ಡಿಸಿಎಂ ಆಗಿ ಅಧಿಕಾರ ವಹಿಸಿಕೊಂಡ 15 ದಿನದಲ್ಲೇ ಶಾಸಕರಿಗೆ ಪರಂ ಬೇಡವಾದ್ರಾ?

Public TV
1 Min Read

ಬೆಂಗಳೂರು: ಉಪಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡ 15 ದಿನದಲ್ಲೇ ಪಕ್ಷದ ಶಾಸಕರಿಗೆ ಡಾ. ಜಿ ಪರಮೇಶ್ವರ್ ಬೇಡವಾದ್ರಾ ಎಂಬ ಪ್ರಶ್ನೆಯೊಂದು ರಾಜಕೀಯ ವಲಯದಲ್ಲಿ ಮೂಡಿದೆ. ಯಾಕಂದ್ರೆ ಬೆಂಗಳೂರಿನಲ್ಲಿ ಅತಿ ಹೆಚ್ಚು ಶಾಸಕರಿರುವುದು ಕಾಂಗ್ರೆಸ್ ನವರೆ. ಆದರೆ ಆ ಶಾಸಕರಿಗೆ ಪರಮೇಶ್ವರ್ ಸ್ಪಂದಿಸುತ್ತಿಲ್ಲ ಎಂಬ ಆರೋಪವೊಂದು ಇದೀಗ ಕೇಳಿಬರುತ್ತಿದೆ.

ಸಿಟಿ ರೌಂಡ್ಸ್ ಮಾಡಿ ಅಂದ್ರೆ ತಮಗೆ ಇಷ್ಟ ಬಂದ ಎರಡು ಕ್ಷೇತ್ರಕ್ಕೆ ಭೇಟಿ ಕೊಟ್ಟು, ಹೀಗೆ ಬಂದು ಹಾಗೆ ಹೋದ್ರಂತೆ. ಇವರು ಹೀಗೆ ಮಾಡಿದ್ರೆ ನಮಗೆ ಕ್ಷೇತ್ರದಲ್ಲಿ ಕಷ್ಟ ಆಗುತ್ತೆ ಸಾರ್ ಅಂತ ನಗರದ ಕಾಂಗ್ರೆಸ್ ಶಾಸಕರು ಸಿದ್ದರಾಮಯ್ಯ ಬಳಿ ಗೋಳು ತೋಡಿಕೊಂಡಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

ಸಿಎಂ ಆಗಿದ್ದ ಸಿದ್ದರಾಮಯ್ಯ ಮಾದರಿಯಲ್ಲಿ ನಗರದ ಶಾಸಕರನ್ನ ಜೊತೆಯಲ್ಲಿಟ್ಟುಕೊಂಡು ಸಿಟಿ ರೌಂಡ್ಸ್ ಮಾಡಿ ಸಮಸ್ಯೆ ಆಲಿಸುವಂತೆ ಕಾಂಗ್ರೆಸ್ ಶಾಸಕರು ಪರಮೇಶ್ವರ್ ಗೆ ಒತ್ತಾಯಿಸಿದ್ದಾರೆ. ಆದರೆ ಬಿಜೆಪಿ ಶಾಸಕರಿರುವ ಸಿ.ವಿ ರಾಮನ್ ನಗರ ವ್ಯಾಪ್ತಿಯಲ್ಲಿ ಪರಮೇಶ್ವರ್ ಎರಡು ಕೆರೆ ವೀಕ್ಷಿಸಿದ್ದಾರೆ. ಎರಡು ದಿನದ ಹಿಂದೆ ಕಾಂಗ್ರೆಸ್ ಶಾಸಕರಿರುವ ಯಶವಂತಪುರದಲ್ಲಿ ಎರಡು ಗಾರ್ಬೆಜ್ ಡಂಪಿಂಗ್ ಯಾರ್ಡ್ ಗೆ ಭೇಟಿ ನೀಡಿದ್ದಾರೆ. ಪಕ್ಷದ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಿಟಿ ರೌಂಡ್ಸ್ ಮಾಡಿ ಸಾರ್ ಅಂದ್ರೆ ಬರೋಣ ಬಿಡ್ರಿ ಎಂದು ಶಾಸಕರಿಗೆ ಪರಮೇಶ್ವರ್ ಉಡಾಫೆಯಿಂದ ಉತ್ತರಿಸಿದ್ದಾರಂತೆ.

ಹೊರಗಿನವರಿಗೆ ಬೆಂಗಳೂರಿನ ಅಭಿವೃದ್ಧಿ ಖಾತೆ ಕೊಟ್ರೆ ನೋಡಿ ಹೀಗೆ ಆಗೋದು ಅಂತ ಕಾಂಗ್ರೆಸ್ ಶಾಸಕರು ಸಿದ್ದರಾಮಯ್ಯ ಬಳಿ ದೂರು ನೀಡಿದ್ದಾರೆ. ಇದರ ಹಿಂದೆ ಬೆಂಗಳೂರು ಅಭಿವೃದ್ಧಿ ಖಾತೆ ಮೇಲೆ ಕಣ್ಣಿಟ್ಟಿರುವ ಪಕ್ಷದ ಹಿರಿಯ ಶಾಸಕರ ಲಾಬಿಯು ಇದೆ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲೇ ಕೇಳಿ ಬರುತ್ತಿದೆ. ಇದಕ್ಕೆಲ್ಲಾ ಕೆಲಸದ ಮೂಲಕವೇ ಉತ್ತರ ಕೊಡಬೇಕಿದ್ದ ಪರಮೇಶ್ವರ್, ಬರೋಣ ಬಿಡ್ರಿ ಅಂತಾರೆ ಅನ್ನೋದು ಶಾಸಕರ ಅಳಲಾಗಿದೆ.

ಬೆಂಗಳೂರು ಅಭಿವೃದ್ಧಿ ಖಾತೆ ಮೇಲೆ ಕಣ್ಣಿಟ್ಟ ಶಾಸಕರುಗಳು ಆರೋಪ ಮಾಡಿದಾಗ ಸಿದ್ದರಾಮಯ್ಯ ಮಾತ್ರ ಎಲ್ಲಾ ಸರಿ ಆಗುತ್ತೆ ಸ್ವಲ್ಪ ಟೈಮ್ ಕಾಯ್ರಪ್ಪ ಅಂದಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *