ಶಿವಮೊಗ್ಗದಲ್ಲಿ ಘನತೆ ತಂದ ಮೊಹರಂ-ಗಣೇಶ ಹಬ್ಬ

Public TV
2 Min Read

ಶಿವಮೊಗ್ಗ: ಒಂದು ಧರ್ಮದ ಫ್ಲೆಕ್ಸ್ ಇವರು ಕಿತ್ತು ಹಾಕಿದರು, ಅವರ ಫ್ಲೆಕ್ಸ್ ಗೆ ಇವರ ಬೆಂಕಿ ಹಚ್ಚಿದರು ಎಂಬಂತ ಕಾರಣಕ್ಕೆ ಊರು ಹೊತ್ತಿ ಉರಿದ ಘಟನೆಗಳು ಇಂದಿನ ದಿನಗಳಲ್ಲಿ ಸಾಮಾನ್ಯ. ಇಂಥ ಸುದ್ದಿಗಳ ನಡುವೆ ಶಿವಮೊಗ್ಗದ ವಿಜಯನಗರದ ಸೌಹಾರ್ದ ಗಣಪತಿ ಗಮನ ಸೆಳೆಯುತ್ತಿದೆ.

ಶಿವಮೊಗ್ಗ ಕೋಮು ಸೂಕ್ಷ್ಮ ಪ್ರದೇಶ. ಈ ವರ್ಷ ಮೋಹರಂ ಹಾಗೂ ಗಣಪತಿ ಹಬ್ಬ ಒಂದೇ ದಿನ ಬಂದಿರುವುದು ಜಿಲ್ಲೆಯ ಪೊಲೀಸರಿಗೆ ದೊಡ್ಡ ತಲೆನೋವಾಗಿತ್ತು. ಆದರೆ, ಪೊಲೀಸರ ತಲೆನೋವು ಕಡಿಮೆ ಮಾಡುವಂತಹ ಕಾರ್ಯ ವಿಜಯನಗರ ಫಸ್ಟ್ ಮೈನ್ ನಲ್ಲಿರೋ ಎರಡನೇ ತಿರುವಿನಲ್ಲಿ ನಡೆದಿದೆ.

ಈ ಕೇರಿಯಲ್ಲಿ ಹಿಂದೂಗಳು ಹಾಗೂ ಅಷ್ಟೇ ಪ್ರಮಾಣದ ಮುಸ್ಲಿಮರೂ ಇದ್ದಾರೆ. ಎರಡೂ ಹಬ್ಬಗಳು ಒಟ್ಟಿಗೆ ಬಂದಿದ್ದು ಇಲ್ಲಿನ ಜನರಲ್ಲಿ ಸಂಭ್ರಮ ಮೂಡಿಸಿದೆ. ಈ ರಸ್ತೆಯ ಗೌರಿಪುತ್ರ ಗೆಳೆಯರ ಬಳಗ ಪ್ರತೀ ವರ್ಷದಂತೆ ಈ ವರ್ಷವೂ ಗಣೇಶನನ್ನು ಕೂರಿಸಿದೆ. ಇಲ್ಲಿನ ಯುವಕರು ಮೋಹರಂ ಹಾಗೂ ಗಣಪತಿ ಶುಭಾಶಯದ ಒಂದೇ ಕಡೆ ಫ್ಲೆಕ್ಸ್ ಹಾಕಿದ್ದಾರೆ. ಇಡೀ ರಸ್ತೆಯನ್ನು ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದಾರೆ.

ಕೇಸರಿ ಬಾವುಟದ ಜೊತೆಗೆ ಹಸಿರ ಬಾವುಟವೂ ಹಾರಾಡುತ್ತಿದೆ. ಮುಸ್ಲಿಂ ಹುಡುಗರು ಗಣಪತಿ ಮುಂದೆ ಡೋಲು ಬಾರಿಸುತ್ತಾರೆ. ಪ್ರಸಾದ ಹಂಚಲು ನಿಲ್ಲುತ್ತಾರೆ. ಇದೆಲ್ಲವನ್ನೂ ಕಣ್ಣಿಂದ ನೋಡುವುದೇ ಒಂದು ಸಂಭ್ರಮ. ಗಣಪತಿ ಪೆಂಡಾಲ್ ನಿಂದ ನೂರು ಮೀಟರ್ ದೂರದಲ್ಲಿ ಮೊಹರಂ ಹಬ್ಬದ ಪ್ರಯುಕ್ತ ಮೌಲಾ ಆಲಿ ಮಖಾನ್ ಕೂರಿಸಿದ್ದಾರೆ. ಇಲ್ಲಿಯೂ ಹಿಂದೂಗಳು ಪೂಜೆ ಮಾಡಿಸುತ್ತಾರೆ. ಮೆರವಣಿಗೆಯಲ್ಲಿ ಸಾಗುತ್ತಾರೆ. ಹಲವು ವರ್ಷಗಳಿಂದ ಹಿಂದೂ- ಮುಸ್ಲಿಂ ಧರ್ಮದ ಎಲ್ಲಾ ಹಬ್ಬಗಳನ್ನೂ ಒಟ್ಟಿಗೇ ಆಚರಿಸುತ್ತಿದ್ದರು. ಆದರೆ, ಈ ವರ್ಷ ಗಣಪತಿ ಹಬ್ಬ- ಮೊಹರಂ ಒಟ್ಟಿಗೆ ಬಂದಿದ್ದರಿಂದ ಯಾವುದೇ ತಲೆಬಿಸಿ ಇಲ್ಲದೆ ಸಂಭ್ರಮ- ಸಡಗರದಿಂದ ಎರಡೂ ಧರ್ಮದವರು ಸೇರಿ ಒಟ್ಟಿಗೆ ಹಬ್ಬ ಮಾಡುತ್ತಿದ್ದಾರೆ.

ಧರ್ಮ ನಾವು ಮಾಡಿಕೊಂಡಿರುವುದು. ನಾವು ಚೆನ್ನಾಗಿದ್ದರೆ ನಮ್ಮ ನಮ್ಮ ಧರ್ಮವೂ ಚೆನ್ನಾಗಿರುತ್ತದೆ. ಮನುಷ್ಯತ್ವ- ಮಾನವೀಯ ಸಂಬಂಧಗಳು ಮೊದಲು ಎಂಬ ತತ್ವಾದರ್ಶ ಇಟ್ಟುಕೊಂಡ ಇಲ್ಲಿನ ಜನ ಇಡೀ ರಾಜ್ಯ- ದೇಶಕ್ಕೇ ಮಾದರಿಯಾಗಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
1 Comment

Leave a Reply

Your email address will not be published. Required fields are marked *