ಬಾಲಕೋಟ್‍ನಲ್ಲಿ ಏರ್ ಸ್ಟ್ರೈಕ್ ಮಾಡಿದ್ದಕ್ಕೆ ಜೆಡಿಎಸ್, ಕಾಂಗ್ರೆಸ್‍ಗೆ ನೋವಾಗಿದೆ: ಮೋದಿ

Public TV
3 Min Read

– ಕರ್ನಾಟಕ ಸರ್ಕಾರದ ರಿಮೋಟ್ 12 ಜನ್ರ ಕೈಯಲ್ಲಿದೆ
– ಹಗರಣ ಮಾಡಿದವರ ವಿರುದ್ಧ ಮತ ಹಾಕಿ ಶಿಕ್ಷೆ ನೀಡಿ

ಚಿತ್ರದುರ್ಗ: ಬಾಲಕೋಟ್ ಮೇಲಿನ ವಾಯು ದಾಳಿಯಿಂದ ಪಾಕಿಸ್ತಾನಕ್ಕೆ ನೋವು ಆಗಿದೆಯೋ ಗೊತ್ತಿಲ್ಲ. ಇಲ್ಲಿಯ ಜೆಡಿಎಸ್ ಮತ್ತು ಕಾಂಗ್ರೆಸ್ ತುಂಬಾನೇ ನೋವಾಗಿದೆ. ಇಲ್ಲಿಯ ಮುಖ್ಯಮಂತ್ರಿ ದೇಶದ ಪರಾಕ್ರಮದ ಬಗ್ಗೆ ಮಾತನಾಡಬಾರದು ಎಂದು ಹೇಳುತ್ತಾರೆ. ತಮ್ಮ ಮತಗಳ ಎಲ್ಲಿ ಕಳೆದು ಹೋಗುತ್ತೆ ಎಂಬ ಭಯದಿಂದ ಭಾರತವನ್ನೇ ವಿರೋಧ ಮಾಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ಸಮಾವೇಶದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಇಂದು ದೇಶದೆಲ್ಲೆಡೆ ಭಾರತ್ ಮಾತಾ ಕೀ ಜೈಕಾರ ನಿಮ್ಮಿಂದ ಕೇಳುತ್ತಿದೆ. ಐದು ವರ್ಷಗಳ ಹಿಂದೆ ನೀವು ನೀಡಿದ್ದ ಅಧಿಕಾರದಿಂದ ದೇಶದೆಲ್ಲೆಡೆ ಹಿಂದೂಸ್ತಾನದ ಘೋಷಣೆಗಳು ಕೇಳುತ್ತಿವೆ. ಈ ಮೊದಲು ನೆರೆಯ ವೈರಿ ಪಾಕಿಸ್ತಾನ ನಮಗೆ ಬೆದರಿಕೆ ಹಾಕುತ್ತಿದ್ದವು. ಅಂದಿನ ಸರ್ಕಾರಗಳು ಯಾವುದೇ ಕ್ರಮಕೈಗೊಳ್ಳುತ್ತಿರಲಿಲ್ಲ. ಇಂದು ಧಮ್ಕಿ ಹಾಕುತ್ತಿದ್ದವರ ಧ್ವನಿ ನಮ್ಮ ದೇಶದಲ್ಲಿ ಕೇಳದಂತೆ ಮಾಡಿದ್ದೇವೆ ಎಂದರು.

ಇಡೀ ಜಗತ್ತು ನಮ್ಮ ಸೇನೆಯನ್ನು ಹೊಗಳಿದ್ರೆ ಇಲ್ಲಿಯ ಕಾಂಗ್ರೆಸ್ ಮತ್ತು ಜೆಡಿಎಸ್ ಸೇನೆ ನಡೆಸಿದ ಏರ್ ಸ್ಟ್ರೈಕ್ ವಿರೋಧ ಮಾಡುತ್ತಿವೆ. ಇಡೀ ವಿಶ್ವವೇ ಒಪ್ಪಿಕೊಂಡರೂ ಇವರು ಮಾತ್ರ ನಂಬುತ್ತಿಲ್ಲ. ಕೇವಲ ಒಬ್ಬ ಸಂಸದನನ್ನು ಆಯ್ಕೆ ಮಾಡದೇ ಒಂದು ಸದೃಢ ಸರ್ಕಾರಕ್ಕೆ ನೀವು ಮತ ನೀಡಬೇಕಿದೆ. ದೇಶದ ರಕ್ಷಣೆಗಾಗಿ ಬಲಿಷ್ಠ ನಿರ್ಣಯ ತೆಗೆದುಕೊಳ್ಳುವ ಸರ್ಕಾರಕ್ಕೆ ನೀಡಬೇಕಿದೆ ಎಂದು ಮನವಿ ಮಾಡಿಕೊಂಡರು.

ಕರ್ನಾಟಕ ಸರ್ಕಾರದ ರಿಮೋಟ್ ದೆಹಲಿಯ 12 ಜನರ ಕೈಯಲ್ಲಿದೆ. ಕರ್ನಾಟಕದಲ್ಲಿ ಲಿಂಗಾಯತ ಸಮುದಾಯವನ್ನು ಒಡೆಯುವ ಕೆಲಸವನ್ನು ವಿಧಾನಸಭಾ ಚುನಾವಣೆಯಲ್ಲಿ ಪ್ರಯತ್ನ ಮಾಡಿದರು. ಇಲ್ಲಿಯ ನಾಯಕರಿಗೆ ದೇಶದ ಚಿಂತೆ ಇಲ್ಲ ಮತ್ತು ಸಂವಿಧಾನದ ಬಗ್ಗೆ ಗೌರವ ಸಹ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಒನಕೆ ಒಬ್ಬವ್ವ ಮತ್ತು ವೀರ ಮದಕರಿ ನಾಯಕ ಅವರು ವಿರೋಧಿಗಳನ್ನು ಹೊಡೆದುರಳಿಸಿದ್ದರು. ಇಂದು ನೀವೆಲ್ಲರೂ ಈ ಚೌಕಿದಾರನೊಂದಿಗೆ ನಿಲ್ಲಬೇಕು. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ನಮ್ಮ ಮಂತ್ರವಾಗಿದೆ. ಇದೇ ಮಂತ್ರದಂತೆ ನಾವು ಕೆಲಸ ಮಾಡುತ್ತಿದ್ದೇವೆ. ಕಿಸಾನ್ ಸಮ್ಮಾನ್ ಯೋಜನೆ ನಾವು ಮತ್ತೊಮ್ಮೆ ಅಧಿಕಾರಕ್ಕೆ ಬಂದ ಎಲ್ಲ ರೈತರಿಗೆ ವಿಸ್ತರಿಸುತ್ತೇವೆ. ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದು ವರ್ಷವಾಗುತ್ತಾ ಬಂದರೂ ಇದೂವರೆಗೂ ಯಾವ ರೈತರ ಸಾಲಮನ್ನಾ ಮಾಡಿಲ್ಲ. ಬದಲಾಗಿ ರೈತರ ಮನೆಗಳಿಗೆ ಬ್ಯಾಂಕ್ ಗಳಿಂದ ನೋಟಿಸ್ ಬರುತ್ತಿದೆ ಎಂದು ದೂರಿದರು.

ದಾವಣಗೆರೆಯನ್ನು ಸ್ಮಾರ್ಟ್ ಸಿಟಿ ಮಾಡಲು, ಉದ್ಯೋಗ ಸೃಷ್ಟಿಸಲು ನಾವು ಬದ್ಧರಾಗಿದ್ದೇವೆ. ಕಾಂಗ್ರೆಸ್ ನಾಲ್ಕು ತಲೆಮಾರಿನಿಂದ ತನ್ನ ಆಡಳಿತಾವಧಿಯಲ್ಲಿ ದೇಶದ ಜನತೆಗೆ ಮೋಸ ಮಾಡಿಕೊಂಡು ಬರುತ್ತಿದೆ. ದೆಹಲಿಯ ಸಿಖ್ ಧಂಗೆ, ಕಾಮನ್‍ವೆಲ್ತ್, 2ಜಿ, ನ್ಯಾಷನಲ್ ಹೆರಾಲ್ಡ್, ಹೆಲಿಕಾಪ್ಟರ್ ಹಗರಣ ಮಾಡಿದವರಿಗೆ ಕೆಲವೇ ದಿನಗಳಲ್ಲಿ ಶಿಕ್ಷೆ ಸಿಗಲಿದೆ. 20ನೇ ಶತಮಾನದ ಶಿಕ್ಷೆಗೆ 21ನೇ ಶತಮಾನದ ಯುವ ಜನತೆ ತಮ್ಮ ವೋಟ್ ಮೂಲಕ ಶಿಕ್ಷೆ ನೀಡಲಿದ್ದಾರೆ. ಪ್ರಥಮ ಬಾರಿಗೆ ಮತ ಚಲಾಯಿಸುತ್ತಿರುವ ಯುವ ಜನತೆ ದೇಶವನ್ನು ಭದ್ರ ಮಾಡಲು, ಹುತಾತ್ಮರಾದ ಯೋಧರು, ಬಡವರಿಗೆ ಸಮರ್ಪಣೆ ಮಾಡಬೇಕು. ಇವಿಎಂನಲ್ಲಿ ಕಮಲಕ್ಕೆ ನೀವು ಹಾಕುವ ಮತ ನನ್ನ ಖಾತೆಗೆ ಬಂದು ಬೀಳಲಿದೆ. ನಿಮ್ಮ ಹೆಚ್ಚು ಮತಗಳು ನನ್ನನ್ನು ಮತ್ತಷ್ಟು ಬಲಿಷ್ಠ ಮಾಡಲಿವೆ ಎಂದು ಮೋದಿ ಹೇಳಿ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

ಆರಂಭದಲ್ಲಿ ಕರ್ನಾಟಕದ ಜನತೆಗೆ ಯುಗಾದಿ ಹಬ್ಬದ ಶುಭಾಶಯವನ್ನ ಕನ್ನಡದಲ್ಲಿಯೇ ತಿಳಿಸಿ ಪ್ರಧಾನಿ ಮೋದಿ ಭಾಷಣ ಆರಂಭಿಸಿದರು. ಇದೇ ವೇಳೆ ಸಿದ್ದಗಂಗಾ ಮಠದ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳಿಗೆ ನಮನ ಸಲ್ಲಿಸಿದರು.

Share This Article
Leave a Comment

Leave a Reply

Your email address will not be published. Required fields are marked *