ಕೊಪ್ಪಳ್ಳ: ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ ಬಲಗೈ ಬಂಟ ಹಾಗೂ ನಗರಸಭೆ ಸದಸ್ಯ ಶ್ಯಾಮೀದ್ ಮನಿಯಾರ್ ನಾಲ್ಕು ಮದುವೆಯಾಗಿ ಈಗ ಮತ್ತೊಂದು ಮದುವೆಗೆ ಸಿದ್ಧವಾಗಿದ್ದು, ಯುವತಿಯೊಬ್ಬರನ್ನು ಮದುವೆಯಾಗಿ ಬೀದಿಗೆ ತಳ್ಳಿದ ಆರೋಪ ಕೇಳಿಬಂದಿದೆ.
ಸ್ವತಃ ಶ್ಯಾಮೀದ್ ಮನಿಹಾರ ಕೂಡ ತಾವು ಈಗಾಗಲೇ 4 ಮದುವೆಯಾಗಿದ್ದು, ನನ್ನ ಮೇಲೆ ಆರೋಪ ಮಾಡುವವರು ಮತ್ತೊಂದು ಕನ್ಯಾ ನೋಡಿದರೂ ಅವರಿಗೂ ಕಮಿಷನ್ ಕೊಡುತ್ತೀನಿ ಅಂತಾ ಬಹಿರಂಗವಾಗಿ ಹೇಳಿಕೊಂಡಿದ್ದಾನೆ.
ಜಿಲ್ಲೆಯ ಗಂಗಾವತಿ ನಗರಸಭೆ ಮಾಜಿ ಅಧ್ಯಕ್ಷನಾಗಿರುವ ಈತ ಅಧಿಕೃತವಾಗಿ ನಾಲ್ಕು ಮದುವೆಯಾಗಿದ್ದಾನೆ. ಮೂರನೇ ಮದುವೆಯಾಗಿದ್ದ ಈ ಭೂಪ ಕಳೆದ 2013 ರಲ್ಲಿ ಬ್ರೋಕರ್ ಮೂಲಕ ಗೋವಾ ಮೂಲದ ಫರ್ವಿನ್ ಎಂಬ ಯುವತಿಯನ್ನು ವರಿಸಿದ್ದಾನೆ. ಈಗಾಗಲೇ ತನಗೆ ಮದುವೆಯಾಗಿದ್ದು, ಪತ್ನಿಗೆ ತಲಾಕ್ ನೀಡಿದ್ದೇನೆ ಎಂದು ಫರ್ವಿನ್ ಪಾಲಕರನ್ನು ನಂಬಿಸಿ ಮದುವೆಯಾಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಮದುವೆಯಾದ ಕೆಲ ದಿನ ಕೊಪ್ಪಳದಲ್ಲಿ ಮನೆ ಮಾಡಿ, ಹೋಗಿ ಬಂದು ಮಾಡುತ್ತಿದ್ದ. ಆದರೆ ಕೆಲ ದಿನಗಳ ನಂತರ ರೌಡಿಗಳನ್ನು ಬಿಟ್ಟು ನಮ್ಮ ಮೇಲೆ ಹಲ್ಲೆ ಮಾಡಿಸಿದ್ದಾನೆ. ಈತನ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದೆ. ಆಗಲೂ ನಮಗೆ ಸಹಾಯಕ್ಕೆ ಹಸ್ತ ಚಾಚಲಿಲ್ಲ. ಬದಲಾಗಿ ಗೋವಾದಿಂದ ಬಂದ ನಮ್ಮ ತಾಯಿಯೇ ನನಗೆ ಚಿಕಿತ್ಸೆ ಕೊಡಿಸಿದ್ದರು. ಅಷ್ಟರಲ್ಲೇ ಶ್ಯಾಮೀದ್ ಮನಿಯಾರ ನಮ್ಮ ಮೇಲೆ ಹಲ್ಲೆ ಮಾಡಿಸಿದ್ದರಿಂದ ಮತ್ತೆ ಗೋವಾಕ್ಕೆ ಹಿಂದಿರುಗಿದೆವು ಎಂದು ನಾಲ್ಕನೇ ಪತ್ನಿ ಫರ್ವಿನ್ ಆರೋಪಿಸುತ್ತಿದ್ದಾರೆ.
ಇಸ್ಲಾಂ ವಿವಾಹ ಪದ್ಧತಿಯಂತೆ ಒಂದು ಮಹಿಳೆಗೆ ತಲಾಕ್ ನೀಡಿ, ಅಗತ್ಯಕ್ಕೆ ತಕ್ಕಷ್ಟು ಜೀವನಾಂಶ ನೀಡಿದ ನಂತರವೇ ಮತ್ತೊಂದು ಮದುವೆಯಾಗಬೇಕು. ಶ್ಯಾಮೀದ್ ಮನಿಯಾರ, ತಾನು ನಾಲ್ಕು ಮದುವೆ ಮಾಡಿಕೊಂಡಿದ್ದಾಗಿ ರಾಜಾರೋಷವಾಗಿ ಹೇಳುತ್ತಿದ್ದಾನೆ. ಆದರೆ ಯಾರೊಬ್ಬರಿಗೂ ತಲಾಕ್ ನೀಡಿಲ್ಲ ಪರಿಹಾರವಾಗಿ ಜೀವನಾಂಶವನ್ನು ಕೂಡ ನೀಡಿಲ್ಲ. ಬದಲಾಗಿ ಮದುವೆ ಮಾಡಿಕೊಂಡವರನ್ನು ನಡುಬೀದಿಯಲ್ಲಿ ಬಿಟ್ಟಿದ್ದಾನೆ. ಇಷ್ಟೇ ಅಲ್ಲದೇ ಇತ್ತೀಚೆಗೆ ಫಾತಿಮಾ ಎಂಬ ಮಹಿಳೆಯನ್ನು ಮಂಚಕ್ಕೆ ಕರೆದ ಆರೋಪ ಕೂಡ ಕೇಳಿಬಂದಿದೆ.