ನ್ಯಾಟ್‍ವೆಸ್ಟ್ ಐತಿಹಾಸಿಕ ಗೆಲುವಿನ ದಿನದಂದೇ ಎಲ್ಲ ಮಾದರಿಯ ಕ್ರಿಕೆಟಿಗೆ ಕೈಫ್ ವಿದಾಯ

Public TV
3 Min Read

ಮುಂಬೈ: ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ನ್ಯಾಟ್‍ವೆಸ್ಟ್ ಕ್ರಿಕೆಟ್ ಸರಣಿ ಜಯಸಿದ 12 ವರ್ಷಗಳ ಬಳಿಕ ಮಹಮ್ಮದ್ ಕೈಫ್ ಎಲ್ಲಾ ಮಾದರಿಯ ಕ್ರಿಕೆಟ್‍ಗೆ ವಿದಾಯ ಘೋಷಿಸಿದ್ದಾರೆ.

37 ವರ್ಷದ ಕೈಫ್ 13 ಟೆಸ್ಟ್ ಹಾಗೂ 125 ಏಕದಿನ ಪಂದ್ಯಗಳನ್ನು ಆಡಿದ್ದು, ಲಾರ್ಡ್ಸ ಅಂಗಳದಲ್ಲಿ 2002 ಜುಲೈ 13 ರಂದು ನಡೆದಿದ್ದ ನ್ಯಾಟ್‍ವೆಸ್ಟ್ ಫೈನಲ್ ಪಂದ್ಯದಲ್ಲಿ ಅಜೇಯ 87 ರನ್ ಸಿಡಿಸಿ ಟೀಂ ಇಂಡಿಯಾ ಐತಿಹಾಸಿಕ ಜಯಗಳಿಸಲು ಕಾರಣರಾಗಿದ್ದರು.

ತಮ್ಮ ನಿವೃತ್ತಿಯ ಕುರಿತು ಬಿಸಿಸಿಐ ಕಾರ್ಯದರ್ಶಿ ಸಿಕೆ ಖನ್ನಾ ಅವರಿಗೆ ಇಮೇಲ್ ಮೂಲಕ ಮಾಹಿತಿ ನೀಡಿರುವ ಕೈಫ್, ನ್ಯಾಟ್‍ವೆಸ್ಟ್ ಟೂರ್ನಿ ಗೆದ್ದ 16 ವರ್ಷದ ಸಂಭ್ರದ ದಿನದಂದು ನಾನು ಎಲ್ಲಾ ಮಾದರಿಯ ಕ್ರಿಕೆಟ್ ನಿಂದ ನಿವೃತ್ತಿ ಹೊಂದುತ್ತಿದ್ದು, ನನ್ನ ಜೀವನದಲ್ಲಿ ಪ್ರಮುಖ ಪಾತ್ರವಹಿಸಿದ ಎಲ್ಲರಿಗೂ ಧನ್ಯವಾದ ತಿಳಿಸುವುದಾಗಿ ಹೇಳಿದ್ದಾರೆ.

2003ರ ದಕ್ಷಿಣ ಆಫ್ರಿಕಾದಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್ ತಂಡದ ಸದಸ್ಯರಾಗಿದ್ದ ಕೈಫ್ ದೇಶಿಯ ಕ್ರಿಕೆಟ್ ನಲ್ಲಿ ಉತ್ತರ ಪ್ರದೇಶಕ್ಕೆ ರಣಜಿ ಟ್ರೋಫಿ ಗೆದ್ದು ಕೊಟ್ಟ ಹೆಗ್ಗಳಿಕೆ ಸಹ ಪಡೆದಿದ್ದು, ಛತ್ತೀಸ್‍ಗಢದ ವಿರುದ್ಧ ಕೊನೆಯ ರಣಜಿ ಪಂದ್ಯವಾಡಿದ್ದರು.

ಟೀಂ ಇಂಡಿಯಾ ಕಂಡ ಅತ್ಯುತ್ತಮ ಫೀಲ್ಡರ್ ಮಹಮ್ಮದ್ ಕೈಫ್ ಆಗಿದ್ದು, 5 ವರ್ಷಗಳ ಕಾಲ ನಿರಂತರವಾಗಿ ಟೀಂ ಇಂಡಿಯಾ ಭಾಗವಾಗಿದ್ದ ಕೈಫ್ ಮೈದಾನದ 30 ಯಾರ್ಡ್ ಸರ್ಕಲ್ ನಲ್ಲಿ ಆಟಗಾರರು ರನ್ ಕದಿಯಲು ಭಯಪಡುವಂತೆ ಕ್ಷೇತ್ರ ರಕ್ಷಣೆ ಮಾಡುತ್ತಿದ್ದರು. 2006 ರಲ್ಲಿ ಕೈಫ್ ದಕ್ಷಿಣ ಆಫ್ರಿಕಾ ವಿರುದ್ಧ ತಮ್ಮ ಕೊನೆಯ ಪಂದ್ಯವನ್ನು ಆಡಿದ್ದರು.

ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದ ವೇಳೆ 6 ಅಥವಾ 7ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಿದ್ದ ಕೈಫ್ 125 ಪಂದ್ಯಗಳಲ್ಲಿ 2 ಶತಕ, 17 ಅರ್ಧ ಶತಕ ಒಳಗೊಂಡಂತೆ 2,753 ರನ್ ಗಳಿಸಿದ್ದಾರೆ. 13 ಟೆಸ್ಟ್ ಪಂದ್ಯವಾಡಿದ್ದ ಕೈಫ್ 624 ರನ್ ಗಳಿಸಿ 1 ಶತಕ, 3 ಅರ್ಧ ಶತಕ ಗಳಿಸಿದ್ದಾರೆ.

ಟೀಂ ಇಂಡಿಯಾದಲ್ಲಿ ಹೆಚ್ಚಿನ ಸ್ಥಾನ ಪಡೆಯದಿದ್ದರೂ ದೇಶಿಯ ಕ್ರಿಕೆಟ್ ನಲ್ಲಿ ಉತ್ತರ ಪ್ರದೇಶ ತಂಡದ ಪರ ಉತ್ತಮ ಪ್ರದರ್ಶನ ನೀಡಿರುವ ಕೈಫ್ 186 ಪಂದ್ಯಗಳಲ್ಲಿ 19 ಶತಕ, 59 ಅರ್ಧಶತಕಗಳೊಂದಿಗೆ 10,229 ರನ್ ಸಿಡಿಸಿದ್ದಾರೆ. ಅಲ್ಲದೇ ಐಪಿಎಲ್ ನಲ್ಲಿ ರಾಜಸ್ಥಾನ ರಾಯಲ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಆರ್ ಸಿಬಿ ಪರ ಆಡಿದ್ದರು.

ಹಲವು ದಿನಗಳಿಂದ ಕೈಫ್ ಹಿಂದಿ ಭಾಷೆಯಲ್ಲಿ ಕ್ರಿಕೆಟ್ ವೀಕ್ಷಕ ವಿವರಣೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ತಮ್ಮ ಮುಂದಿನ ನಡೆ ಕುರಿತು ಯಾವುದೇ ಮಾಹಿತಿ ನೀಡದ ಕೈಫ್ ತಮ್ಮ ಮಕ್ಕಳಾದ ಕಬೀರ್ ಹಾಗೂ ಇವಾ ಜೊತೆ ಹೆಚ್ಚಿನ ಕಾಲ ಕಳೆಯಲು ಇಷ್ಟಪಡುವುದಾಗಿ ತಿಳಿಸಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಲಾರ್ಡ್ಸ ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ಸೋಲುವತ್ತ ಮುಖಮಾಡಿತ್ತು. 325 ರನ್ ಗಳ ಗುರಿಯನ್ನು ಬೆನ್ನಟ್ಟಿದ್ದ ಭಾರತ 146 ರನ್‍ಗಳಿಗೆ 5 ವಿಕೆಟ್ ಕಳೆದುಕೊಂಡಿತ್ತು. ಈ ವೇಳೆ ಜೊತೆಯಾದ ಮೊಹಮ್ಮದ್ ಕೈಫ್ ಮತ್ತು ಯುವರಾಜ್ 7ನೇ ವಿಕೆಟ್‍ಗೆ 121 ರನ್ ಜೊತೆಯಾಟವಾಡಿದ್ದರ ಪರಿಣಾಮ ಭಾರತ ಇನ್ನು ಮೂರು ಎಸೆತ ಬಾಕಿ ಇರುವಂತೆಯೇ 2 ವಿಕೆಟ್ ಗಳಿಂದ ರೋಚಕವಾಗಿ ಪಂದ್ಯವನ್ನು ಗೆದ್ದುಕೊಂಡಿತ್ತು. ಕೈಫ್ ಔಟಾಗದೇ 87 ರನ್ ಹೊಡೆದಿದ್ದರೆ ಯುವರಾಜ್ 69 ರನ್ ಹೊಡೆದಿದ್ದರು. ಅಂತಿಮವಾಗಿ ಇನ್ನೂ 3 ಎಸೆತ ಬಾಕಿ ಇರುವಂತೆಯೇ ಭಾರತ ಪಂದ್ಯವನ್ನು ಗೆದ್ದಿತ್ತು. ಭಾರತ ಜಯಗಳಿಸಿದ್ದನ್ನು ಕಂಡು ನಾಯಕ ಸೌರವ್ ಗಂಗೂಲಿ ಶರ್ಟ್ ಬಿಚ್ಚಿ ಸಂತಸ ವ್ಯಕ್ತಪಡಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *