13 ವರ್ಷದ ಬಳಿಕ ಏರಿಕೆ ಕಂಡಿತು ಭಾರತದ ಮೂಡೀಸ್ ರೇಟಿಂಗ್

Public TV
2 Min Read

ಮುಂಬೈ: ಸುಲಭ ವಹಿವಾಟು ಸೂಚ್ಯಂಕ ಪಟ್ಟಿಯಲ್ಲಿ 30 ಸ್ಥಾನ ಜಿಗಿದು 100ನೇ ಸ್ಥಾನ ಪಡೆದಿದ್ದ ಭಾರತಕ್ಕೆ ಈಗ ಜಾಗತಿಕ ಮಟ್ಟದ ರೇಟಿಂಗ್ ಏಜೆನ್ಸಿ `ಮೂಡೀಸ್’ ಬಿಎಎ2 ರೇಟಿಂಗ್ ನೀಡಿ ಮೋದಿ ಸರ್ಕಾರದ ಆರ್ಥಿಕ ನೀತಿಯನ್ನು ಹೊಗಳಿದೆ.

13 ವರ್ಷದ ಬಳಿಕ ಮೂಡೀಸ್ ರೇಟಿಂಗ್ ಮೇಲ್ದರ್ಜೆಗೆ ಏರಿದ್ದು, 2004ರಲ್ಲಿ ಭಾರತಕ್ಕೆ `ಬಿಎಎ3′ ರೇಟಿಂಗ್ ನೀಡಿತ್ತು. ನೋಟು ನಿಷೇಧ, ಜಿಎಸ್‍ಟಿ ಜಾರಿ, ಬ್ಯಾಂಕ್ ಖಾತೆಗಳಿಗೆ ಹಾಗೂ ಸರ್ಕಾರದ ಸೌಲಭ್ಯಗಳಿಗೆ ಆಧಾರ್ ಕಡ್ಡಾಯಗೊಳಿಸಿದ ಪರಿಣಾಮ ದೇಶದ ಆರ್ಥಿಕತೆಯ ಮೇಲೆ ಧನಾತ್ಮಕ ಪರಿಣಾಮ ಬೀರಿದೆ ಎಂದು ಮೂಡಿಸ್ ತನ್ನ ವರದಿಯಲ್ಲಿ ತಿಳಿಸಿದೆ.

ದೇಶಿ ಮತ್ತು ವಿದೇಶಿ ಹೂಡಿಕೆ ಬೆಳವಣಿಗೆ ಆಗುತ್ತಿದೆ. ಉತ್ಪಾದನೆ, ಉದ್ಯಮಗಳಿಗೆ ಪೂರಕ ವಾತಾವರಣ ನಿರ್ಮಾಣವಾಗುತ್ತಿರುವುದರಿಂದ ದೇಶದ ಅರ್ಥವ್ಯವಸ್ಥೆ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದು ಮೂಡಿಸ್ ಹೇಳಿದೆ.

ನೋಟ್ ಬ್ಯಾನ್ ಮತ್ತು ತರಾತುರಿಯಲ್ಲಿ ಜಿಎಸ್‍ಟಿಯನ್ನು ಜಾರಿಗೊಳಿಸಿದ್ದರಿಂದ ದೇಶದ ಅರ್ಥವ್ಯವಸ್ಥೆ ಕುಸಿದುಬಿದ್ದಿದೆ ಎಂದು ಪ್ರತಿಪಕ್ಷಗಳು ಮೋದಿ ಸರ್ಕಾರದ ಆರ್ಥಿಕ ನೀತಿಯನ್ನು ಟೀಕಿಸಿತ್ತು. ಆದರೆ ಈಗ ಮೂಡಿಸ್ ರೇಟಿಂಗ್ ಏರಿಸಿದ್ದರಿಂದ ಪ್ರತಿಪಕ್ಷಗಳ ಟೀಕೆಗೆ ಉತ್ತರ ನೀಡಲು ಬಿಜೆಪಿಗೆ ಪ್ರಬಲ ಅಸ್ತ್ರವೊಂದು ಈಗ ಸಿಕ್ಕಿದಂತಾಗಿದೆ.

2004ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಇದ್ದಾಗ ಮೂಡಿಸ್ ರೇಟಿಂಗ್ ಏರಿಕೆಯಾಗಿತ್ತು. ಈಗ ಎನ್‍ಡಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಮತ್ತೊಮ್ಮೆ ರೇಟಿಂಗ್ ಏರಿಕೆಯಾಗಿದೆ.

ಏನಿದು ಮೂಡಿಸ್ ರೇಟಿಂಗ್?
ಅಮೆರಿಕದ ಮೂಲದ ಮೂಡೀಸ್ ಅರ್ಥವ್ಯವಸ್ಥೆ, ವಿದೇಶಿ ಹೂಡಿಕೆ, ಸಾಲ ಯೋಗ್ಯತೆಯ ಪರಿಸ್ಥಿತಿ ಮತ್ತು ಅದರ ಮೇಲೆ ಪರಿಣಾಮ ಬೀರುತ್ತಿರುವ ವಾಸ್ತವ ಅಂಶಗಳ ಬಗ್ಗೆ ಅಧ್ಯಯನ ನಡೆಸಿ ವಿವಿಧ ದೇಶಗಳಿಗೆ ರೇಟಿಂಗ್ ನೀಡುತ್ತದೆ. 1909ರಲ್ಲಿ ಈ ಮೂಡಿಸ್ ಕಂಪೆನಿ ಆರಂಭಗೊಂಡಿದ್ದು, ಉತ್ತಮ ರೇಟಿಂಗ್ ನೀಡಿದರೆ ಹೂಡಿಕೆದಾರರು ಆ ದೇಶದಲ್ಲಿ ಬಂಡವಾಳ ಹೂಡಲು ಮುಂದೆ ಬರುತ್ತಾರೆ. ಜಾಗತಿಕ ಮಟ್ಟದಲ್ಲಿ ಮೂಡೀಸ್ ಜತೆಗೆ ಸ್ಟ್ಯಾಂಡರ್ಡ್ ಅಂಡ್ ಪೂರ್, ಫೆಚ್ ಸೇರಿದಂತೆ ಕೆಲವು ಪ್ರತಿಷ್ಠಿತ ರೇಟಿಂಗ್ ಏಜೆನ್ಸಿಗಳು ಕಾರ್ಯ ನಿರ್ವಹಿಸುತ್ತಿವೆ.

ಏನಿದು ಬಿಎಎ2 ರೇಟಿಂಗ್?
ಮಧ್ಯಮ ಪ್ರಮಾಣದ ಆರ್ಥಿಕ ಅಭಿವೃದ್ಧಿಯನ್ನು ಬಿಎಎ2 ರೇಟಿಂಗ್ ಸೂಚಿಸುತ್ತದೆ. ಅಭಿವೃದ್ಧಿ ಹೊಂದಿದ ಅರ್ಥ ವ್ಯವಸ್ಥೆಗೆ ಎಎಎ ರೇಟಿಂಗ್ ನೀಡಲಾಗುತ್ತದೆ.

ಬ್ರಿಕ್ಸ್ ರೇಟಿಂಗ್ ಬೇಕು ಎಂದಿದ್ದ ಮೋದಿ:
ಈ ವರ್ಷ ಚೀನಾದಲ್ಲಿ ನಡೆದ ಬ್ರಿಕ್ಸ್(ಬ್ರೆಜೆಲ್, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ) ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಪಾಶ್ಚಿಮಾತ್ಯ ರಾಷ್ಟ್ರಗಳು ನೀಡುವ ಕ್ರೆಡಿಟ್ ರೇಟಿಂಗ್ ಬದಲಾಗಿ ಬ್ರಿಕ್ಸ್ ರಾಷ್ಟ್ರಗಳು ತಮ್ಮದೇ ಆದ ರೇಟಿಂಗ್ ಏಜೆನ್ಸಿಯನ್ನು ಸ್ಥಾಪಿಸಬೇಕು ಎಂದು ಹೇಳಿದ್ದರು.

ಇದನ್ನೂ ಓದಿ: ಸುಲಭ ವಹಿವಾಟು ವಿಶ್ವದ ಸೂಚ್ಯಂಕ ಪಟ್ಟಿಯಲ್ಲಿ 30 ಸ್ಥಾನ ಏರಿ 100ನೇ ಸ್ಥಾನಕ್ಕೆ ಜಿಗಿದ ಭಾರತ

 

Share This Article
Leave a Comment

Leave a Reply

Your email address will not be published. Required fields are marked *