ಗದಗ: ಮಂಗಗಳನ ಹಾವಳಿಯಿಂದ ಮಧ್ಯರಾತ್ರಿಯಿರಲಿ, ಹಾಡಹಗಲೇ ಮಹಿಳೆಯರು ಓಡಾಡೋಕೆ ಹೆದರುವ ಸ್ಥಿತಿ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ.
ಗದಗ ಜಿಲ್ಲೆಯ ಕದಾಂಪುರ ಗ್ರಾಮದಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದೆ. ಈ ಗ್ರಾಮವು ಕಪ್ಪತಗುಡ್ಡದ ಸೆರಗಲ್ಲಿ ಇರುವುದರಿಂದ ದಿನ ಬೆಳಗಾದರೆ ಸಾಕು ಗ್ರಾಮದಲ್ಲಿ ವಾನರ ಸೈನ್ಯ ಬಂದು ದಾಂಗುಡಿ ಇಡುತ್ತವೆ. ಮನೆಗಳಿಗೆ ನುಗ್ಗೋ ಈ ಕೆಂಪು ಕೋತಿಗಳು, ಮನೆಯೊಳಗಿರುವ ದವಸ ಧಾನ್ಯಗಳನ್ನು ಚೆಲ್ಲಾಪಿಲ್ಲಿ ಮಾಡುತ್ತಾವೆ.
ಈ ಮಂಗಗಳಿಗೆ ಮಹಿಳೆಯರನ್ನು ಕಂಡರೆ ಸಾಕು, ಅವರ ಸೀರೆ ಎಳೆದು ದಾಂಧಲೆ ಮಾಡುತ್ತವೆ. ಇನ್ನೂ ಚಿಕ್ಕ ಮಕ್ಕಳ ಕೈಲಿರುವ ತಿಂಡಿ ತಿನಿಸುಗಳನ್ನು ಕಸಿದುಕೊಂಡು ಹೋಗುತ್ತವೆ. ಮನೆಯೊಳಗೆ ಒಂದು ಕ್ಷಣ ಮೈಮರೆತು ಕೂರುವಾಗಿಲ್ಲ. ಒಂದು ವೇಳೆ ಮೈಮರೆತರೆ ಸಾಕು ಆ ಮನೆಗೆ ಕೋತಿಗಳ ಎಂಟ್ರಿ ಗ್ಯಾರೆಂಟಿ ಎಂದು ಗ್ರಾಮದ ಮಹಿಳೆಯರು ಹೇಳುತ್ತಿದ್ದಾರೆ.
ಕಾಟ ಕೊಡುವ ಕೋತಿಗಳನ್ನು ಹಿಡಿದು ಅವುಗಳ ಕಾಟ ತಪ್ಪಿಸಿ ಅಂತ ಹಲವಾರು ಬಾರಿ ಕದಾಂಪುರ ಗ್ರಾಮಸ್ಥರು ಅರಣ್ಯ ಇಲಾಖೆ ಸಿಬ್ಬಂದಿಗೆ ಮನವಿ ಮಾಡಿದ್ದಾರೆ. ಆದ್ರೆ ಅರಣ್ಯ ಇಲಾಖೆ ಸಿಬ್ಬಂದಿ ಕೋತಿ ಹಿಡಿಯೋದಿರಲಿ, ಕನಿಷ್ಠ ಕದಾಂಪುರಕ್ಕೆ ಬಂದು ಪರಿಸ್ಥಿತಿಯನ್ನೂ ಸಹ ನೋಡಿಲ್ಲ. ಇದರಿಂದ ರೋಸಿಹೋದ ಗ್ರಾಮದ ಯುವಕರು, ಹಿರಿಯರ ಸಲಹೆ ಪಡೆದು ತಾವೇ ಕೋತಿ ಹಿಡಿಯೋಕೆ ಬೋನನ್ನು ತಂದಿಟ್ಟು, ಹಲವಾರು ಕೋತಿಗಳನ್ನು ಹಿಡಿದು ಹಾಕಿದ್ದಾರೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಗ್ರಾಮದಲ್ಲೆಲ್ಲಾ ಬಡಿಗೆ ಹಿಡಿದು ಓಡಾಡೋ ಯುವಕರ ತಂಡ ಕೋತಿಗಳನ್ನು ಬೋನಿನ ಕಡೆ ಓಡಿಸುತ್ತಾರೆ. ಹಾಗೆ ಬರುವ ಕೋತಿಗಳು ಬೋನಿನಲ್ಲಿ ಇಟ್ಟಿರುವ ತಿನಿಸುಗಳ ಆಸೆಯಿಂದ ಒಳಹೋಗುತ್ತವೆ. ಈ ವೇಳೆ ದೂರದಲ್ಲಿರುವ ಯುವಕರು ಬೋನಿಗೆ ಕಟ್ಟಿದ ದಾರ ಬಿಡುವ ಮೂಲಕ ಅವುಗಳನ್ನು ಕೂಡಿ ಹಾಕುತ್ತಾರೆ ಎಂದು ಗ್ರಾಮಸ್ಥ ನಿಂಗಪ್ಪ ತಿಳಿಸಿದ್ದಾರೆ.
ಗ್ರಾಮಸ್ಥರು ಹಿಡಿದಿರುವ ಕೋತಿಗಳಲ್ಲಿ ಹಲವು ಕೋತಿಗಳು ಒಂದಕ್ಕೊಂದು ಜಗಳವಾಡಿಕೊಂಡು ಮೈಯೆಲ್ಲಾ ರಕ್ತ ಮಾಡಿಕೊಂಡಿವೆ. ಹಿಡಿದಿರುವ ಕೋತಿಗಳನ್ನು ಗ್ರಾಮದ ಹತ್ತಿರದಲ್ಲಿಯೇ ಇರುವ ಕಪ್ಪತಗುಡ್ಡಕ್ಕೆ ಹೋಗಿ ಬಿಟ್ಟು ಬರಲಾಗುತ್ತಿದೆ. ಈಗಾದರೂ ಸಹ ಅರಣ್ಯ ಇಲಾಖೆ ಅಧಿಕಾರಿಗಳು ಇಲ್ಲಸಲ್ಲದ ಸಬೂಬು ಹೇಳದೆ ಗ್ರಾಮಸ್ಥರಿಗೆ ತೊಂದರೆ ಕೊಡುವ ಕೋತಿಗಳನ್ನು ಹಿಡಿಯಬೇಕಾಗಿದೆ ಎಂದು ಸ್ಥಳೀಯರು ಮನವಿ ಮಾಡಿಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews