ಚಿಕಿತ್ಸೆ ಪಡೆಯುತ್ತಿರುವ ಬಗ್ಗೆ ವಿಡಿಯೋ ಮೂಲಕ ಶ್ರೀಮಂತ್ ಪಾಟೀಲ್ ಸ್ಪಷ್ಟನೆ

Public TV
2 Min Read

ಬೆಂಗಳೂರು: ಮುಂಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರವ ಕುರಿತು ಖುದ್ದಾಗಿ ಶಾಸಕ ಶ್ರೀಮಂತ್ ಪಾಟೀಲ್ ಅವರು ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ವೈಯಕ್ತಿಕ ಕೆಲಸದ ನಿಮಿತ್ತ ಬುಧವಾರ ಚೆನ್ನೈಗೆ ಹೋಗಿದ್ದೆ. ಅಲ್ಲಿ ನನಗೆ ಎದೆ ನೋವು ಕಾಣಿಸಿಕೊಂಡಿತ್ತು. ಚೆನ್ನೈನಲ್ಲಿ ಯಾವ ಆಸ್ಪತ್ರೆಗೆ ದಾಖಲಾಗಬೇಕು ಎನ್ನುವುದು ತಿಳಿಯಲಿಲ್ಲ. ಹೀಗಾಗಿ ತಕ್ಷಣವೇ ಅಲ್ಲಿಂದ ಮುಂಬೈಗೆ ಬಂದೆವು ಎಂದು ಶಾಸಕರು ಹೇಳಿದ್ದಾರೆ.

ಮುಂಬೈನ ಸೇಂಟ್ಸ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡೆ. ಆದರೆ ವೈದ್ಯರು ನೀವು ವಿಶ್ರಾಂತಿ ಪಡೆಯಬೇಕು ಎಂದು ಸಲಹೆ ನೀಡಿ, ದಾಖಲಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ನನಗೆ ಇನ್ನೂ ಸ್ವಲ್ಪ ಎದೆ ನೋವು ಇದೆ ಎಂದು ಶಾಸಕರು ತಿಳಿಸಿದ್ದಾರೆ.

ಶಾಸಕ ಶ್ರೀಮಂತ್ ಪಾಟೀಲ್ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇತ್ತ ಶಾಸಕರು ಈ ವಿಡಿಯೋವನ್ನು ಸ್ಪೀಕರ್ ರಮೇಶ್ ಕುಮಾರ್ ಅವರಿಗೂ ಕಳುಹಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಶ್ರೀಮಂತ್ ಪಾಟೀಲ್ ಅವರು ಇಂದು ನಡೆದ ವಿಶ್ವಾಸ ಮತಯಾಚನೆ ಚರ್ಚೆಗೆ ಹಾಜರಾಗಿರಲಿಲ್ಲ. ಹೀಗಾಗಿ ಬಿಜೆಪಿಯವರೇ ಶಾಸಕರನ್ನು ಅಪಹರಿಸಿದ್ದಾರೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ ಅನೇಕ ಮೈತ್ರಿ ನಾಯಕರು ಆರೋಪಿಸಿದ್ದರು. ಅಷ್ಟೇ ಅಲ್ಲದೆ ಅವರಿಗೆ ಚಿಕಿತ್ಸೆ ನೀಡುತ್ತಿರುವ ಫೋಟೋಗಳನ್ನು ಹಿಡಿದು, ಇದು ಸುಳ್ಳು ಎಂದು ಹೇಳಿದ್ದರು.

ಶ್ರೀಮಂತ್ ಪಾಟೀಲ್ ಅವರು ಹೃದಯದ ಸಮಸ್ಯೆ ಇರುವ ಕಾರಣ ಸದನಕ್ಕೆ ಆಗಮಿಸುವುದಿಲ್ಲ ಎಂದು ಬೆಳಗ್ಗೆ ಪತ್ರದ ಮೂಲಕ ಸ್ಪೀಕರ್‍ಗೆ ತಿಳಿಸಿದ್ದಾರೆ. ಆದರೆ ನಮ್ಮ ರಾಜ್ಯದಲ್ಲೇ ಹೈಟೆಕ್ ಆಸ್ಪತ್ರೆಗಳಿದ್ದವು, ಚೆನ್ನೈ, ಮುಂಬೈಗೆ ಓಡಾಡುವ ಅಗತ್ಯವೇನಿತ್ತು ಎಂದು ಸ್ಪೀಕರ್ ಸದನದಲ್ಲಿ ಪ್ರಶ್ನಿಸಿದ್ದರು.

ವಿಮಾನ ಪ್ರಯಾಣದ ಟಿಕೆಟ್ ಸಹ ಸಿಕ್ಕಿದೆ. ಶ್ರೀಮಂತ್ ಪಾಟೀಲ್ ಅವರಿಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ. ಬಿಜೆಪಿಯವರೇ ಅವರನ್ನು ಅಪಹರಿಸಿದ್ದಾರೆ ಎಂದು ಆಡಳಿತ ಪಕ್ಷದ ನಾಯಕರು ಕಿಡಿಕಾರಿದ್ದರು.

ಈ ಆರೋಪವನ್ನು ಪುರಸ್ಕರಿಸಿದ ಸ್ಪೀಕರ್ ಗಂಭೀರ ಆರೋಗ್ಯ ಸಮಸ್ಯೆಗಳು ಇದ್ದರೆ ಮಾತ್ರ ಪತ್ರ ಬರೆದು ತಿಳಿಸಿ ಹೋಗಬಹುದು. ಆದರೆ ಶ್ರೀಮಂತ ಪಾಟೀಲ್ ಅವರು ನಿನ್ನೆಯಿಂದಲೂ ಆರಾಮವಾಗಿಯೇ ಇದ್ದರು ಎಂದು ಆಡಳಿತ ಪಕ್ಷದ ನಾಯಕರು ತಿಳಿಸುತ್ತಿದ್ದಾರೆ. ಬೆಳಗ್ಗೆ ಇದ್ದಕ್ಕಿದ್ದಂತೆ ಆರೋಗ್ಯ ಸಮಸ್ಯೆ ಉಲ್ಬಣಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದರು.

ಈ ವಿಚಾರದ ಬಗ್ಗೆ ಸ್ಪಷ್ಟನೆ ತಿಳಿಯಬೇಕು, ಶ್ರೀಮಂತ್ ಪಾಟೀಲ್ ನಾಪತ್ತೆ ಕುರಿತು ಪತ್ನಿ ಹಾಗೂ ಮನೆಯವರಿಂದ ಮಾಹಿತಿ ಪಡೆದು, ನಾಳೆಯೇ ವರದಿ ತರಿಸಿಕೊಳ್ಳುವಂತೆ ಗೃಹ ಇಲಾಖೆಗೆ ಸ್ಪೀಕರ್ ಸೂಚಿಸಿದರು.

Share This Article
Leave a Comment

Leave a Reply

Your email address will not be published. Required fields are marked *