ಬಿಜೆಪಿ ಜೊತೆ ಕೈ ಜೋಡಿಸೋ ನಿರ್ಧಾರದ ಸುಳಿವು ಬಿಟ್ಟುಕೊಟ್ಟ ಜೆಡಿಎಸ್ ಶಾಸಕ

Public TV
2 Min Read

ಮಂಡ್ಯ: ಗೌರವವಾಗಿ ನಮ್ಮನ್ನು ನಡೆಸಿಕೊಂಡಿದ್ದರೆ ಬಿಜೆಪಿಯವರಿಗೆ ಬೆಂಬಲ ನೀಡುವ ಕುರಿತು ನಿರ್ಧರಿಸಿದ್ದೆವು. ಆದರೆ ಅವರು ನಡೆದುಕೊಳ್ಳುತ್ತಿರುವ ರೀತಿ ನೋಡಿದರೆ ಬೆಂಬಲ ನೀಡುವುದು ಸಂಶಯ ಎಂದು ಹೇಳುವ ಮೂಲಕ ಬಿಜೆಪಿಗೆ ಕೈ ಜೋಡಿಸುವ ನಿರ್ಧಾರವನ್ನು ಜೆಡಿಎಸ್ ಶಾಸಕ ಸುರೇಶ್ ಗೌಡ ಪರೋಕ್ಷವಾಗಿ ಹೊರಹಾಕಿದ್ದಾರೆ.

ನಾಗಮಂಗಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮನ್ನು ಗೌರವಯುತವಾಗಿ ನಡೆಸಿಕೊಂಡಿದ್ದರೆ, ಬಿಜೆಪಿಯವರಿಗೆ ಸಪೋರ್ಟ್ ಮಾಡೋಣ ಎಂದು ತೀರ್ಮಾನ ಮಾಡಿದ್ದೆವು. ಈ ಕುರಿತು ನಾವೇ ಓಪನ್ ಆಗಿ ಆಫರ್ ನೀಡಿದಾಗ ಈ ಆಪರೇಷನ್ ಏತಕ್ಕೆ ಬೇಕಿತ್ತು. ಬೆಂಬಲಿಸುವ ಬಗ್ಗೆ ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ಶಾಸಕರು ಚರ್ಚೆ ಮಾಡಿದ್ದೆವು. ಗೌರವಯುತವಾಗಿ ನಡೆಸಿಕೊಂಡು ಹೋಗುವುದಾದರೆ ಸಪೋರ್ಟ್ ಮಾಡೋಣ ಎಂದು ಕುಮಾರಣ್ಣನೂ ಹೇಳಿದ್ದು ನಿಜ. ಆದರೆ ಬಿಜೆಪಿಯವರು ನಡೆಸಿಕೊಳ್ಳುತ್ತಿರುವ ರೀತಿ ನೋಡಿದರೆ ಬೆಂಬಲ ನೀಡುವುದು ಡೌಟ್ ಎಂದು ಹೇಳುವ ಮೂಲಕ ಬಿಜೆಪಿಗೆ ಬೆಂಬಲ ಕೊಡುವುದಾಗಿ ಆಫರ್ ನೀಡಿದ್ದನ್ನು ಸುರೇಶ್ ಗೌಡ ಒಪ್ಪಿಕೊಂಡಿದ್ದಾರೆ.

ಉಪ ಚುನಾವಣೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಬಿಜೆಪಿ ಗೆಲ್ಲುವುದಿಲ್ಲ. ಅದಕ್ಕಾಗಿ ಎರಡನೇ ಹಂತದ ಆಪರೇಷನ್ ಕಮಲ ಮಾಡಬಹುದು. 2017-18ರಲ್ಲಿ ಬಿಡುಗಡೆ ಮಾಡಿದ್ದ ಅನುದಾನವನ್ನು ಕಿತ್ತುಕೊಳ್ಳುತ್ತಿದ್ದಾರೆ. ಯಾವ ರೀತಿ ರಾಜಕಾರಣ ಮಾಡುತ್ತಿದ್ದಾರೆಂದು ಅರ್ಥವಾಗುತ್ತಿಲ್ಲ. ಇದನ್ನೆಲ್ಲ ನೋಡಿದರೆ ಅಧಿಕಾರ ಬೇರೆಯದಕ್ಕೆ ಬೇಕು, ಜನರ ಕಷ್ಟ, ಸುಖಕ್ಕೆ ಸ್ಪಂದಿಸುವುದಕ್ಕಲ್ಲ ಎಂಬುದು ಅರ್ಥವಾಗುತ್ತಿದೆ. ನೋಡೋಣ ಎಷ್ಟು ದಿನ ನಡೆಯುತ್ತೆ, ಪರಿಸ್ಥಿತಿ ಫೇಸ್ ಮಾಡೋಣ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ನಮ್ಮ ಪಕ್ಷದಿಂದ ಯಾವ ಶಾಸಕರೂ ಬಿಜೆಪಿಗೆ ಹೋಗಲ್ಲ. ನನಗೆ 2018ರಿಂದಲೂ ಆಮಿಷ ಬರುತ್ತಿದೆ. ಜನರು ನೀಡಿರುವ ಅಧಿಕಾರವನ್ನು ವ್ಯಾಪಾರಕ್ಕೆ ಇಡಲ್ಲ ಎಂದು ಇದೇ ವೇಳೆ ತಿಳಿಸಿದರು.

ಚಲುವರಾಯಸ್ವಾಮಿ ರಾಜಕೀಯ ವ್ಯಭಿಚಾರಿ, ಕುತಂತ್ರಿ, ದುಡ್ಡಿಗಾಗಿ, ಅಧಿಕಾರಕ್ಕಾಗಿ ಏನುಬೇಕಾದರೂ ಮಾಡುತ್ತಾರೆ. ಅನುದಾನ ಎಲ್ಲಿ ಬಂತು, ಎಲ್ಲಿ ಹೋಯಿತು. ಬೆಳಗ್ಗೆ ಯಾರ ಹತ್ತಿರ ಹೋಗೋಣ, ಸಂಜೆ, ರಾತ್ರಿ ಯಾರ ಹತ್ತಿರ ಹೋಗಿ ರಾಜಕಾರಣ ಮಾಡೋಣ ಅಂತ ಪಿಎಚ್‍ಡಿ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಚಲುವರಾಯಸ್ವಾಮಿ ವಿರುದ್ಧ ಜೆಡಿಎಸ್ ಶಾಸಕ ಸುರೇಶ್ ಗೌಡ ವಾಗ್ದಾಳಿ ನಡೆಸಿದರು.

ಹೆಚ್‍ಡಿಕೆ ಅಧಿಕಾರಾವಧಿಯಲ್ಲಿ ಮಂಡ್ಯಕ್ಕೆ ಅನುದಾನ ಬಿಡುಗಡೆಯಾಗಿಲ್ಲ ಎಂಬ ಚಲುವರಾಯಸ್ವಾಮಿ ಆರೋಪಕ್ಕೆ ತಿರುಗೇಟು ನೀಡಿದ ಅವರು, ಕುಮಾರಸ್ವಾಮಿ ಏನು ಮಾಡಿದ್ದಾರೆಂಬುದನ್ನ ಪುಸ್ತಕ ಮುದ್ರಿಸಲಾಗಿದೆ. ಇದನ್ನು ಅವರಿಗೂ ತಲುಪಿಸೋಣ. ಹೆಚ್‍ಡಿಕೆ ಸಹಾಯ ಪ್ರತಿಯೊಂದು ಕುಟುಂಬಕ್ಕೂ ತಲುಪಿದಿಯೇ? ಇಲ್ಲವೇ ಎಂದು ಫೋನ್ ಮಾಡಿ ತಿಳಿದುಕೊಳ್ಳಲಿ. ಅರ್ಧ ಓದಿ ರಾಜಕೀಯ ಮಾಡೋರು ಹೀಗೆ ಆಡೋದು. ದೊಡ್ಡವರ ಬಗ್ಗೆ ಮಾತನಾಡಿದರೆ ಅಡ್ವರ್ಟೈಸ್ ಮೆಂಟ್ ಸಿಗುತ್ತೆ, ನಾನು ಒಬ್ಬ ಲೀಡರ್, ನನ್ನ ಅಸ್ಥಿತ್ವ ಕಳಿಯಬೇಡಿ ಎಂದು ಕೇಳಿಕೊಳ್ಳುವುದಕ್ಕೆ ಕುಮಾರಸ್ವಾಮಿ ಬಗ್ಗೆ ಮಾತನಾಡುತ್ತಾರೆ ಎಂದರು.

ಚೆಲುವರಾಯಸ್ವಾಮಿಯವರು ಬಿಜೆಪಿ ಸರ್ಕಾರದ ವಿರುದ್ಧ ಯಾಕೆ ಮಾತನಾಡುತ್ತಿಲ್ಲ. ಕದ್ದು ಬಸರಾದ್ರೂ, ಹಾಗೆ ಬಸರಾದ್ರೂ ಮಗು ಆಚೆ ಬರುತ್ತದೆ. ಚಲುವರಾಯಸ್ವಾಮಿ ಕುತಂತ್ರ ರಾಜಕಾರಣ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Share This Article
Leave a Comment

Leave a Reply

Your email address will not be published. Required fields are marked *