ನಮಗೂ ಮಂತ್ರಿಗಿರಿ ಕೊಡಿ, ದೆಹಲಿಯಲ್ಲಿ ಕಾಂಗ್ರೆಸ್‌ ಶಾಸಕರು ಠಿಕಾಣಿ – ಸಂಜೆ ಖರ್ಗೆ ಭೇಟಿಗೆ ಟೈಂ ಫಿಕ್ಸ್‌

2 Min Read

– ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು: ನಾರಾಯಣಸ್ವಾಮಿ
– ನಾವು ಬಂಡಾಯ ಎದ್ದಿಲ್ಲ ಎಂದ ಶಾಸಕ ಎಆರ್ ಕೃಷ್ಣಮೂರ್ತಿ

ನವದೆಹಲಿ: ಕರ್ನಾಟಕ ಕಾಂಗ್ರೆಸ್‌ನಲ್ಲಿ (Congress) ಮಹತ್ವದ ರಾಜಕೀಯ ಬೆಳವಣಿಗೆಗಳು ನಡೆದಿವೆ. ನಾಯಕತ್ವ ಗೊಂದಲ, ದಾವಣಗೆರೆ ಜಟಾಪಟಿ ನಡುವೆ ಕಾಂಗ್ರೆಸ್ ಹಿರಿಯ ಶಾಸಕರು ಮಂತ್ರಿಗಿರಿ ಬೇಡಿಕೆಯೊಂದಿಗೆ ದೆಹಲಿ ಯಾತ್ರೆ ಕೈಗೊಂಡಿದ್ದಾರೆ.

ನಿನ್ನೆ ರಾತ್ರಿ 16 ಹಿರಿಯ ಶಾಸಕರು ದೆಹಲಿಗೆ (Congress MLAs In Delhi) ಆಗಮಿಸಿ, ಹೈಕಮಾಂಡ್ ನಾಯಕರನ್ನು ಭೇಟಿಯಾಗಲು ಪ್ರಯತ್ನಿಸುತ್ತಿದ್ದಾರೆ. ಯಶವಂತರಾಯಗೌಡ ಪಾಟೀಲ್, ಕೆ.ಷಡಾಕ್ಷರಿ, ಟಿಬಿ ಜಯಚಂದ್ರ, ಅಶೋಕ್ ಪಟ್ಟಣ್, ನಾರಾಯಣಸ್ವಾಮಿ, ರಾಘವೇಂದ್ರ ಹಿಟ್ನಾಳ್, ಬೇಳೂರು ಗೋಪಾಲಕೃಷ್ಣ ಸೇರಿದಂತೆ 16 ಶಾಸಕರು ದೆಹಲಿಗೆ ಬಂದಿಳಿದಿದ್ದಾರೆ.

ಇಂದು ಸಂಜೆ ಆರು ಗಂಟೆ ಬಳಿಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರನ್ನು ಭೇಟಿ ಮಾಡಲು ಸಮಯ ನಿಗದಿಯಾಗಿದೆ. ಇದನ್ನೂ ಓದಿ: ಸಚಿವ ಸ್ಥಾನದ ಆಕಾಂಕ್ಷಿ ಶಾಸಕರು ದೆಹಲಿಗೆ ಭೇಟಿ ನೀಡೋದ್ರಲ್ಲಿ ತಪ್ಪಿಲ್ಲ: ಸಿದ್ದರಾಮಯ್ಯ

ಬಂಡಾಯ ಎದ್ದಿಲ್ಲ
ಇನ್ನೂ ಸಚಿವ ಸ್ಥಾನಕ್ಕೆ ಹೆಚ್ಚಿದ ಬೇಡಿಕೆ ಕುರಿತು ದೆಹಲಿಯಲ್ಲಿ ಶಾಸಕ ಎಆರ್ ಕೃಷ್ಣಮೂರ್ತಿ ʻಪಬ್ಲಿಕ್‌ ಟಿವಿʼ ಜೊತೆಗೆ ಮಾತನಾಡಿದ್ದಾರೆ. ಸಚಿವ ಸ್ಥಾನ ಕೊಡುವ ನಿರ್ಧಾರ ಹೈಕಮಾಂಡ್‌ಗೆ ಬಿಟ್ಟಿದ್ದು, ಆದ್ರೆ ಶಾಸಕರ ಮಾತನ್ನು ಹೈಕಮಾಂಡ್ ಆಲಿಸಬೇಕು. 2.5 ವರ್ಷದ ಬಳಿಕ ಕ್ಯಾಬಿನೆಟ್ ಪುನಾರಚನೆ (Cabinet Reshuffle) ಮಾಡುವ ಭರವಸೆ ನೀಡಿದ್ದರು, ಹಿಂದೆಯೇ ಬಹಳಷ್ಟು ಅನುಭವಿ, ಸಮರ್ಥ ನಾಯಕರು ಇದ್ದರು. ಅವರಿಗೆ ಅವಕಾಶ ಸಿಕ್ಕಿರಲಿಲ್ಲ, ಅದನ್ನು ನೆನಪು ಮಾಡಲು ಬಂದಿದ್ದೇವೆ. ನಾವು ಪಕ್ಷದ ವಿರುದ್ಧ ಬಂಡಾಯ ಎದ್ದಿಲ್ಲ. ನಾವು ಅವಕಾಶ ಕೇಳುತ್ತಿದ್ದೇವೆ ಅಷ್ಟೇ. ಸಂಪುಟದಿಂದ ಯಾರನ್ನು ಕೈಬಿಡ್ತಾರೆ, ಯಾರನ್ನು ಸೇರಿಸಿಕೊಳ್ತಾರೆ ಅವರಿಗೆ ಬಿಟ್ಟಿದ್ದು, ಒಟ್ನಲ್ಲಿ ಸಂಪುಟ ಪುನರ್ ರಚನೆಯಾಗಲಿ ಎಂಬುದು ನಮ್ಮ ಆಶಯ ಎಂದಿದ್ದಾರೆ.

ನಾಯಕತ್ವದ ನಿರ್ಧಾರ ಹೈಕಮಾಂಡ್ ಗೆ ಬಿಟ್ಟಿದ್ದು, ಅವರು ಏನು ಭರವಸೆ ನೀಡಿದ್ದಾರೆ ಗೊತ್ತಿಲ್ಲ. ಅವಕಾಶ ಮಾಡಿಕೊಟ್ಟರೇ ಗೌರವಯುತ ಶಾಸಕರಾಗಿ ನಡೆದುಕೊಳ್ಳುತ್ತೇವೆ, ಸಿಎಂ ಗಮನಕ್ಕೆ ತಂದೇ ದೆಹಲಿಗೆ ಬಂದಿದ್ದೇವೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಹಿರಿಯ ಶಾಸಕರು ಬಹಿರಂಗವಾಗಿ ಸಚಿವ ಸ್ಥಾನ ಕೇಳೋದ್ರಲ್ಲಿ ತಪ್ಪಿಲ್ಲ – ಪರಮೇಶ್ವರ್

ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು
ʻಪಬ್ಲಿಕ್ ಟಿವಿʼ ಜೊತೆಗೆ ಶಾಸಕ ನಾರಾಯಣಸ್ವಾಮಿ ಮಾತನಾಡಿ, 25 ಶಾಸಕರು ದೆಹಲಿಗೆ ಬಂದಿದ್ದೇವೆ, ಇನ್ನು ಕೆಲವರು ಬರ್ತಿದ್ದಾರೆ. ಅಂಬೇಡ್ಕರ್ ಜಯಂತಿ ಮುಗಿಸಿ ಇನ್ನಷ್ಟು ಜನರು ಬರ್ತಾರೆ, ಹಿಂದೆ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು ಎನ್ನುವುದು ನಮ್ಮ ಆಗ್ರಹ. ಜಿಲ್ಲೆ, ಜಾತಿ, ಅರ್ಹತೆ ಮೇರೆಗೆ ಯಾರನ್ನು ಬೇಕಾದರೂ ಹೈಕಮಾಂಡ್ ಆಯ್ಕೆ ಮಾಡಬಹುದು. ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡುತ್ತಿದ್ದೇವೆ. ಏ.14 ರಂದು ಸುರ್ಜೇವಾಲಾ, ಕೆ.ಸಿ ವೇಣುಗೋಪಾಲ್ ಅವರನ್ನು ಭೇಟಿ ಮಾಡುತ್ತೇವೆ. ಈಗಿರುವ ಸಚಿವರು ಸಮರ್ಥರು ಅಸಮರ್ಥರ ಎನ್ನುವ ಪ್ರಶ್ನೆ ಅಲ್ಲ. ಕೆಲವೊಮ್ಮೆ ಮೊದಲ ಬಾರಿಗೆ ಶಾಸಕರಾದವರು, ಒಂದೇ ಕುಟುಂಬದ ಇಬ್ಬರಿಗೆ ಸಚಿವರನ್ನಾಗಿ ಮಾಡಿದ್ದಾರೆ. ನಮ್ಮಗೆ ಅವಕಾಶ ಸಿಗುವುದು ಯಾವಾಗ ಅಂತ ಪ್ರಶ್ನೆ ಮಾಡಿದ್ದಾರೆ.

ನಾಯಕತ್ವ ಬದಲಾವಣೆ ವಿಚಾರ ಮಾತನಾಡಿ, ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಹೈಕಮಾಂಡ್ ಎಲ್ಲಿ ಹೇಳಿದೆ? ನಮ್ಮ ನಾಯಕರು ಬಹಿರಂಗವಾಗಿ ಇದನ್ನು ಹೇಳಿಲ್ಲ. ಹೈಕಮಾಂಡ್ ಶಾಸಕರಿಗೂ ಅಧಿಕಾರ ಹಸ್ತಾಂತರದ ಬಗ್ಗೆ ಮಾತನಾಡಿಲ್ಲ. ಇನ್ನೊಂದು ತಿಂಗಳಲ್ಲಿ ಸಚಿವ ಸಂಪುಟ ಪುನಾರಚನೆ ಆಗಬೇಕು. ಹೊಸಬರಿಗೂ ಕೆಲಸ ಮಾಡಲು ಅವಕಾಶ ಸಿಗಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ವೇತನ ಹೆಚ್ಚಳಕ್ಕೆ ಆಗ್ರಹಿಸಿ ನಡೆಸುತ್ತಿದ್ದ ನೌಕರರ ಪ್ರತಿಭಟನೆ ವೇಳೆ ಹಿಂಸಾಚಾರ – ಪೊಲೀಸರ ವಾಹನಗಳಿಗೆ ಬೆಂಕಿ

Share This Article