ಸಚಿವ ಸ್ಥಾನ ಸಿಗದಿದ್ದಕ್ಕೆ ಶಾಸಕರ ಬೆಂಬಲಿಗರಿಂದ ಪ್ರತಿಭಟನೆ

Public TV
1 Min Read

ಬೆಂಗಳೂರು: ಒಂದೆಡೆ ಸಚಿವ ಸಂಪುಟ ವಿಸ್ತರಣೆಯಾಗಿದ್ರೆ ಮತ್ತೊಂದೆಡೆ ಭಿನ್ನಮತ ಭುಗಿಲೆದ್ದಿದೆ. ತಮ್ಮ ನಾಯಕರಿಗೆ ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಕಾರ್ಯಕರ್ತರು ಆಕ್ರೋಶಗೊಂಡಿದ್ದಾರೆ. ಸಮ್ಮಿಶ್ರ ಸರ್ಕಾರ ರಚನೆಯಾಗಿ 6 ತಿಂಗಳಿನಿಂದಲೂ ಮುಂದೂಡಿಕೆಯಲ್ಲಿದ್ದ ಎರಡನೇ ಹಂತದ ಸಚಿವ ಸಂಪುಟ ಬೇಗುದಿ ನಡುವೆ ಕೊನೆಗೂ ವಿಸ್ತರಣೆಯಾಗಿದೆ. ಇದು ಪೂರ್ಣ ಪ್ರಮಾಣದದ್ದಲ್ಲ. ಯಾಕಂದ್ರೆ, ಕೇವಲ ಕಾಂಗ್ರೆಸ್ ಕೋಟಾ ಮಾತ್ರ ಭರ್ತಿಯಾಗಿದೆ. ಇತ್ತ ರಾಜಭವನದಲ್ಲಿ ಪ್ರಮಾಣ ವಚನ ಕಾರ್ಯಕ್ರಮ ನಡೆದರೇ ಇತ್ತ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಕಾರ್ಯಕರ್ತರ ಆಕ್ರೋಶ ಕಟ್ಟೆಯೊಡೆದಿತ್ತು.

ಕಲಬುರಗಿಯ ಚಿಂಚೊಳ್ಳಿ ಶಾಸಕ ಡಾ ಉಮೇಶ್ ಜಾಧವ್, ಜೇವರ್ಗಿಯ ಅಜಯ್ ಸಿಂಗ್‍ಗೆ ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆಯಲ್ಲಿ ಎರಡೂ ತಾಲೂಕುಗಳಲ್ಲಿ ಬೆಂಬಲಿಗರು ಟೈರ್‍ಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದರು. ಹಿರಿಯ ನಾಯಕ ಹಾಗು ಎಂಎಲ್‍ಸಿ ಕೆ.ಸಿ.ಕೊಂಡಯ್ಯ ಅವರು ಸಿದ್ದರಾಮಯ್ಯ ಕಟ್ಟಿರೋ ಟೀಮ್‍ನಲ್ಲಿ ಅನುಭವಿಗಳ ಕೊರತೆ ಇದೆ. ಮಲ್ಲಿಕಾರ್ಜುನ ಖರ್ಗೆ ಸಲಹೆಯನ್ನು ಕಡೆಗಣಿಸಲಾಗಿದೆ ಅಂತ ಹುಬ್ಬಳ್ಳಿಯಲ್ಲಿ ಕಿಡಿಕಾರಿದ್ದಾರೆ.

ಶಾಸಕ ನಾಗೇಂದ್ರಗೆ ಸಚಿವ ಸ್ಥಾನ ತಪ್ಪಿದ ಹಿನ್ನೆಲೆ ಬೆಂಬಲಿಗರು ಬಳ್ಳಾರಿಯ ರಾಯಲ್ ಸರ್ಕಲ್‍ನಲ್ಲಿ ಪ್ರತಿಭಟನೆ ನಡೆಸಿ ಸಚಿವ ಡಿಕೆ ಶಿವಕುಮಾರ್, ಸಂಸದ ಉಗ್ರಪ್ಪ ಬ್ಯಾನರ್‍ಗೆ ಚಪ್ಪಲಿಯಿಂದ ಹೊಡೆದು ಆಕ್ರೋಶ ಹೊರಹಾಕಿದರು. ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ್ ಸಚಿವ ಸ್ಥಾನ ತಪ್ಪಿದ ಹಿನ್ನಲೆ ಭೀಮಾನಾಯ್ಕ್ ಬೆಂಬಲಿಗರು ಹಾಗೂ ಕೈ ಕಾರ್ಯಕರ್ತರು ಟೈರ್ ಗೆ ಬೆಂಕಿ ಹಚ್ಚಿದರು. ಅರಣ್ಯ ಮತ್ತು ಪರಿಸರ ಖಾತೆಯ ಸಚಿವ ಸ್ಥಾನದಿಂದ ಆರ್.ಶಂಕರ್ ಕೈಬಿಟ್ಟ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆ ರಾಣೇಬೆನ್ನೂರು ನಗರದಲ್ಲಿ ಬೆಂಬಲಿಗರು ಪ್ರತಿಭಟನೆ ನಡೆಸಿದರು. ಕೋರ್ಟ್ ಸರ್ಕಲ್ ನಲ್ಲಿ ಟೈರ್‍ಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ರು. ಇತ್ತ ಚಿತ್ರದುರ್ಗದ ಚಳ್ಳಕೆರೆ ಶಾಸಕ ರಘುಮೂರ್ತಿ ಬೆಂಬಲಿಗರು ಸಿಡಿದೆದ್ದಿದ್ದಾರೆ.

ರಾಜ್ಯ ರಾಜಕಾರಣ ಇದೀಗ ಕುತೂಹಲ ಘಟ್ಟ ತಲುಪಿದೆ. ಅಸಮಾಧಾನದಿಂದಾಗಿ ಮೈತ್ರಿ ಸರ್ಕಾರ ಉರುಳುತ್ತಾ….? ಅಥವಾ ಭಿನ್ನಮತ ಶಮನ ಆಗುತ್ತಾ? ಅನ್ನೋದನ್ನ ಕಾದು ನೋಡಬೇಕಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *