ಮೋರ್ಬಿ ದುರಂತ: 1 ಲಕ್ಷ ರೂ. ದಂಡ ಪಾವತಿಸಿ – ಪುರಸಭೆ ವಿರುದ್ಧ ಹೈಕೋರ್ಟ್ ಗರಂ

Public TV
2 Min Read

ಗಾಂಧೀನಗರ: 135 ಜನರ ಸಾವಿಗೆ ಕಾರಣವಾದ ಗುಜರಾತ್‍ನ ಮೋರ್ಬಿ ತೂಗು ಸೇತುವೆ (Morbi Bridge) ದುರಂತಕ್ಕೆ ಸಂಬಂಧಿಸಿದಂತೆ ಮೋರ್ಬಿ ಪುರಸಭೆಯನ್ನು (MMC) ಗುಜರಾತ್ ಹೈಕೋರ್ಟ್ (Gujarat High Court) ಇಂದು ತೀವ್ರ ತರಾಟೆಗೆ ತೆಗೆದುಕೊಂಡಿದೆ.

ಹೈಕೋರ್ಟ್ ದಾಖಲಿಸಿಕೊಂಡಿದ್ದ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗೆ ಪುರಸಭೆ ಪ್ರತಿಕ್ರಿಯೆ ನೀಡಲು ವಿಫಲವಾದ ಬೆನ್ನಲ್ಲೇ ಅಫಿಡವಿಟ್ ಸಲ್ಲಿಸಿ ಇಲ್ಲವೇ 1 ಲಕ್ಷ ರೂ. ದಂಡ (Fine) ಪಾವತಿಸಿ ಎಂದು ಮುಖ್ಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ಮತ್ತು ನ್ಯಾಯಮೂರ್ತಿ ಅಶುತೋಷ್ ಜೆ ಶಾಸ್ತ್ರಿ ಅವರಿದ್ದ ಪೀಠ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಭಾರತದಲ್ಲಿ ವಾಸ ಮಾಡುವ ಪ್ರತಿಯೊಬ್ಬರು ಹಿಂದೂಗಳೇ: ಮೋಹನ್ ಭಾಗವತ್

ಈ ದುರ್ಘಟನೆಯನ್ನು ಲಘುವಾಗಿ ಪರಿಗಣಿಸಬೇಡಿ ಈ ಹಿಂದೆ ಕೇಳಿದ್ದ ಪ್ರಶ್ನೆಗೆ ಉತ್ತರ ಇನ್ನೂ ಕೊಟ್ಟಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ. ಒಂದೋ ಅಫಿಡವಿಟ್ ಸಲ್ಲಿಸಿ ಇಲ್ಲವೇ 1 ಲಕ್ಷ ರೂ. ದಂಡ ಪಾವತಿಸಿ ಎಂದು ಮುಖ್ಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ಎಂಎಂಸಿ ಪರ ವಕೀಲರಿಗೆ ತಾಕೀತು ಮಾಡಿದರು. ವಕೀಲರು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ನ್ಯಾಯಧೀಶರು ಗರಂ ಆದರು.

ಅಕ್ಟೋಬರ್ 30 ರಂದು ದುರಂತದ ಕುರಿತಾಗಿ ಸ್ವಯಂಪ್ರೇರಿತವಾಗಿ ಹೈಕೋರ್ಟ್ ಪ್ರಕರಣ ದಾಖಲಿಸಿಕೊಂಡಿತ್ತು. ಈ ದುರಂತಕ್ಕೆ ಸರ್ಕಾರ ಅದರ ಮುಖ್ಯ ಕಾರ್ಯದರ್ಶಿ, ಮೋರ್ಬಿ ನಗರ ಪಾಲಿಕೆ, ನಗರಾಭಿವೃದ್ಧಿ ಇಲಾಖೆ, ರಾಜ್ಯ ಗೃಹ ಇಲಾಖೆ ಮತ್ತು ರಾಜ್ಯ ಮಾನವ ಹಕ್ಕುಗಳ ಆಯೋಗವನ್ನು ಹೊಣೆಗಾರರನ್ನಾಗಿ ಮಾಡುವಂತೆ ನಿರ್ದೇಶಿಸಿತ್ತು. ಇದನ್ನೂ ಓದಿ: ಗುಜರಾತ್‍ನ ಮೋರ್ಬಿ ದುರಂತ- ಉತ್ತರವಿಲ್ಲದ ಐದು ಪ್ರಶ್ನೆಗಳು

ನೋಟಿಸ್ ಜಾರಿ ಮಾಡಿದ್ದರೂ ಪುರಸಭೆ ನ್ಯಾಯಾಲಯದ ಮುಂದೆ ಹಾಜರಾಗದೆ ಅತಿ ಬುದ್ಧಿವಂತಿಕೆ ತೋರುತ್ತಿದೆ ಎಂದು ಪೀಠ ಮಂಗಳವಾರ ಅಸಮಾಧಾನ ವ್ಯಕ್ತಪಡಿಸಿತ್ತು. ಪುರಸಭೆ ಜಿಲ್ಲಾಧಿಕಾರಿ ವ್ಯಾಪ್ತಿಗೆ ಬರಲಿದ್ದು ಅವರು ಚುನಾವಣಾ ಕರ್ತವ್ಯದಲ್ಲಿದ್ದಾರೆ. ಅವರಿಗೆ ನೋಟಿಸ್ ನೀಡುವ ಬದಲು ಪುರಸಭೆಗೆ ನೋಟಿಸ್ ನೀಡಲಾಗಿತ್ತು. ಹೀಗಾಗಿ ನ್ಯಾಯಾಲಯಕ್ಕೆ ಹಾಜರಾಗಲು ವಿಳಂಬವಾಯಿತು ಎಂದು ವಕೀಲರು ವಿವರಿಸಿದ್ದರು. ಖಾಸಗಿ ಗುತ್ತಿಗೆದಾರರೊಡನೆ ಈ ಮೊದಲ ಒಪ್ಪಂದದ ಅವಧಿ ಮುಕ್ತಾಯಗೊಂಡ ನಂತರವೂ ಮೂರು ವರ್ಷಗಳವರೆಗೂ ಮೋರ್ಬಿ ತೂಗು ಸೇತುವೆಯ ನಿರ್ವಹಣೆಗೆ ಏಕೆ ಅನುಮತಿ ನೀಡಲಾಗಿತ್ತು ಎಂದು ಕೋರ್ಟ್ ಪ್ರಶ್ನಿಸಿತ್ತು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *