ಮತ್ತೆ ಸರ್ಜಿಕಲ್‌ ಸ್ಟ್ರೈಕ್‌? – ಪಾಕಿಸ್ತಾನಕ್ಕೆ ಅಮಿತ್‌ ಶಾ ಎಚ್ಚರಿಕೆ

By
2 Min Read

ಪಣಜಿ: ಪಾಕಿಸ್ತಾನದ ಮೇಲೆ ಮತ್ತೊಮ್ಮೆ ಭಾರತ ಸರ್ಜಿಕಲ್‌ ಸ್ಟ್ರೈಕ್‌ ದಾಳಿ ನಡೆಯುತ್ತಾ ಎಂಬ ಪ್ರಶ್ನೆ ಈಗ ಮತ್ತೊಮ್ಮೆ ಎದ್ದಿದೆ.

ಗೃಹ ಸಚಿವ ಅಮಿತ್‌ ಶಾ ಗೋವಾದ ಧರ್‌ಬಂದೋರಾದಲ್ಲಿ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯದ ಶಂಕು ಸ್ಥಾಪನಾ ಕಾರ್ಯಕ್ರಮದಲ್ಲಿ ನೀಡಿದ ಖಡಕ್‌ ಹೇಳಿಕೆಯಿಂದ ಈಗ ಈ ಪ್ರಶ್ನೆ ಎದ್ದಿದೆ.

ಜಮ್ಮುಕಾಶ್ಮೀರದಲ್ಲಿ ಜನಗಳ ಮೇಲೆ ಉಗ್ರರು ನಡೆಸುತ್ತಿರುವ ಹತ್ಯೆಯನ್ನು ನಿಲ್ಲಿಸದೇ ಇದ್ದರೆ ಮತ್ತೊಮ್ಮೆ ಪಾಕಿಸ್ತಾನದ ಮೇಲೆ ಸರ್ಜಿಕಲ್‌ ಸ್ಟ್ರೈಕ್‌ ನಡೆಸಬೇಕಾಗುತ್ತದೆ ಎಂದು ನೇರವಾದ ಎಚ್ಚರಿಕೆಯನ್ನು ನೀಡಿದ್ದಾರೆ. ಇದನ್ನೂ ಓದಿ: #Surgicalstrike2 ವಿಶ್ವದಲ್ಲೇ ನಂಬರ್ ಒನ್ ಟ್ರೆಂಡಿಂಗ್

ಉಗ್ರರ ದಾಳಿಗಳನ್ನು ನಾವು ಸಹಿಸುವುದಿಲ್ಲ ಎನ್ನುವುದನ್ನು ನಾವು ಈಗಾಗಲೇ ಸಾಬೀತುಪಡಿಸಿದ್ದೇವೆ. ಮತ್ತೆ ಈ ರೀತಿಯ ದಾಳಿ ನಡೆದರೆ ಮತ್ತಷ್ಟು ಸರ್ಜಿಕಲ್‌ ಸ್ಟ್ರೈಕ್‌ ಬರುತ್ತದೆ ಎಂದು ಹೇಳಿದರು.

ಪ್ರಧಾನಿ ಮೋದಿ ಮತ್ತು ಮಾಜಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ನೇತೃತ್ವದಲ್ಲಿ ನಡೆದ ಸರ್ಜಿಕಲ್ ಸ್ಟ್ರೈಕ್ ಒಂದು ಮಹತ್ವದ ಹೆಜ್ಜೆಯಾಗಿದೆ. ಭಾರತದ ಗಡಿಯಲ್ಲಿ ಯಾರೂ ತೊಂದರೆ ಮಾಡಬಾರದು ಎಂದು ಸಂದೇಶವನ್ನು ಕಳುಹಿಸಿದ್ದೇವೆ. ಮಾತುಕತೆಗೆ ಸಮಯವಿತ್ತು, ಆದರೆ ಈಗ ಏನಿದ್ದರೂ ಪ್ರತ್ಯುತ್ತರ ನೀಡುವ ಸಮಯ ಎಂದರು. ಇದನ್ನೂ ಓದಿ: ಉದ್ಯೋಗಿಗಳ ಬೆಸ್ಟ್‌ ಕಂಪನಿ ಔಟ್‌ – ಭಾರತದ ಯಾವ ಕಂಪನಿಗೆ ಎಷ್ಟನೇ ಸ್ಥಾನ?

ಸೆಪ್ಟೆಂಬರ್ 2016 ರಲ್ಲಿ ಭಾರತದ ಉರಿ, ಪಠಾಣ್‌ಕೋಟ್ ಮತ್ತು ಗುರುದಾಸ್‌ಪುರದಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತವು ಮೊದಲ ಬಾರಿಗೆ ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿತು. ಉರಿ ದಾಳಿಯ 11 ದಿನಗಳ ನಂತರ 2016 ರ ಸೆಪ್ಟೆಂಬರ್ 29 ರಂದು ಮೊದಲ ಬಾರಿಗೆ ಪಾಕ್‌ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಸರ್ಜಿಕಲ್‌ ಸ್ಟ್ರೈಕ್‌ ನಡೆಸಿ ಉಗ್ರರನ್ನು ಹತ್ಯೆ ಮಾಡಿತ್ತು.

2019 ರಲ್ಲಿ ಪುಲ್ವಾಮಾದಲ್ಲಿ ಉಗ್ರನೊಬ್ಬ ಸ್ಫೋಟಕ ತುಂಬಿದ್ದ ಇಕೋ ಕಾರನ್ನು ಸಿಆರ್‌ಪಿಎಫ್‌ ಸೈನಿಕರಿದ್ದ ಬಸ್ಸಿಗೆ ಗುದ್ದಿದ ಪರಿಣಾಮ 40 ಮಂದಿ ಹುತಾತ್ಮರಾಗಿದ್ದರು. ಈ ದಾಳಿ ಪ್ರತಿಯಾಗಿ ಭಾರತದ ವಾಯುಸೇನೆ ಆಕ್ರಮಿತ ಕಾಶ್ಮೀರ ಅಲ್ಲದೇ ಬಾಲಾಕೋಟ್‌ನಲ್ಲಿದ್ದ ಉಗ್ರರ ಶಿಬಿರದ ಮೇಲೆ ಬಾಂಬ್‌ ದಾಳಿ ನಡೆಸಿತ್ತು. ಈ ದಾಳಿಯಲ್ಲಿ 300ಕ್ಕೂ ಹೆಚ್ಚು ಉಗ್ರರು ಹತ್ಯೆಯಾಗಿದ್ದರು ಎಂದು ವರದಿಯಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *