ಭ್ರಷ್ಟಾಚಾರದ ವಿರುದ್ಧ ಸರ್ಜಿಕಲ್ ಸ್ಟ್ರೈಕ್ – 12 ಉನ್ನತ ತೆರಿಗೆ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ

Public TV
2 Min Read

ನವದೆಹಲಿ: ಭ್ರಷ್ಟಾಚಾರದ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ನಡೆಸಿರುವ ಮೋದಿ ಸರ್ಕಾರ 12 ಮಂದಿ ತೆರಿಗೆ ಅಧಿಕಾರಗಳಿಗೆ ಕಡ್ಡಾಯವಾಗಿ ನಿವೃತ್ತಿ ಪಡೆಯುವಂತೆ ಸೂಚಿಸಿದೆ.

ಭಾರತೀಯ ಹಣಕಾಸು ಸಚಿವಾಲಯದ ಮೂಲಗಳ ಪ್ರಕಾರ, ಮುಖ್ಯ ಕಮೀಷನರ್ ಸ್ಥಾನದಲ್ಲಿರುವ ಹಿರಿಯ ಅಧಿಕಾರಗಳು, ಹಣಕಾಸು ಸಚಿವಾಲಯದ ಪ್ರಧಾನ ಆಯುಕ್ತರು ಮತ್ತು ಆದಾಯ ತೆರಿಗೆ ಇಲಾಖೆಯ ಕಮೀಷನರ್ ಸೇರಿ ಒಟ್ಟು 12 ಜನ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ ಪಡೆಯುವಂತೆ ಸೂಚಿಸಿದೆ.

ಈ 12 ಅಧಿಕಾರಿಗಳ ಪೈಕಿ ಕೆಲವರ ಮೇಲೆ ಭ್ರಷ್ಟಾಚಾರ ಮತ್ತು ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ ಆರೋಪವಿದೆ. ಕೆಲವರ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. ಗಂಭೀರ ಸ್ವರೂಪದ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಹಣಕಾಸು ಇಲಾಖೆಯ 56 (ಜೆ) ನಿಯಮದ ಅಡಿ ನಿವೃತ್ತಿ ಹೊಂದಬೇಕು ಎಂದು ಹಣಕಾಸು ಸಚಿವಾಲಯ ನಿರ್ದೇಶನ ಮಾಡಿದೆ.

ಈ 12 ಜನ ಅಧಿಕಾರಿಗಳ ಪಟ್ಟಿಯಲ್ಲಿ ಜಂಟಿ ಆಯುಕ್ತ ಶ್ರೇಣಿಯ ಅಧಿಕಾರಿ ಅಶೋಕ್ ಅಗರ್‍ವಾಲ್ ಇದ್ದಾರೆ. ಸ್ವಯಂಘೋಷಿತ ದೇವಮಾನವ ಚಂದ್ರಸ್ವಾಮಿಗೆ ಸಹಾಯ ಮಾಡಿ ಭ್ರಷ್ಟಾಚಾರ ಎಸಗಿದ್ದಾರೆ ಎನ್ನುವ ಆರೋಪ ಅಶೋಕ್ ಅಗರ್‍ವಾಲ್ ಮೇಲಿದೆ. ಇಬ್ಬರು ಮಹಿಳಾ ಐಆರ್‍ಎಸ್ ಅಧಿಕಾರಿಗಳಿಗೆ ಲೈಂಗಿಕ ಕಿರುಕುಳದ ನೀಡಿದ್ದಾರೆ ಎಂಬ ಆರೋಪ ಬಂದಿರುವ ಎಸ್.ಕೆ ಶ್ರೀವಾಸ್ತವ ಅವರಿಗೂ ನಿವೃತ್ತಿ ಪಡೆಯುವಂತೆ ಸೂಚಿಸಲಾಗಿದೆ.

ತನ್ನ ಮತ್ತು ತನ್ನ ಕುಟುಂಬದ ಸದಸ್ಯರ ಹೆಸರಿನಲ್ಲಿ ಅಕ್ರಮವಾಗಿ 3 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಸಂಪಾದಿಸಿದ 1985 ಬ್ಯಾಚಿನ ಐಆರ್‍ಎಸ್‍ನ ಅಧಿಕಾರಿ ಹೋಮಿ ರಾಜ್ವಂಶ್ ಮತ್ತು ತಮಗೆ ಬೇಕಾದ ರೀತಿಯಲ್ಲಿ ಆದೇಶಗಳನ್ನು ನೀಡುತ್ತಿದ್ದ ಆರೋಪದ ಮೇಲೆ ಬಿ.ಬಿ ರಾಜೇಂದ್ರ ಪ್ರಸಾದ್ ಅವರನ್ನು ಕೊಡ ನಿವೃತ್ತರಾಗಬೇಕು ಎಂದು ಹಣಕಾಸು ಸಚಿವಾಲಯ ಸೂಚನೆ ನೀಡಿದೆ.

ಇವರನ್ನು ಬಿಟ್ಟರೆ ಅಜಯ್ ಕುಮಾರ್ ಸಿಂಗ್, ಅಲೋಕ್ ಕುಮಾರ್ ಮಿತ್ರ, ಚಂದನ್ ಸೈನಿ ಭಾರ್ತಿ, ಅಂಡಸು ರವಿಂದರ್, ವಿವೇಕ್ ಬಾತ್ರಾ, ಸ್ವತಭ ಸುಮನ್ ಮತ್ತು ರಾಮ್ ಕುಮಾರ್ ಭಾರ್ಗವ ಅವರು ಕೂಡ ಪಟ್ಟಿಯಾಲ್ಲಿದ್ದಾರೆ ಎಂದು ವರದಿಯಾಗಿದೆ.

ಹಣಕಾಸು ಇಲಾಖೆಯ 56 (ಜೆ) ನಿಯಮದ ಹಲವು ದಶಕಗಳಿಂದ ಅಸ್ವಿತ್ವದಲ್ಲಿದ್ದು ಇಲ್ಲಿಯವರೆಗೆ ಪರಿಣಾಮಕಾರಿಯಾಗಿ ಜಾರಿಯಾಗಿರಲಿಲ್ಲ. ಆದರೆ ಈಗ ಈ ನಿಯಮದ ಅಡಿ ನಿವೃತ್ತಿ ಪಡೆಯಲು ಸೂಚಿಸಿದ್ದು ಮಹತ್ವ ಎನಿಸಿಕೊಂಡಿದೆ.

Share This Article
Leave a Comment

Leave a Reply

Your email address will not be published. Required fields are marked *