– 1,111 ಜನರು ಗಾಯಗೊಂಡು ಪ್ರಾಣಾಪಾಯದಿಂದ ಪಾರು
ಬೀದರ್: ಅತಿವೇಗದ ಚಾಲನೆ, ಮದ್ಯಪಾನ ಸೇವಿಸಿ ವಾಹನ ಚಾಲನೆ, ಹಾಳಾದ ರಸ್ತೆ, ಅಜಾಗರೂಕತೆ, ತರಬೇತಿ ಕೊರತೆ ಕೊರತೆ ಸೇರಿ ವಿವಿಧ ಕಾರಣಗಳಿಂದ ಜಿಲ್ಲೆಯಲ್ಲಿ ಕಳೆದ 10 ತಿಂಗಳಲ್ಲಿ 800ಕ್ಕೂ ಹೆಚ್ಚು ರಸ್ತೆ ಅಪಘಾತಗಳು (Road Accident) ಸಂಭವಿಸಿದ್ದು, 263 ಮಂದಿ ಸಾವನ್ನಪ್ಪಿದ್ದಾರೆ.
ಬೀದರ್ ಜಿಲ್ಲೆಯ ವಿವಿಧೆಡೆ 2025ರ ಜನವರಿಯಿಂದ ಅಕ್ಟೋಬರ್ ಅಂತ್ಯದವರೆಗೆ ಅಂದರೆ 10 ತಿಂಗಳಲ್ಲಿ 818 ರಸ್ತೆ ಅಪಘಾತ ಸಂಭವಿಸಿವೆ. ಇದರಲ್ಲಿ 263 ಜನರು ಪ್ರಾಣ ಕಳೆದುಕೊಂಡಿದ್ದಾರೆ. 1,111 ಮಂದಿ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಸಾರಿಗೆ ಇಲಾಖೆ ಮಾಹಿತಿ ನೀಡಿದೆ.ಇದನ್ನೂ ಓದಿ: ಕೋಗಿಲು ಲೇಔಟ್ ನಿರಾಶ್ರಿತರಿಗೆ ಪುನರ್ವಸತಿ ಭಾಗ್ಯ – ನಾಳೆ ಅರ್ಹರಿಗೆ ಸಿಗಲಿದೆ ಮನೆ!
ಫೆಬ್ರವರಿ ತಿಂಗಳಲ್ಲಿ ಬೀದರ್ ಕಡೆಯಿಂದ ಸಂತಪೂರ ಕಡೆಗೆ ಹೊರಟಿದ್ದ ಬೈಕ್ ಹಾಗೂ ಟೆಂಪೋ ಟ್ರಾವೆಲ್ಸ್ ನಡುವೆ ಅಪಘಾತ ಸಂಭವಿಸಿತ್ತು. ಈ ವೇಳೆ ವೈದ್ಯರೊಬ್ಬರು ಘಟನಾ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದರು. ಇನ್ನು ಬಸವಕಲ್ಯಾಣ ತಾಲೂಕಿನ ಉಮಾಪುರ ಗ್ರಾಮದ ಬಳಿ ವೇಗವಾಗಿ ಬಂದ ಗೂಡ್ಸ್ ಗಾಡಿಯೊಂದು ಎದುರಿಗೆ ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ತಾಯಿ, ಮಗಳು ಇಬ್ಬರು ಸ್ಥಳದಲ್ಲೇ ಕೊನೆಯುರೆಳೆದಿದ್ದರು.
ಕಳೆದ ಆಗಸ್ಟ್‌ನಲ್ಲಿ ಬೀದರ್-ಔರಾದ್ ರಾಷ್ಟ್ರೀಯ ಹೆದ್ದಾರಿಯ ಜನವಾಡ ಸಮೀಪ ಕಾರು-ಬೈಕ್ ಮಧ್ಯೆ ಸಿನಿಮೀಯ ರೀತಿಯಲ್ಲಿ ಭೀಕರ ಅಪಘಾತ ಸಂಭವಿಸಿತ್ತು. ಇದರಲ್ಲಿ ಓರ್ವ ಬೈಕ್ ಸವಾರ ಸ್ಥಳದಲ್ಲೇ ಜೀವ ಕಳೆದುಕೊಂಡಿದ್ದ. ಅತಿವೇಗವಾಗಿ ಬಂದ ಕಾರು ರಸ್ತೆ ಬದಿಯಲ್ಲಿ ಚಲಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದಿತ್ತು. ಡಿಕ್ಕಿಯ ರಭಸಕ್ಕೆ ಸಿನಿಮೀಯ ರೀತಿಯಲ್ಲಿ ಬೈಕ್ ಮೇಲಿದ್ದ ಇಬ್ಬರು ಐದಾರು ಅಡಿ ದೂರ ಹಾರಿದರು. ಮತ್ತೋರ್ವ ಸವಾರ ಗಾಯಗೊಂಡಿದ್ದನು. ಸಿಸಿಟಿವಿಯಲ್ಲಿ ಸೆರೆಯಾದ ಅಪಘಾತದ ಭೀಕರ ದೃಶ್ಯ ಭಾರಿ ವೈರಲ್ ಆಗಿತ್ತು.
2025ರ ನವೆಂಬರ್ ತಿಂಗಳಲ್ಲಿ ತೆಲಂಗಾಣ ಮೂಲದ 5 ಜನರು ಕಾರಿನಲ್ಲಿ ಕಲಬುರಗಿ ಜಿಲ್ಲೆಯ ಗಾಣಗಾಪುರ ದತ್ತಾತ್ರೇಯ ದೇವರ ದರ್ಶನಕ್ಕೆ ತೆರಳಿದ್ದರು. ದೇವರ ದರ್ಶನ ಮುಗಿಸಿ ವಾಪಸ್ ಊರಿಗೆ ತೆರಳುವ ವೇಳೆ ಭಾಲ್ಕಿ-ಬೀದರ್ ಹೆದ್ದಾರಿಯ ನೀಲಮನಳ್ಳಿ ತಾಂಡಾ ಬಳಿ ಎದುರಿಗೆ ಬಂದ ಡಿಟಿಡಿಸಿ ವಾಹನಕ್ಕೆ ಮುಖಾಮುಖಿ ಡಿಕ್ಕಿಯಾಗಿತ್ತು. ಪರಿಣಾಮ ಸ್ಥಳದಲ್ಲೇ ಮೂವರು ಪ್ರಾಣ ಕಳೆದುಕೊಂಡಿದ್ದರು. ಕಾರಿನಲ್ಲಿದ್ದ ಇಬ್ಬರು ಗಾಯಗೊಂಡಿದ್ದರು.
ಬೀದರ್ ಜಿಲ್ಲೆಯಲ್ಲಿ 2021ರಿಂದ 2025ರ ಅಕ್ಟೋಬರ್ ಅಂತ್ಯದವರೆಗೆ ಅಂದರೆ 4 ವರ್ಷ 10 ತಿಂಗಳಲ್ಲಿ ಬರೋಬ್ಬರಿ 5,197 ರಸ್ತೆ ಅವಘಡಗಳು ನಡೆದಿವೆ. ಈ ಪೈಕಿ 1,547 ಜನ ಪ್ರಾಣಕಳೆದುಕೊಂಡಿದ್ದಾರೆ. 7,044 ಮಂದಿ ಗಾಯಗೊಂಡಿರುವ ಬಗ್ಗೆ ಎಂದು ಸರ್ಕಾರದ ಅಧಿಕೃತ ಅಂಕಿ-ಅಂಶಗಳು ಮಾಹಿತಿ ನೀಡಿವೆ. 2021ರಲ್ಲಿ 1,086 ರಸ್ತೆ ಅಪಘಾತಗಳು ನಡೆದಿವೆ. 270 ಮಂದಿ ಸಾವಿಗೀಡಾಗಿದ್ದು, 1,482 ಮಂದಿ ಗಾಯಗೊಂಡಿದ್ದರು. 2022ರಲ್ಲಿ ನಡೆದ 1,136 ರಸ್ತೆ ಅಪಘಾತಗಳಲ್ಲಿ 332 ಜನ ಪ್ರಾಣ ಕಳೆದುಕೊಂಡಿದ್ದರು. 2023ರಲ್ಲಿ ಸಂಭವಿಸಿದ 1,097 ರಸ್ತೆ ಅಪಘಾತಗಳಲ್ಲಿ 335 ಜನರು ಮೃತಪಟ್ಟಿದ್ದರು. 2024ರಲ್ಲಿ 1,060 ರಸ್ತೆ ಅಪಘಾತ ಸಂಭವಿಸಿದ್ದು, ಅದರಲ್ಲಿ 347 ಮಂದಿಯ ಪ್ರಾಣ ಪಕ್ಷಿ ಹಾರಿ ಹೋಗಿದೆ. ಜಿಲ್ಲೆಯಲ್ಲಿ ಪ್ರತಿ ವರ್ಷ ರಸ್ತೆ ಅಪಘಾತದಲ್ಲಿ ಸರಾಸರಿ 300 ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.ಇದನ್ನೂ ಓದಿ: ಮಾರ್ಚ್‌ನಲ್ಲಿ ಅರ್ಜುನ್ ತೆಂಡೂಲ್ಕರ್ – ಸಾನಿಯಾ ಚಾಂದೋಕ್ ವಿವಾಹ?

