ಧ್ಯಾನಕ್ಕೂ ಮುನ್ನ ಭಗವತಿ ಅಮ್ಮನ ದೇಗುಲದಲ್ಲಿ ಮೋದಿ ಪೂಜೆ

Public TV
2 Min Read

ಚೆನ್ನೈ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಕನ್ಯಾಕುಮಾರಿಯಲ್ಲಿರುವ (Kanyakumari) ವಿವೇಕಾನಂದ ರಾಕ್ ಸ್ಮಾರಕದಲ್ಲಿ ( Vivekananda Rock Memorial) ಇಂದಿನಿಂದ ಎರಡು ದಿನಗಳ ಧ್ಯಾನ ಆರಂಭಿಸಿದ್ದಾರೆ. ಧ್ಯಾನಕ್ಕೂ ಮುನ್ನ ಮೋದಿಯವರು ಭಗವತಿ ಅಮ್ಮನ ದೇಗುಲಕ್ಕೆ ಭೇಟಿ ನೀಡಿದರು.

ಪ್ರಧಾನಮಂತ್ರಿಯವರು ಮೇ 30 ರ ಸಂಜೆಯಿಂದ (ಇಂದು) ಜೂನ್ 1 ರ ಸಂಜೆಯವರೆಗೆ ಸುಮಾರು 45 ಗಂಟೆಗಳ ಕಾಲ ಆಧ್ಯಾತ್ಮಿಕ ಪ್ರವಾಸದಲ್ಲಿರಲಿದ್ದಾರೆ. ಸ್ವಾಮಿ ವಿವೇಕಾನಂದರು ಧ್ಯಾನ ಮಾಡಿದ ಸ್ಥಳದಲ್ಲಿಯೇ ಧ್ಯಾನ ಮಂಟಪದಲ್ಲಿ ಅವರು ಹಗಲು-ರಾತ್ರಿ ಧ್ಯಾನ ಮಾಡುತ್ತಾರೆ.

ಇಂದು ಸಂಜೆ ತಿರುವನಂತಪುರದಿಂದ ಹೆಲಿಕಾಪ್ಟರ್‌ನಲ್ಲಿ ಆಗಮಿಸಿದ ಮೋದಿ ನಂತರ ಭಗವತಿ ಅಮ್ಮನವರ ದೇವಸ್ಥಾನದಲ್ಲಿ (Bhagavathy Amman Temple) ಪೂಜೆ ಸಲ್ಲಿಸಿದರು. ಧೋತಿ ಮತ್ತು ಬಿಳಿ ಶಾಲು ಧರಿಸಿದ ಮೋದಿ ಅವರು ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ, ಪ್ರದಕ್ಷಿಣೆ ಹಾಕಿದರು. ಈ ವೇಳೆ ಅರ್ಚಕರು ವಿಶೇಷ ‘ಅರತಿ’ಯನ್ನು ನಡೆಸಿ, ಪ್ರಧಾನಿಯವರಿಗೆ ದೇವರ ಪ್ರಸಾದವನ್ನು ನೀಡಿದರು. ಅಲ್ಲದೇ ಮೋದಿಯವರಿಗೆ ಶಾಲು ಮತ್ತು ದೇಗುಲದ ಪ್ರಧಾನ ದೇವರ ಫೋಟೋವನ್ನು ನೀಡಲಾಯಿತು.

ಇದಾದ ಬಳಿಕ ದೋಣಿಯ ಮೂಲಕ ರಾಕ್ ಸ್ಮಾರಕವನ್ನು ತಲುಪಿದರು. ಧ್ಯಾನ ಪ್ರಾರಂಭಕ್ಕೂ ಮುನ್ನ ಮೋದಿಯವರು ಸ್ಮಾರಕವನ್ನು ಸುತ್ತುವರಿದಿರುವ ಸಮುದ್ರದ ರುದ್ರರಮಣೀಯ ದೃಶ್ಯಗಳನ್ನು ಕಣ್ತುಂಬಿಕೊಂಡರು. ಬಳಿಕ ಜೂನ್ 1 ರವರೆಗೆ ನಡೆಯಲಿರುವ ಧ್ಯಾನವನ್ನು ಪ್ರಾರಂಭಿಸಿದರು. ಧ್ಯಾನದ ಬಳಿಕ ಅಂದರೆ ಜೂನ್‌ 1 ರಂದು ಮೋದಿಯವರು ಸ್ಮಾರಕದ ಪಕ್ಕದಲ್ಲಿರುವ ತಿರುವಳ್ಳುವರ್ ಪ್ರತಿಮೆಗೆ ಭೇಟಿ ನೀಡುವ ಸಾಧ್ಯತೆಯಿದೆ.

ಸ್ಮಾರಕದ ಆವರಣದಲ್ಲಿ ಭದ್ರತಾ ಸಿಬ್ಬಂದಿ ಜಮಾಯಿಸಿದ್ದರೆ, ಇಡೀ ಕನ್ಯಾಕುಮಾರಿ ಜಿಲ್ಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಸುಮಾರು 2,000 ಮಂದಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಜೊತೆಗೆ ಕರಾವಳಿ ಕಾವಲು ಪಡೆ ಮತ್ತು ನೌಕಾಪಡೆಯಿಂದ ಹೆಚ್ಚಿನ ನಿಗಾ ವಹಿಸಲಾಗಿದೆ. ಇತ್ತ ಎರಡು ದಿನಗಳ ಕಾಲ ಮೀನುಗಾರಿಕೆಗೂ ನಿಷೇಧ ಹೇರಲಾಗಿದೆ.

Share This Article