ಮೋದಿ ಪ್ರಮಾಣ ವಚನ ಕಾರ್ಯಕ್ರಮದ ವಿಶೇಷತೆ ಏನು? ಅತಿಥಿಗಳು ಯಾರು? ಮೆನು ಏನಿದೆ?

Public TV
3 Min Read

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಎರಡನೇ ಅವಧಿಗೆ ಭಾರತ ಪ್ರಧಾನಿಯಾಗಿ ನಾಳೆ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.

ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸುಮಾರು 6,500 ಮಂದಿ ಭಾಗಿಯಾಗುವ ನಿರೀಕ್ಷೆ ಇದ್ದು, ಕಾರ್ಯಕ್ರಮಕ್ಕೆ ಬೇಕಾದ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ರಾಪ್ಟ್ರಪತಿ ಹಾಗೂ ಪ್ರಧಾನಿ ತೀರ್ಮಾನದ ಹಿನ್ನೆಲೆಯಲ್ಲಿ ಸರಳವಾಗಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.

ಪ್ರಮುಖವಾಗಿ ಕಾರ್ಯಕ್ರಮಕ್ಕೆ ಬಂಗಾಳ ಇನಿಷಿಯೇಟಿವ್ ಫಾರ್ ಮಲ್ಟಿ ಸೆಕ್ಟರಲ್ ಟೆಕ್ನಿಕಲ್ ಅಂಡ್ ಎಕನಾಮಿಕ್ ಕೋ ಆಪರೇಷನ್ (ಬಿಮ್‍ಸ್ಟಿಕ್) ಸದಸ್ಯ ರಾಷ್ಟ್ರಗಳಿಗೆ ಆಹ್ವಾನ ನೀಡಲಾಗಿದೆ. ಬಾಂಗ್ಲಾದೇಶ, ಶ್ರೀಲಂಕಾ, ಮ್ಯಾನ್ಮಾರ್, ನೇಪಾಳ, ಭೂತಾನ್, ಥೈಲ್ಯಾಂಡ್ ರಾಷ್ಟ್ರಗಳ ಗಣ್ಯರು ಸೇರಿದಂತೆ ಶಾಂಘೈ ಕೋ ಆಪರೇಷನ್ ರಾಷ್ಟ್ರಗಳ ಸದಸ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಬದಲಾದ ಸಮಯ: 2014ರಲ್ಲಿ ಮೋದಿ ಅವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಸಂಜೆ 6 ಗಂಟೆ ವೇಳೆಗೆ ನಡೆದಿತ್ತು. ಆದರೆ ಈ ಬಾರಿ ಸಮಯವನ್ನು ಬಲಾಯಿಸಿ ಸಂಜೆ 7 ಗಂಟೆಗೆ ಕಾರ್ಯಕ್ರಮ ನಿಗದಿ ಮಾಡಲಾಗಿದೆ. ಅಲ್ಲದೇ ರಾಷ್ಟ್ರಪತಿ ಭವನದ ಫೋರ್ ಕೋರ್ಟಿನಲ್ಲಿ ಸಮಾರಂಭ ನಡೆಯಲಿದೆ.

ಇತಿಹಾಸದಲ್ಲಿ ಇದುವರೆಗೂ 3 ಬಾರಿ ಮಾತ್ರ ಫೋರ್ ಕೋರ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಈ ಹಿಂದೆ ಮಾಜಿ ಪ್ರಧಾನಿಗಳಾದ ಚಂದ್ರಶೇಖರ್ (1990), ವಾಜಪೇಯಿ (1998), 2014 ರಲ್ಲಿ ಮೋದಿ ಅವರು ಇಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು. ಉಳಿದ ಪ್ರಧಾನಿಗಳು ದರ್ಬಾರ್ ಹಾಲ್‍ನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು. ಇಲ್ಲಿ ಕೇವಲ 500 ಮಂದಿಗೆ ಮಾತ್ರ ಆಸನ ವ್ಯವಸ್ಥೆ ಇದ್ದು, ಪರಿಣಾಮ ಘೋರ್ ಕೋರ್ಟಿನಲ್ಲಿ ಕಾರ್ಯಕ್ರಮ ನಡೆಯಲಿದೆ.

ರಾಷ್ಟ್ರಪತಿ ಭವನದ ಮುನ್ನಂಗಳವನ್ನು ‘ಫೋರ್ ಕೋರ್ಟ್’ ಎಂದು ಕರೆಯಲಾಗುತ್ತದೆ. ರಾಷ್ಟ್ರಪತಿ ಭವನದ ಮುಖ್ಯ ಗೇಟ್ ನಿಂದ ಹಿಡಿದು ಮುಖ್ಯ ಭವನದ ವರೆಗಿನ ಪ್ರದೇಶ ಇದಾಗಿದೆ. ಇದು ಇಲ್ಲಿ ಇಂಗ್ಲಿಷ್‍ನ ‘ಟಿ’ ಅಕ್ಷರ ಮಾದರಿಯಲ್ಲಿದೆ. ಇದರಲ್ಲಿ ಉದ್ಯಾನವನ, ನೀರಿನ ಕಾಲುವೆ ನಿರ್ಮಿಸಲಾಗಿದೆ. ರಾಷ್ಟ್ರಪತಿ ಭವನದ ಮುಂಭಾಗ 640 ಅಡಿ ಅಗಲದ ಜಾಗದಲ್ಲಿ ಮುಖ್ಯ ವೇದಿಕೆ ಇರಲಿದೆ. ರಾಷ್ಟ್ರಪತಿ ಭವನದ ಎದುರು ಇರುವ ಎತ್ತರದ ಧ್ವಜ ಸ್ತಂಭದಲ್ಲಿ ತ್ರಿವರ್ಣ ಧ್ವಜ ಹಾರಿಸಲಾಗುತ್ತದೆ. 1971ರ ಮೊದಲು ಇಲ್ಲಿ ರಾಷ್ಟ್ರಪತಿಗಳಿಗಾಗಿ ಇದ್ದ ಪ್ರತ್ಯೇಕ ಧ್ವಜವನ್ನು ಹಾರಿಸಲಾಗುತ್ತಿತ್ತು.

ಕಾರ್ಯಕ್ರಮಕ್ಕೆ ಸಿನಿಮಾ, ಸಾಹಿತ್ಯ, ವಿಜ್ಞಾನ, ರಾಜಕೀಯ, ವಿದೇಶಿ ಪ್ರತಿನಿಧಿಗಳು, ಚಿಂತಕರು ಸೇರಿದಂತೆ ವಿವಿಧ ಕ್ಷೇತ್ರ ಗಣ್ಯರು ಆಗಮಿಸಲಿದ್ದಾರೆ. 2014ರ ಮೇ 26 ರಂದು ನಡೆದ ಕಾರ್ಯಕ್ರಮಕ್ಕೆ 3 ಗಂಟೆಯ ವೇಳೆಗೆ ಅತಿಥಿಗಳು ಆಗಮಿಸಿದ್ದರು. ಬಿಸಿಲಿನ ಪ್ರಮಾಣ ತೀವ್ರವಾಗಿದ್ದ ಪರಿಣಾಮ ಈ ಬಾರಿ ಪ್ರಮಾಣ ವಚನ ಸಮಯವನ್ನು ಬದಲಾಯಿಸಲಾಗಿದೆ. ಅಲ್ಲದೇ ಕಳೆದ ಬಾರಿ ರಕ್ಷಣೆಯ ದೃಷ್ಟಿಯಿಂದ ಕಾರ್ಯಕ್ರಮಕ್ಕೆ ನೀರಿನ ಬಾಟಲಿಗಳನ್ನು ನಿಷೇಧ ಮಾಡಲಾಗಿತ್ತು. ಈ ಬಾರಿ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ.

ಮೆನು ಇಂತಿದೆ: 2014 ರಲ್ಲಿ ಆಯೋಜಿಸಲಾಗಿದ್ದ ರೀತಿಯಲ್ಲೇ ಈ ಬಾರಿಯೂ ಕಾರ್ಯಕ್ರಮ ನಡೆಯಲಿದ್ದು, ಲಘು ಆಹಾರ ಮತ್ತು ಬ್ರೇಕ್‍ಫಸ್ಟ್ ಅತಿಥಿಗಳಿಗೆ ಲಭ್ಯವಾಗಲಿದೆ. ಕಾರ್ಯಕ್ರಮದಲ್ಲಿ ವೆಜ್ ಹಾಗೂ ನಾನ್ ವೆಜ್ ಎರಡು ಖಾದ್ಯಗಳು ಇರಲಿದ್ದು, ರಾಷ್ಟ್ರಪತಿ ಭವನದ ಆಡುಗೆ ಕೋಣೆಯಲ್ಲೇ ತಯಾರಿ ನಡೆದಿದೆ. ರಾಜಾಬೋಗ್, ಸಮೋಸ, ದಾಲ್ ರೈಸಿನಾ ಸೇರಿದಂತೆ ವಿವಿಧ ಖಾದ್ಯಗಳು ಸಿದ್ಧವಾಗುತ್ತಿದೆ. ಬಹುಮುಖ್ಯವಾಗಿ ದಾಲ್ ರೈಸಿನಾ ಸಿದ್ಧ ಪಡಿಸಲು 48 ಗಂಟೆಗಳ ಅವಧಿ ಅಗತ್ಯವಿದ್ದು, ಈಗಾಗಲೇ ತಯಾರಿ ಆರಂಭವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *