ಮುರುಡೇಶ್ವರಕ್ಕೆ ಹೆಚ್ಚಿನ ಭದ್ರತೆ, ಕರಾವಳಿ ಭಾಗದಲ್ಲಿ ಸೆಕ್ಯೂರಿಟಿ ಹೆಚ್ಚಿಸಲು ಕೇಂದ್ರದ ನೆರವು: ಆರಗ ಜ್ಞಾನೇಂದ್ರ

Public TV
1 Min Read

ಕಾರವಾರ: ಮುರುಡೇಶ್ವರ ದೇವಸ್ಥಾನದ ವಿಗ್ರಹ ಧ್ವಂಸಗೊಳಿಸಿ ಐಸಿಸ್ ಧ್ವಜ ನೆಟ್ಟ ಚಿತ್ರ ಹರಿಬಿಟ್ಟವರ ಕುರಿತು ತನಿಖೆಗೆ ಸೂಚಿಸಲಾಗಿದೆ. ತಪ್ಪಿತಸ್ಥರನ್ನು ಕಠಿಣ ಶಿಕ್ಷೆಗೆ ಗುರಿ ಪಡಿಸಲಾಗುವುದು. ದೇವಸ್ಥಾನಕ್ಕೆ ಸೋಮವಾರದಿಂದಲೇ ಭದ್ರತೆ ಹೆಚ್ಚಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಸಿದ್ದಾಪುರ ತಾಲೂಕಿನ ಕಲಗದ್ದೆ ಗ್ರಾಮಕ್ಕೆ ಮಂಗಳವಾರ ಸಂಜೆ ಭೇಟಿ ನೀಡಿದ ಅವರು ಮಾಧ್ಯಮದವರ ಜೊತೆ ಮಾತನಾಡಿದರು. ರಾಜ್ಯದ ಕರಾವಳಿ ಭಾಗದಲ್ಲಿ ಭದ್ರತೆ ಹೆಚ್ಚಿಸುವ ಕುರಿತು ಕೇಂದ್ರ ಸರ್ಕಾರದ ನೆರವು ಕೇಳಿದ್ದೇವೆ. ಕರಾವಳಿ ಕಾವಲು ಪಡೆಗೆ 30 ಸುಸಜ್ಜಿತ ಬೋಟ್‍ಗಳ ಬೇಡಿಕೆಯನ್ನೂ ಇಡಲಾಗಿದೆ. ದೇಶದ್ರೋಹ ಚಟುವಟಿಕೆಯಲ್ಲಿ ಭಟ್ಕಳವೂ ಸೇರಿದಂತೆ ಕರಾವಳಿ ಭಾಗದ ಹಲವು ಯುವಕರು ಪಾಲ್ಗೊಳ್ಳುತ್ತಿರುವ ಸಂಶಯವಿದ್ದು, ಈ ಬಗ್ಗೆ ನಿಗಾ ಇಡಲಾಗುತ್ತಿದೆ. ಮೋದಿ ಸರ್ಕಾರ ಬಂದ ಮೇಲೆ ಬಾಂಬ್ ಸ್ಫೋಟದಂತಹ ಚಟುವಟಿಕೆ ತಗ್ಗಿದೆ ಎಂದ ಅವರು, ಎಸ್.ಡಿ.ಪಿ.ಐ., ಪಿ.ಎಫ್.ಐ. ಸಂಘಟನೆ ನಿಷೇಧಿಸುವ ನಿರ್ಧಾರ ಕೇಂದ್ರ ಸರ್ಕಾರಕ್ಕೆ ಬಿಟ್ಟಿದ್ದು ಅಂದ್ರು. ಇದನ್ನೂ ಓದಿ: ಮುರುಡೇಶ್ವರದ ಶಿವನ ಬೃಹತ್ ಪ್ರತಿಮೆಯ ಮೇಲೆ ಐಸಿಸ್ ಉಗ್ರರ ಕಣ್ಣು?

ಇದೇ ವೇಳೆ ಬಿಜೆಪಿ-ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿವೆ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಕಾಂಗ್ರೆಸ್ ನಮ್ಮ ವಿರೋಧಿ. ಅವರಿಗಿಂತ ಜೆಡಿಎಸ್‍ನವರು ಹತ್ತಿರದವರು. ಅವರ ಅಭ್ಯರ್ಥಿ ಇಲ್ಲದ ಕಡೆ ಬೆಂಬಲ ಪಡೆದರೆ ತಪ್ಪೇನಿಲ್ಲ. ಕಾಂಗ್ರೆಸ್ಸಿಗೆ ಒಳ ಒಪ್ಪಂದ ಮಾಡಿಕೊಂಡ ರೂಢಿ ಇದೆ. ನಾವು ಅವರ ರೀತಿಯಲ್ಲಿ ಸಾಗುವುದಿಲ್ಲ. ನಮಗೆ ಕಾಂಗ್ರೆಸ್ ಸೋಲಿಸುವದಷ್ಟೆ ಗುರಿ. ಜೆಡಿಎಸ್ ಅಭ್ಯರ್ಥಿ ಇಲ್ಲದ ಕಡೆ ಅವರ ಬೆಂಬಲ ಪಡೆದು ಹೆಚ್ಚು ಲೀಡ್ ಪಡೆಯುತ್ತೇವೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *