ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಹೊಸ ವರ್ಷಾಚರಣೆ ಬಳಿಕ ರೆಸಾರ್ಟ್ ಸಿಬ್ಬಂದಿಗೆ ಕೋವಿಡ್ ವಕ್ಕರಿಸುತ್ತಿದೆ. ರೆಸಾರ್ಟ್ ಸಿಬ್ಬಂದಿಗೆ ಕೋವಿಡ್ ಬಂದರೂ ರೆಸಾರ್ಟ್‍ಗಳನ್ನು ಮಾತ್ರ ಸೀಲ್‍ಡೌನ್ ಮಾಡುತ್ತಿಲ್ಲ. ಈ ಕುರಿತು ಕೊಡಗು ಕೋವಿಡ್ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಶುಕ್ರವಾರವಷ್ಟೇ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದ್ದರು. ಅವರ ಮಾತಿಗೂ ರೆಸಾರ್ಟ್‍ನಲ್ಲಿ ಬೆಲೆಯಿಲ್ಲದಂತಾಗಿದೆ.
ಮಡಿಕೇರಿ ತಾಲೂಕಿನ ಮೇಕೇರಿ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕೂರ್ಗ್ ವೈಲ್ಡರ್ಸ್ ರೆಸಾರ್ಟ್ ನ 31 ಸಿಬ್ಬಂದಿಗೆ ಕೋವಿಡ್ ದೃಢಪಟ್ಟಿದ್ದರೂ, ರೆಸಾರ್ಟ್ ಸೀಲ್‌ಡೌನ್ ಮಾಡಿಲ್ಲ. ಬದಲಾಗಿ ಸೋಂಕು ದೃಢಪಟ್ಟಿರುವ ಸಿಬ್ಬಂದಿಯನ್ನು ಪ್ರತ್ಯೇಕವಾಗಿರಿಸಿ ರೆಸಾರ್ಟ್ ಎಂದಿನಂತೆ ಕಾರ್ಯನಿರ್ವಹಿಸುತ್ತಿದೆ. ಸ್ಥಳಕ್ಕೆ ಭೇಟಿ ನೀಡಿದ ಕೊಡಗು ಡಿಹೆಚ್‍ಓ ವೆಂಕಟೇಶ್ ರೆಸಾರ್ಟ್ ಸೀಲ್‌ಡೌನ್ ಮಾಡುವಂತೆ ವ್ಯವಸ್ಥಾಪಕರಿಗೆ ತಿಳಿಸಿದ್ದರು. ಇದನ್ನೂ ಓದಿ: ಪೊಲೀಸರನ್ನು ನೋಡಿ ಮಾಸ್ಕ್ ಹಾಕಬೇಡಿ – ಬೈಕ್ ಸವಾರನಿಗೆ ಮನವಿ ಮಾಡಿದ ಪೇದೆ
ಸ್ಥಳಕ್ಕೆ ಬಂದ ಮಡಿಕೇರಿ ತಹಶೀಲ್ದಾರ್ ಮಹೇಶ್, ಸೋಂಕಿತ ರೆಸಾರ್ಟ್ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿರುವ ಸ್ಥಳಕ್ಕಷ್ಟೇ ಹೋಗಿ ಪರಿಶೀಲನೆ ನಡೆಸಿದರು. ಆದರೆ ರೆಸಾರ್ಟ್ ಏಳು ದಿನಗಳವರೆಗೆ ಸೀಲ್ ಡೌನ್ ಮಾಡುವ ಬಗ್ಗೆ ಯಾವುದೇ ಮಾತಾಡಲಿಲ್ಲ.
ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಮಹೇಶ್, ಕೋವಿಡ್ ಸೋಂಕಿತ ಸಿಬ್ಬಂದಿಯನ್ನು ಪ್ರತ್ಯೇಕವಾಗಿರಿಸಲಾಗಿದೆ. ರೆಸಾರ್ಟ್‍ಗೆ ಇದರಿಂದ ಯಾವುದೇ ಸಮಸ್ಯೆ ಇಲ್ಲ ಎಂದು ಬೇಜವಾಬ್ದಾರಿಯ ಉತ್ತರ ನೀಡಿದ್ದಾರೆ. ಸೋಂಕಿತರನ್ನು ಏಳು ದಿನಗಳ ಕಾಲ ಪ್ರತ್ಯೇಕವಾಗಿ ಇರಿಸಲಾಗುವುದು. ಅವರಿಗೆ ಏಳು ದಿನಗಳ ಬಳಿಕ ಮತ್ತೊಮ್ಮೆ ಕೋವಿಡ್ ಪರೀಕ್ಷೆ ಮಾಡಲಾಗುವುದು. ಆಗಲೂ ಪಾಸಿಟಿವ್ ಬಂದರೆ ನಿಯಮದಂತೆ ಕ್ರಮಕೈಗೊಳ್ಳಲಾಗುವುದು ಎಂದಿದ್ದಾರೆ.
ತಹಶೀಲ್ದಾರ್ ಅವರ ಈ ನಡೆ ಹಲವು ಅನುಮಾನಗಳಿಗೆ ಎಡೆಮಾಡಿದೆ. ಶುಕ್ರವಾರವಷ್ಟೇ ಕೊಡಗು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಭೆ ನಡೆಸಿದ್ದ ಕೊಡಗು ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು, ಯಾವುದೇ ರೆಸಾರ್ಟ್ ನಲ್ಲಿ ಕೋವಿಡ್ ಪ್ರಕರಣಗಳು ಪತ್ತೆಯಾದಲ್ಲಿ ಅಂತಹ ರೆಸಾರ್ಟ್ ಅನ್ನು ಸೀಲ್ ಡೌನ್ ಮಾಡುವಂತೆ ಸೂಚಿದ್ದರು. ಆದರೆ ಮಡಿಕೇರಿ ಅಧಿಕಾರಿಗಳ ನಡೆ ಸಚಿವರ ನಿರ್ದೇಶನಕ್ಕೂ ಕವಡೆ ಮಾತಿನ ಕಿಮ್ಮತ್ತಿಲ್ವಾ ಎನ್ನೋ ಪ್ರಶ್ನೆ ಮೂಡುವಂತೆ ಮಾಡಿದೆ. ಇದನ್ನೂ ಓದಿ: 50 ಕೋಟಿ ರೂ. ಜಾಗತಿಕ ಕ್ರೆಡಿಟ್ ಕಾರ್ಡ್ ಹಗರಣ ಭೇದಿಸಿದ ಪೊಲೀಸರು – 7 ಜನ ಅರೆಸ್ಟ್

 
			

 
		 
		 
		 
		

 
                                
                              
		