ರಾಜ್ಯದಲ್ಲಿ ಹೆಚ್ಚು ಕನ್ನಡ ಶಾಲೆಗಳು ಮುಚ್ಚಿದ್ದೇ ಸಿದ್ದರಾಮಯ್ಯ ಅವಧಿಯಲ್ಲಿ: ಪ್ರತಾಪ್ ಸಿಂಹ

Public TV
2 Min Read

ಮಡಿಕೇರಿ: ಸಿದ್ದರಾಮಯ್ಯ ಅವರ ಅಧಿಕಾರದಲ್ಲೇ ಅತಿ ಹೆಚ್ವು ಕನ್ನಡ ಶಾಲೆಗಳನ್ನು ಮುಚ್ಚಲಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ಬಿಜೆಪಿ ವತಿಯಿಂದ ಸೋಮವಾರಪೇಟೆಯಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭಕ್ಕೆ ಪ್ರತಾಪ್ ಸಿಂಹ ಆಗಮಿಸಿದ್ದರು. ಈ ವೇಳೆ ಕೇಂದ್ರ ಸರ್ಕಾರ ಹಿಂದಿ ಹೇರಿಕೆ ಮಾಡುತ್ತಿದೆ ಎನ್ನುವ ಸಿದ್ದರಾಮಯ್ಯ ಆರೋಪಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದರು.

ಕಳೆದ ಎರಡು ವರ್ಷಗಳ ಹಿಂದೆಯೂ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮೆಟ್ರೋದಲ್ಲಿ ಹಿಂದಿ ಬಳಸಲಾಗುತ್ತಿದೆ ಎಂದು ಟ್ವೀಟ್ ಮಾಡಿದ್ದರು. ಅದಕ್ಕೆ ಇಂದಿನ ಚುನಾವಣೆಯಲ್ಲಿ ಅವರಿಗೆ ರಾಜ್ಯದ ಜನತೆ ತಕ್ಕಪಾಠ ಕಲಿಸಿದ್ದಾರೆ. ಸಿದ್ದರಾಮಯ್ಯ ಅವರ ಅಧಿಕಾರದಲ್ಲೇ ಅತಿ ಹೆಚ್ಚು ಕನ್ನಡ ಶಾಲೆಗಳನ್ನು ಮುಚ್ಚಲಾಗಿದೆ. ಕೇಂದ್ರ ಸರ್ಕಾರದ ವಿರುದ್ಧ ಇವರು ಅಪಪ್ರಚಾರ ಮಾಡುತ್ತಿದ್ದಾರೆ. ಇವೆಲ್ಲದ್ದಕ್ಕೂ ರಾಜ್ಯದ ಜನತೆ ಸೊಪ್ಪು ಹಾಕುವುದಿಲ್ಲ ಎಂದು ತಿರುಗೇಟು ನೀಡಿದರು.

ರಾಜ್ಯದ ಮೇಲೆ ಕೇಂದ್ರ ಸರ್ಕಾರ ಬಲವಂತವಾಗಿ ಹಿಂದಿ ಹೇರುತ್ತಿದೆ ಎಂಬ ವಿಷಯಕ್ಕೆ ಪ್ರತಿಕ್ರಿಯಿಸಿದ ಅವರು, 1969ರಲ್ಲೇ ಕಾಂಗ್ರೆಸ್ ನಾಯಕಿ ಇಂದಿರಾ ಗಾಂಧಿ ಅವರೇ ಮೊದಲಿಗೆ ರೈಲ್ವೇ, ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ಥಳೀಯ ಭಾಷೆಯ ಜೊತೆಗೆ ಹಿಂದಿ, ಆಂಗ್ಲ ಫಲಕಗಳನ್ನು ಬಳಸಲು ಪ್ರಾರಂಭಿಸಿದ್ದರು. ಇಂದು ವಿನಾಃ ನಮ್ಮ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.

ಈ ಬಾರಿಯ ಚುನಾವಣೆ ಬಿಜೆಪಿ ಹಾಗೂ ವಿರೋಧಿ ಪಕ್ಷಗಳ ನಡುವೆ ನಡೆದಿಲ್ಲ. ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು ಎಂದು ದೇಶದ ಜನರೇ ಸ್ಪಷ್ಟವಾದ ಫಲಿತಾಂಶ ಕೊಟ್ಟಿದ್ದಾರೆ ಎಂದರು.

ಲೋಕಸಭಾ ಚುನಾವಣೆಯಲ್ಲಿ ಜನರೇ ವಿರೋಧ ಪಕ್ಷಗಳ ವಿರುದ್ಧ ಹೋರಾಟ ಮಾಡಿದ್ದಾರೆ. ಇದರ ಫಲವಾಗಿ ಬಿಜೆಪಿ 303, ಎನ್‍ಡಿಎಗೆ 352 ಸ್ಥಾನಗಳು ಲಭಿಸಿವೆ. ಬಿಜೆಪಿ ಗೆದ್ದಿರುವ 303 ಸ್ಥಾನಗಳ ಪೈಕಿ 200 ಸಂಸದರು ಶೇ.50ಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದೇವೆ ಎಂದು ಹೇಳಿದರು.


ಲೋಕಸಭಾ ಚುನಾವಣೆಯಲ್ಲಿ ಚಕ್ರವರ್ತಿ ಸೂಲಿಬೆಲೆ ಅವರ ಪಾತ್ರ ಹಿರಿದಾಗಿದೆ. ಈ ಹಿಂದೆ ಪ್ರಧಾನಿ ಅವರು ಸಂಸದರ ಆದರ್ಶ ಗ್ರಾಮ ಕಲ್ಪನೆ ಕೊಟ್ಟಿದ್ದರು. ಮೋದಿ ಅವರ ಕಲ್ಪನೆಯೂ ಇದೇ ಆಗಿದೆ. ಸೂಲಿಬೆಲೆ ಅವರ ಪ್ರಾರಂಭಿಸಿರುವ ಗ್ರಾಮಸ್ವರ್ಗ ಅಭಿಯಾನಕ್ಕೆ ನಮ್ಮ ಸಂಪೂರ್ಣ ಸಹಕಾರ ಇರಲಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *