟೀ ಅಥವಾ ನೀರಿನಲ್ಲಿ ಬೇಯಿಸಿ ಸೇವನೆ ಮಾಡುತ್ತಾರೆಂದು ಹೇಳಲಾಗುತ್ತಿದೆ. ಲೈಂಗಿಕ ಶಕ್ತಿ ವೃದ್ಧಿಯ ಜೊತೆಗೆ ಅಮೂಲ್ಯವಾದ ಗಿಡ ಮೂಲಿಕೆ ಇದಾಗಿದ್ದು, ಹಲವು ರೋಗಗಳನ್ನು ನಿವಾರಣೆ ಮಾಡುವ ಶಕ್ತಿಯನ್ನೂ ಹೊಂದಿದೆ.

ಎಲ್ಲಿ ಸಿಗುತ್ತೆ?
ಈ ವಿಶೇಷವಾದ ಬೇರು ಚೀನಾ, ನೇಪಾಳ, ಭೂತಾನ್ ಮತ್ತು ಭಾರತದ ಹಿಮಾಲಯ ಪ್ರದೇಶಗಳಲ್ಲಿ ಸಿಗುತ್ತದೆ. ಆದ್ರೆ ಇತ್ತೀಚಿನ ಹವಾಮಾನ ವೈಪರೀತ್ಯ ಮತ್ತು ಕೆಲವರು ಇದನ್ನೇ ತಮ್ಮ ಆದಾಯದ ಮೂಲವನ್ನು ಮಾಡಿಕೊಂಡಿದ್ದರಿಂದ ವಿನಾಶದ ಅಂಚು ತಲುಪಿದೆ ಎಂದು ಸಂಶೋಧಕರು ಹೇಳುತ್ತಾರೆ.

ಸಮುದ್ರಮಟ್ಟದ 11,500 ಅಡಿ ಎತ್ತರದ ಪ್ರದೇಶದಲ್ಲಿ ವಿಶೇಷ ಶಿಲೀಂಧ್ರ ಸಿಗುತ್ತದೆ. ಜೀರೋ ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಶಿಲೀಂಧ್ರ ಬೆಳೆಯುತ್ತದೆ. ಮಣ್ಣು ಯಾವುದಾದರು ಆಗಿರಲಿ ವಾತಾವರಣ ಸಮಶೀತೋಷ್ಣ ವಲಯದಿಂದ ಕೂಡಿರಬೇಕು. 0 ಡಿಗ್ರಿಗಿಂತಲೂ ಕಡಿಮೆ ತಾಪಮಾನವುಳ್ಳ ಶೀತ ಪ್ರದೇಶದಲ್ಲಿ ಕೋನಾಕಾರದಲ್ಲಿ ಬೆಳೆಯುತ್ತದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *