ಮಂಗಗಳ ಸಾವಿನ ಸಂಖ್ಯೆ 20 ಕ್ಕೆ ಏರಿಕೆ-ಕೆಎಂಸಿ ಮಣಿಪಾಲದಲ್ಲಿ 73 ಜನರಿಗೆ ಚಿಕಿತ್ಸೆ

By
2 Min Read

-ಮಂಗನ ಕಾಯಿಲೆ ಭಯದಲ್ಲಿ ಉಡುಪಿ ಜನರು

ಉಡುಪಿ: ಮಂಗನ ಕಾಯಿಲೆ ಕರಾವಳಿ ಮತ್ತು ಮಲೆನಾಡಿನ ಜನರ ನಿದ್ದೆಗೆಡಿಸಿದೆ. ಉಡುಪಿ ಜಿಲ್ಲೆಗಳಲ್ಲಿ ಮಂಗನ ಕಾಯಿಲೆಯಿಂದ ಜನರು ಸಾವನ್ನಪ್ಪುತ್ತಿರುವ ಸಂಖ್ಯೆ 20ಕ್ಕೆರಿದೆ. ಮಣಿಪಾಲದಲ್ಲಿ ಈವರೆಗೆ 73 ಮಂದಿ ಪೀಡಿತರಿಗೆ ಚಿಕಿತ್ಸೆ ನೀಡಲಾಗಿದೆ. ರೋಗ ಹರಡೋದನ್ನು ತಪ್ಪಿಸಲು ಡಿಸಿ ಕಚೇರಿಯಲ್ಲಿ ಮಹತ್ವದ ಸಭೆ ನಡೆಸಲಾಯ್ತು.

ರಾಜ್ಯದಲ್ಲಿ ಮತ್ತೊಮ್ಮೆ ಮಂಗನ ಕಾಯಿಲೆ ಸದ್ದು ಮಾಡಿದೆ. ಮಲೆನಾಡು ಜಿಲ್ಲೆ ಶಿವಮೊಗ್ಗದಲ್ಲಿ ಮಂಗನ ಕಾಯಿಲೆಯ ತೀವ್ರತೆ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಈ ಕಾಯಿಲೆ ನೆರೆ ಜಿಲ್ಲೆ ಉಡುಪಿಯಲ್ಲೂ ಭೀತಿ ಹುಟ್ಟಿಸಿದೆ. ಮುಖ್ಯವಾಗಿ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಮಂಗಗಳ ಸಾವು ಪ್ರಕರಣಗಳು ದಿನೇದಿನೇ ಹೆಚ್ಚುತ್ತಲೇ ಇವೆ. ಸಹಜವಾಗಿಯೇ ಇದು ಈ ಭಾಗದ ಜನರಲ್ಲಿ ಆತಂಕವನ್ನು ಹೆಚ್ಚುವಂತೆ ಮಾಡಿದೆ. ಕಳೆದ ಒಂದು ವಾರದ ಅಂತರದಲ್ಲಿ ಜಿಲ್ಲೆಯಲ್ಲಿ ಒಟ್ಟು ಇಪ್ಪತ್ತು ಕೋತಿಗಳು ಸಾವನ್ನಪ್ಪಿದೆ. ಜಿಲ್ಲಾ ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಈ ಪೈಕಿ ಹನ್ನೇರಡು ಮಂಗಗಳ ಮರಣೋತ್ತರ ಪರೀಕ್ಷೆಯನ್ನು ಹೆಚ್ಚಿನ ತಪಾಸಣೆಗೆ ಕಳಿಸಲಾಗಿದೆ. ಜೊತೆಗೆ ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಔಷಧಿಯನ್ನು ಸಿದ್ಧಮಾಡಿಟ್ಟುಕೊಳ್ಳಲು ಸೂಚನೆ ನೀಡಲಾಗಿದೆ. 1080 ಬಾಟಲಿ ಡಿಎಂಪಿ ತೈಲ ವನ್ನು ಶಿವಮೊಗ್ಗ ದಿಂದ ತರಿಸಿಕೊಳ್ಳಲಾಗಿದೆ. ಇದನ್ನೂ ಓದಿ: ಏನಿದು ಮಂಗನ ಜ್ವರ? ಕಾಯಿಲೆ ಹೇಗೆ ಬರುತ್ತೆ? ರೋಗ ಲಕ್ಷಣ ಏನು? ಚಿಕಿತ್ಸೆ ಹೇಗೆ- ಇಲ್ಲಿದೆ ಸಂಪೂರ್ಣ ಮಾಹಿತಿ

ಕಾರ್ಕಳ ಮತ್ತು ಕುಂದಾಪುರ ತಾಲೂಕಿನಲ್ಲಿ ಮಂಗಗಳ ಸಾವು ಸಂಭವಿಸುತ್ತಿರುವುದರಿಂದ ಈ ತಾಲೂಕುಗಳಲ್ಲಿ ಕರಪತ್ರ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಈ ಪ್ರದೇಶಗಳಲ್ಲಿ ಮಂಗಗಳ ಸಾವು ಸಂಭವಿಸಿದ್ರೆ ತಕ್ಷಣ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಾಹಿತಿ ನೀಡುವಂತೆ ಕೋರಲಾಗಿದೆ. ಕಾಯಿಲೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಹತ್ವದ ಸಭೆ ನಡೆಯಿತು. ಕೇರಳದ ತಜ್ಞ ವೈದ್ಯರನ್ನೂ ಈ ಸಭೆಗೆ ಕರೆಸಲಾಗಿತ್ತು. ಮಣಿಪಾಲದ ಕೆಎಂಸಿ ಆಸ್ಪತ್ರೆಯೊಂದರಲ್ಲೇ 73 ರೋಗಿಗಳಿಗೆ ಚಿಕಿತ್ಸೆ ನೀಡಲಾಗ್ತಿರುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಈ ಪೈಕಿ 50 ಮಂದಿಗೆ ಚಿಕಿತ್ಸೆ ನೀಡಿ ಡಿಸ್ಚಾರ್ಜ್ ಮಾಡಲಾಗಿದೆ. ಈಗ ಹನ್ನೇರಡು ರೋಗಿಗಳಿಗೆ ಮಣಿಪಾಲದಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ವಿಶೇಷ ವಾರ್ಡ್ ವ್ಯವಸ್ಥೆ, ತಜ್ಞ ವೈದ್ಯರನ್ನು ನೇಮಿಸಲಾಗಿದೆ. ಉಚಿತವಾಗಿ ಚಿಕಿತ್ಸೆ ನೀಡಲಿ ರಾಜ್ಯ ಸರ್ಕಾರ ಸೂಚನೆ ನೀಡಿದೆ. ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸದ್ಯ ಕಾರ್ಕಳ ಮತ್ತು ಕುಂದಾಪುರ ತಾಲೂಕುಗಳು ಪಶ್ಚಿಮ ಘಟ್ಟದ ತಪ್ಪಲಿನಲ್ಲಿದ್ದು ದಟ್ಟ ಕಡಿನಿಂದ ಆವೃತವಾಗಿದೆ. ಹೀಗಾಗಿ ಈ ಭಾಗದ ಜನರು ಮಂಗನ ಕಾಯಿಲೆಯ ಭೀತಿಯಲ್ಲೇ ದಿನ ಕಳೆಯುವಂತಾಗಿದೆ. 30 ವರ್ಷಗಳ ಹಿಂದೆ ಉಡುಪಿ ಜಿಲ್ಲೆಯಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡಿತ್ತು. ಇದೀಗ ಶಿವಮೊಗ್ಗ, ಸಾಗರದಿಂದ ಜಿಲ್ಲೆಗೆ ಪಸರಿಸಿದ್ದು ಅಧಿಕಾರಿಗಳು ಸೂಕ್ತ ಮುನ್ನೇಚ್ಚರಿಕೆಗೆ ಮುಂದಾಗಿದ್ದಾರೆ. ಕಳೆದ 48 ಗಂಟೆಗಳಲ್ಲಿ ಯಾರಿಗೂ ಸೋಂಕು ತಗುಲಿಲ್ಲ ಎಂಬುವುದು ಕೊಂಚ ನೆಮ್ಮದಿಯ ವಿಚಾರ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *