ನಾವು ತಪ್ಪು ಮಾಡಿಲ್ಲ, ನ್ಯಾಯ ಕೊಡಿಸಿ- ಕಲಬುರ್ಗಿ ಹತ್ಯೆ ಆರೋಪಿಗಳ ಕೂಗು

Public TV
1 Min Read

ಧಾರವಾಡ: ಸಂಶೋಧಕ ಎಂ.ಎಂ.ಕಲಬುರ್ಗಿ ಹತ್ಯೆಗೆ ಸಂಬಂಧಿಸಿದಂತೆ ಎಸ್‍ಐಟಿ ಚಾರ್ಜ್ ಶೀಟ್ ಸಲ್ಲಿಸಿದ ಬಳಿಕ ಇದೇ ಮೊದಲ ಬಾರಿಗೆ ವಿಚಾರಣೆಗೆ ಆಗಮಿಸಿದ್ದ ಆರೋಪಿಗಳು ಕೋರ್ಟ್ ಆವರಣದಲ್ಲಿ ನಾವು ತಪ್ಪು ಮಾಡಿಲ್ಲ, ನಮಗೆ ನ್ಯಾಯ ಕೊಡಿಸಿ ಎಂದು ಕೂಗಿದ್ದಾರೆ.

ಎಸ್‍ಐಟಿ ಚಾರ್ಜ್ ಶೀಟ್ ಸಲ್ಲಿಸಿದ ಬಳಿಕ ಇದೇ ಮೊದಲ ಬಾರಿಗೆ ಆರೋಪಿಗಳ ವಿಚಾರಣೆ ನಡೆಸಿದ ನ್ಯಾಯಾಲಯ ವಿಚಾರಣೆಯನ್ನು ಅಕ್ಟೋಬರ್ 24ಕ್ಕೆ ಮುಂದೂಡಿದೆ. ಬೆಳಗಾವಿ, ಧಾರವಾಡ ಮತ್ತು ಮುಂಬೈನಲ್ಲಿದ್ದ ಐವರು ಆರೋಪಿಗಳನ್ನು ಇಂದು 3ನೇ ಹೆಚ್ಚುವರಿ ದಿವಾಣಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

ಅಮೋಲ್ ಕಾಳೆ ಹೊರತುಪಡಿಸಿ ಅಮಿತ್ ಬದ್ದಿ, ಗಣೇಶ್ ಮಿಸ್ಕಿನ್, ಪ್ರವೀಣ್ ಚತುರ, ವಾಸುದೇವ ಸೂರ್ಯವಂಶಿ ಹಾಗೂ ಶರದ್ ಬಾಹು ಸಾಹೇಬರನ್ನು ಪೊಲೀಸರು ವಿಚಾರಣೆಗೆ ಹಾಜರುಪಡಿಸಿದ್ದರು. ಆದರೆ ಪ್ರಮುಖ ಆರೋಪಿ ಅಮೋಲ್ ಕಾಳೆಯನ್ನು ಅನಾರೋಗ್ಯದ ಹಿನ್ನೆಲೆ ಮೈಸೂರು ಕಾರಾಗೃಹದಿಂದ ಕರೆ ತಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಪ್ರಕರಣದ ಎಲ್ಲ ಆರೋಪಿಗಳನ್ನು ಅಕ್ಟೋಬರ್ 24ರಂದು ಹಾಜರುಪಡಿಸಲೇಬೇಕು ಎಂದು ಪೊಲೀಸರಿಗೆ ಸೂಚನೆ ನೀಡಿದ ನ್ಯಾಯಾಧೀಶರು, ವಿಚಾರಣೆಯನ್ನು ಮುಂದೂಡಿದರು. ಇದನ್ನೂ ಓದಿ: ಗೌರಿ ಲಂಕೇಶ್ ಹತ್ಯೆಯ ಶಂಕಿತ ಹಂತಕರಿಂದ ಸ್ಫೋಟಕ ಮಾಹಿತಿ-ಮಾಧ್ಯಮಗಳ ಜೊತೆ ಮಾತನಾಡಿದ ಪರಶುರಾಮ್ ವಾಗ್ಮೋರೆ ಮತ್ತು ಮನೋಹರ್ ಯಡವೆ

ಬೆಳಗ್ಗೆ ನ್ಯಾಯಾಲಯ ಪ್ರವೇಶಿಸುತ್ತಿದ್ದ ಸಂದರ್ಭದಲ್ಲಿ ಆರೋಪಿಗಳು ನಾವು ಏನೂ ಮಾಡಿಲ್ಲ. ನಾವು ಅಮಾಯಕರಿದ್ದೇವೆ. ನಮ್ಮನ್ನು ಪ್ರಕರಣದಲ್ಲಿ ಸಿಲುಕಿಸಿದ್ದಾರೆ, ನಮಗೆ ನ್ಯಾಯ ಕೊಡಿಸಿ ಎಂದು ಗೊಣಗುತ್ತಲೇ ಒಳಪ್ರವೇಶಿಸಿದ್ದರು.

ಅಲ್ಲದೆ ಸಂಜೆ ಕೋರ್ಟ್ ನಿಂದ ತೆರಳುತ್ತಿದ್ದಾಗಲೂ ಅಮಿತ್ ಬದ್ದಿ ಹಾಗೂ ಇತರರು, ನಾವು ಅಮಾಯಕರಿದ್ದೇವೆ. ನಾವು ಏನೂ ಮಾಡಿಯೇ ಇಲ್ಲ. ಎಲ್ಲರೂ ನಮ್ಮನ್ನು ಈ ಪ್ರಕರಣದಲ್ಲಿ ಸಿಲಕಿಸುವ ಕೆಲಸ ಮಾಡುತ್ತಿದ್ದಾರೆ. ನಮಗೆ ನ್ಯಾಯ ಬೇಕು, ನ್ಯಾಯ ಕೊಡಿಸಿ ಎಂದು ಕೂಗಾಡುತ್ತಲೇ ಪೊಲೀಸ್ ವಾಹನ ಏರಿದರು.

https://youtu.be/oKmyWQuoB5M

Share This Article
Leave a Comment

Leave a Reply

Your email address will not be published. Required fields are marked *