ಮೊಯಿದ್ದೀನ್ ಬಾವ ಸಹೋದರನ ಶವ ಫಲ್ಗುಣಿ ನದಿಯಲ್ಲಿ ಪತ್ತೆ

Public TV
1 Min Read

ಮಂಗಳೂರು: ಮಾಜಿ ಕಾಂಗ್ರೆಸ್‌ ಶಾಸಕ ಮೊಯಿದ್ದೀನ್ ಬಾವ (Moinuddin Bawa) ಅವರ ಸಹೋದರ ಮುಮ್ತಾಜ್ ಅಲಿ (Mumtaz Ali) ಅವರ ಶವ ಸೋಮವಾರ ಬೆಳಗ್ಗೆ ಪತ್ತೆಯಾಗಿದೆ.

ಕೂಳೂರಿನ ಸೇತುವೆಯ ಸಮೀಪವೇ ಇರುವ ಮತ್ತೊಂದು ಸೇತುವೆ ಬಳಿ ಇಂದು ನೀರಿನಲ್ಲಿ ವ್ಯಕ್ತಿಯೊಬ್ಬರ ತಲೆ ಕಾಣುತ್ತಿತ್ತು. ಸಮೀಪಕ್ಕೆ ತೆರಳಿದಾಗ ಇದು ಮುಮ್ತಾಜ್ ಅಲಿ ಅವರ ದೇಹ ಎನ್ನುವುದು ಖಚಿತವಾಗಿದೆ.

ಫಲ್ಗುಣಿ ನದಿಯ ನೀರಿನಿಂದ ಶವವನ್ನು ಈಗ ಮೇಲಕ್ಕೆ ಎತ್ತಲಾಗಿದೆ. ಮುಮ್ತಾಜ್ ಅಲಿ ಅವರು ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿರಬಹುದು ಎನ್ನಲಾಗುತ್ತಿದೆ. ಮರಣೋತ್ತರ ಪರೀಕ್ಷೆಯ ನಂತರ ಇದು ದೃಢಪಡಲಿದೆ.

 

ಬಾವಾ ಅವರ ತಮ್ಮ 52 ವರ್ಷದ ಮುಮ್ತಾಜ್ ಅಲಿ ಭಾನುವಾರ ಬೆಳಗ್ಗೆ ದಿಢೀರ್ ನಾಪತ್ತೆಯಾಗಿದ್ದರು. ಕೂಳೂರಿನ ಸೇತುವೆ ಬಳಿ ಅಪಘಾತ ನಡೆದ ಸ್ಥಿತಿಯಲ್ಲಿ ಕಾರು ಪತ್ತೆಯಾಗಿತ್ತು. ಇದು ಹಲವು ಅನುಮಾನಗಳನ್ನು ಹುಟ್ಟುಹಾಕಿತ್ತು.

ಮುಮ್ತಾಜ್ ಅಲಿ ಫಿಶ್‌ಮಿಲ್, ಕಾಲೇಜು ಸೇರಿದಂತೆ ಹಲವು ಉದ್ಯಮ ನಡೆಸಿಕೊಂಡಿದ್ದರು. ಕಳೆದ ಕೆಲ ದಿನಗಳಿಂದ ಮಾನಸಿಕವಾಗಿ ನೊಂದಿದ್ದ ಮುಮ್ತಾಜ್ ಅಲಿ ಶನಿವಾರ ರಾತ್ರಿ ಮನೆಯವರೊಂದಿಗೆ ಮುನಿಸಿಕೊಂಡು ಮಾತುಕತೆ ನಡೆಸಿದ್ದರು. ಭಾನುವಾರ ಬೆಳಗ್ಗಿನ ಜಾವ 3 ಗಂಟೆಗೆ ಯಾರಿಗೂ ತಿಳಿಯದಂತೆ ತನ್ನ ಬಿಎಂಡಬ್ಲ್ಯೂ ಕಾರನ್ನು (BMW Car) ಚಲಾಯಿಸಿಕೊಂಡು ಕದ್ರಿಯ ತನ್ನ ಮನೆಯಿಂದ ಪಣಂಬೂರು ಬಳಿ ಬಂದಿದ್ದರು. ಅಲ್ಲಿಂದ ವೇಗವಾಗಿ ಕೂಳೂರು ಹೈವೇಯಲ್ಲಿ ಬರುತ್ತಿದ್ದಾಗ ಖಾಸಗಿ ಬಸ್ಸೊಂದಕ್ಕೆ ಡಿಕ್ಕಿ ಹೊಡೆದಿದ್ದರು.

ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ  ಫಲ್ಗುಣಿ ನದಿಯಲ್ಲಿ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ತಂಡ ಸೇರಿದಂತೆ ಈಜುತಜ್ಞ ಈಶ್ವರ್ ಮಲ್ಪೆ ತಂಡ ಮುಮ್ತಾಜ್ ಅಲಿಗಾಗಿ ಶೋಧ ಕಾರ್ಯ ನಡೆಸಿತ್ತು.

 

Share This Article