ಜನಸಂದಣಿ ತಪ್ಪಿಸಲು ಕೋಟೆನಾಡಲ್ಲಿ ಆರಂಭವಾಯ್ತು ಮೊಬೈಲ್ ಎಟಿಎಂ

Public TV
1 Min Read

ಚಿತ್ರದುರ್ಗ: ಕೊರೊನಾ ಸೋಂಕು ತಡೆಗೆ ದೇಶಾದ್ಯಂತ ಲಾಕ್‍ಡೌನ್ ಜಾರಿಯಲ್ಲಿರುವ ಹಿನ್ನೆಲೆ ಹಣ ಪಡೆಯಲು ಜನರು ಬ್ಯಾಂಕ್, ಎಟಿಎಂ ಬಳಿ ಬರುತ್ತಾರೆ. ಆಗ ಸಾಮಾಜಿಕ ಅಂತರ ಇರುವುದಿಲ್ಲ ಎಂದು ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ಹೊಸ ಪ್ರಯತ್ನವೊಂದನ್ನು ಮಾಡಿದೆ.

ಚಿತ್ರದುರ್ಗದಲ್ಲಿ ಮೊಬೈಲ್ ಎಟಿಎಂ ವ್ಯವಸ್ಥೆ ಪ್ರಾರಂಭಿಸಲಾಗಿದ್ದು, ಬೆಳಗ್ಗೆ 10 ಗಂಟೆಯಿಂದ ಸಂಜೆಯವರೆಗೆ ವಿವಿಧ ಬಡಾವಣೆಗಳಲ್ಲಿ ಈ ಎಟಿಎಂ ವಾಹನ ಸಂಚರಿಸಲಿದೆ. ಈ ವೇಳೆ ಈ ಮೊಬೈಲ್ ಎಟಿಎಂನಿಂದ ಜನರು ಅವರ ಯಾವುದೇ ಬ್ಯಾಂಕುಗಳ ಎಟಿಎಂ ಕಾರ್ಡ್ ಬಳಸಿ ಅವರ ಖಾತೆಯಲ್ಲಿರುವ ಹಣವನ್ನು ಸುಲಭವಾಗಿ ಬಿಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಬ್ಯಾಂಕ್ ಹಾಗೂ ಎಟಿಎಂಗಳಿಗೆ ತೆರಳುವ ಜನರು ಗುಂಪು ಸೇರುವುದಲ್ಲದೇ ಸಾಮಾಜಿಕ ಅಂತರಕಾಯ್ದುಕೊಳ್ಳುವಲ್ಲಿ ಗಮನಹರಿಸುತ್ತಿರಲಿಲ್ಲ. ಹೀಗಾಗಿ ಎಚ್ಚೆತ್ತ ಬ್ಯಾಂಕ್ ಅಧಿಕಾರಿಗಳು ಈ ವಿನೂತನ ಪ್ರಯೋಗದ ಮೂಲಕ ಮನೆ ಬಾಗಿಲಿಗೆ ಎಟಿಎಂ ವ್ಯವಸ್ಥೆ ಕಲ್ಪಿಸುವ ಮೂಲಕ ಜನಸಂದಣಿ ಸೇರುವುದಕ್ಕೆ ಕಡಿವಾಣ ಹಾಕಲು ಮುಂದಾಗಿದ್ದಾರೆ.

ಈ ಮೊಬೈಲ್ ಎಟಿಎಂ ವಾಹನ ಎಲ್ಲಾ ವಾರ್ಡ್ ಹಾಗೂ ಬಡಾವಣೆಗಳಲ್ಲೂ ಸಂಚರಿಸಲಿದೆ. ಜೊತೆಗೆ ಜನರು ಹಣ ಬಿಡಿಸುವ ನೆಪದಲ್ಲಿ ಬ್ಯಾಂಕ್‍ಗೆ ಬಂದು ಕೊರೊನಾ ಸೋಂಕಿನ ಭೀತಿಯಲ್ಲಿ ಮನೆಗೆ ತೆರಳುವ ಬದಲಾಗಿ ಮನೆಯಲ್ಲಿಯೇ ಸುರಕ್ಷಿತವಾಗಿದ್ದು, ಮನೆ ಬಾಗಿಲಿಗೆ ಬರುವ ಮೊಬೈಲ್ ಎಟಿಎಂನಲ್ಲಿ ಹಣ ಬಿಡಿಸಿಕೊಂಡು ನಿರಾತಂಕವಾಗಿರಬಹುದು.

ಅಲ್ಲದೇ ಗ್ರಾಹಕರ ಖಾತೆಯಲ್ಲಿ ಜಮಾವಣೆಯಾಗಿರುವ ಹಣವನ್ನು ಎಟಿಎಂನಲ್ಲಿ ಪರೀಕ್ಷಿಸಬಹುದಾಗಿದೆ. ಹಾಗೆಯೇ ಪ್ರಧಾನಿ ನರೇಂದ್ರ ಮೋದಿಯವರು ಕರೆ ಕೊಟ್ಟಿರುವ ಲಾಕ್‍ಡೌನ್ ಯಶಸ್ವಿಗೊಳಿಸಿ, ಕೊರೊನಾ ಸೋಂಕು ಕೋಟೆನಾಡಿನ ಜನರಲ್ಲಿ ಹರಡದಿರಲಿ ಎಂಬ ಸದುದ್ದೇಶ ಈ ಮೊಬೈಲ್ ಎಟಿಎಂ ಯೋಜನೆಯಲ್ಲಿ ಅಡಗಿದೆ ಎಂದು ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್‍ನ ವ್ಯವಸ್ಥಾಪಕ ಪಾಂಡು ಅವರು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *