ಶಿವಮೊಗ್ಗ: ಪ್ರಶಾಂತವಾಗಿ ಹರಿಯುತ್ತಿದ್ದ ತುಂಗೆಗೆ ಆರತಿ ಬೆಳಗಲಾಯಿತು. ನಮಾಮಿ ತುಂಗೆ ಎಂದು ನಮಿಸಲಾಯಿತು. ಆ ಊರಿನ ಜನರೆಲ್ಲರೂ ಸೇರಿ ತುಂಗೆಯಲ್ಲಿ ಶ್ರೀರಾಮನಿಗೆ ತೆಪ್ಪೋತ್ಸವ ನಡೆಸಿ, ಆರತಿ ಬೆಳಗಿ ದೀಪಗಳನ್ನು ಬೆಳಗಿ ವಿಶೇಷ ಪೂಜೆ ನೆರವೇರಿಸಿದರು. ಅಲ್ಲದೆ ರಾಷ್ಟ್ರದಲ್ಲಿಯೇ ಗುರುತಿಸಿಲ್ಪಟ್ಟಿರುವ ಆರ್ಎಸ್ಎಸ್ ಸರಸಂಘ ಸಂಚಾಲಕ ಮೋಹನ್ ಜೀ ಭಾಗವತ್ ಕೂಡ ಈ ನಮಾಮಿ ತುಂಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಶಿವಮೊಗ್ಗದ ಸಂಸ್ಕೃತ ಗ್ರಾಮ ಎಂದೇ ಕರೆಸಿಕೊಳ್ಳುವ ಮತ್ತೂರಿನಲ್ಲಿ ದೇಶದ ಆರ್ಎಸ್ಎಸ್ ಮುಖಂಡ ಮತ್ತು ಸರಸಂಘ ಸಂಚಾಲಕ ಮೋಹನ್ ಜೀ ಭಾಗವತ್ ವಾಸ್ತವ್ಯ ಹೂಡಿದ್ದು ವಿಶೇಷ ಹೋಮ-ಹವನದಲ್ಲಿ ಪಾಲ್ಗೊಂಡಿದ್ದಾರೆ.
ಶುಕ್ರವಾರ ಇಡೀ ದಿನ ಶಿವಮೊಗ್ಗದ ಮತ್ತೂರಿನಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮೋಹನ್ ಜೀ ಭಾಗವತ್ ಅವರು ಸಂಜೆ ರಾಮ ತಾರಕ ಯಜ್ಞದ ಪೂರ್ಣಾಹುತಿ ಹೋಮದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅಯೋಧ್ಯೆಯ ರಾಮ ಜನ್ಮ ಭೂಮಿಯಲ್ಲಿ ಮಂದಿರ ನಿರ್ಮಾಣದ ತೀರ್ಪು ಹೊರಬಿದ್ದ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ವಿಶೇಷ ಪೂಜೆ-ಪುನಸ್ಕಾರ ಯಜ್ಞ ಕಾರ್ಯಕ್ರಮ ನಡೆಸಲಾಗಿದ್ದು, ಮತ್ತೂರಿನ ಜನರು ಎಂದುಕೊಂಡಂತೆ ಶುಕ್ರವಾರ ಈ ವಿಶೇಷ ಕಾರ್ಯಕ್ರಮ ನಡೆಸಲಾಯಿತು. ತುಂಗಾ ನದಿಯ ಮಧ್ಯದಲ್ಲಿ ನಿರ್ಮಾಣ ಮಾಡಲಾಗಿದ್ದ ವಿಶೇಷ ವೇದಿಕೆಯಲ್ಲಿ ನಿಂತು ಸೀತಾರಾಮಾಂಜನೇಯರಿಗೆ ಮತ್ತು ತುಂಗೆಗೆ ಆರತಿ ಬೆಳಗಿ ಮೋಹನ್ ಜೀ ಭಾಗವತ್ ವಿಶೇಷ ಪೂಜೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಮೋಹನ್ ಭಾಗವತ್ ದೇಶದಲ್ಲಿ ಏಕತೆಯನ್ನು ಸಾಧಿಸುವ ನಿಟ್ಟಿನಲ್ಲಿ ಹಿಂದೂ ಸಂಘಟನೆ ಕಾರ್ಯೋನ್ಮುಖವಾಗಿದೆ. ಪ್ರಸ್ತುತ ಸಂಘಟನೆಯನ್ನು ವಿಶ್ವದಲ್ಲಿಯೇ ಗುರುತಿಸಲಾಗುತ್ತಿದೆ ಎಂದು ಹೇಳಿದ್ದಾರೆ. ತುಂಗೆಗೆ ಆರತಿ ಬೆಳಗಲೆಂದು ಮತ್ತೂರು ಮತ್ತು ಹೊಸಹಳ್ಳಿ ಜನತೆ ನೂರಾರು ಸಂಖ್ಯೆಯಲ್ಲಿ ಸೇರಿದ್ದರು. ತುಂಗೆಯ ತಟದಲ್ಲಿ ದೀಪಗಳನ್ನು ತುಂಗಾ ನದಿಯಲ್ಲಿ ತೇಲಿ ಬಿಟ್ಟು ತಮ್ಮ ಇಷ್ಟಾರ್ಥಗಳ ಸಿದ್ಧಿಗಾಗಿ ಬೇಡಿಕೊಂಡರು. ಮತ್ತೂರಿನ ನಿವಾಸಿಗಳಿಗೆ ಜೀವನ ಕೊಟ್ಟಿರುವ ಸಂರಕ್ಷಣೆ ಮಾಡಿರುವ ತುಂಗೆಗೆ ವಿಶೇಷ ಆರತಿ ಬೆಳಗುವ ಮೂಲಕ ಪೂಜೆ ನೆರವೇರಿಸಿದರು.
ನಮಾಮಿ ತುಂಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ದೇಶದ ಪ್ರಮುಖ ವ್ಯಕ್ತಿ ಎಂದೇ ಬಿಂಬಿತರಾಗಿರುವ ಆರ್ಎಸ್ಎಸ್ನ ಮೋಹನ್ ಜೀ ಭಾಗವತ್ ಪಾಲ್ಗೊಳ್ಳುವಿಕೆ ಸ್ಥಳೀಯರಲ್ಲಿ ಆನಂದ ಹೆಚ್ಚಿಸಿತ್ತು. ರಾಮ ಜನ್ಮ ಭೂಮಿ ವಿವಾದದ ವಿಚಾರದಲ್ಲಿ ನ್ಯಾಯಾಲಯದ ತೀರ್ಪು ಬಂದ ನಂತರ ರಾಮತಾರಕ ಯಜ್ಞ ಮತ್ತು ತುಂಗಾ ಆರತಿ ಕಾರ್ಯಕ್ರಮ ನೆರವೇರಿಸುವ ಅಭಿಲಾಷೆ ಹೊಂದಿದ್ದ ಇಲ್ಲಿನ ಸ್ಥಳೀಯರು ನಮಾಮಿ ತುಂಗೆ ಕಾರ್ಯಕ್ರಮದ ಮೂಲಕ ಆದಷ್ಟು ಬೇಗನೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.
ಶುಕ್ರವಾರ ಸಂಸ್ಕೃತ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ರಾಮ ಮಂದಿರ ತೀರ್ಪು ಹಿನ್ನೆಲೆಯಲ್ಲಿ ನಡೆಸಲಾದ ಯಜ್ಞ, ದೀಪೋತ್ಸವ ಮತ್ತು ತೆಪ್ಪೋತ್ಸವ ಕಾರ್ಯಕ್ರಮ ಸ್ಥಳೀಯರನ್ನು ಪುಳಕಿತರನ್ನಾಗಿಸಿತ್ತು.