ಪಬ್ಲಿಕ್ ಟಿವಿ ಇಂಪ್ಯಾಕ್ಟ್- ಚಿತ್ರದುರ್ಗದ ‘ಮಹಾತಾಯಿ’ ಸಹಾಯಕ್ಕೆ ನಿಂತ ಶಾಸಕ

Public TV
1 Min Read

– ಮಗು ದತ್ತು ಪಡೆದ ಜಿ.ಪಂ ಸದಸ್ಯೆ

ಚಿತ್ರದುರ್ಗ: ಜಿಲ್ಲೆಯಲ್ಲಿ ತಾಯಿಯೊಬ್ಬರು ವಿದ್ಯಾಭ್ಯಾಸಕ್ಕಾಗಿ ತನ್ನ ಅಂಗವಿಕಲ ಮಗನನ್ನು ನಿತ್ಯ ಹೆಗಲ ಮೇಲೆ ಹೊತ್ತು ಶಾಲೆಗೆ ಕರೆ ತರುತ್ತಿದ್ರು. ಇದನ್ನ ಕಂಡ ಪಬ್ಲಿಕ್ ಟಿವಿ ತಾಯಿಯ ವಾತ್ಸಲ್ಯ ಕುರಿತು ”ಮಹಾತಾಯಿ” ಎಂಬ ಶೀರ್ಷಕೆಯಡಿ ವರದಿ ಬಿತ್ತರಿಸಿತ್ತು.

ವರದಿ ಗಮನಿಸಿದ ಚಳ್ಳಕೆರೆ ಶಾಸಕ ರಘುಮೂರ್ತಿ ಈ ಕುಟುಂಬಕ್ಕೆ ಮನೆಭಾಗ್ಯ ಕರುಣಿಸಿದ್ದಾರೆ. ಅಲ್ಲದೆ ಜಿಲ್ಲಾಪಂಚಾಯ್ತಿ ಸದಸ್ಯೆ ಚಂದ್ರಿಕಾ ಶ್ರೀನಿವಾಸ್ ವಿದ್ಯಾಭ್ಯಾಸದ ಹೊಣೆ ಹೊತ್ತು ಮಗುವನ್ನು ದತ್ತು ಪಡೆದಿದ್ದಾರೆ. ಜೊತೆಗೆ ತಾಲೂಕು ಪಂಚಾಯ್ತಿ ಈಓ ಶ್ರೀಧರ್ ಬಾರೆಕಾರ್ ಸ್ಥಳ ಪರಿಶೀಲನೆ ನಡೆಸಿ ಮನೆ ಮಂಜೂರು ಮಾಡಿದ್ದಾರೆ.

ಈತನ ಅಂಗವಿಕಲತೆಯನ್ನು ಗಮನಿಸಿರೋ ಮಹಿಳಾ ಮತ್ತು ಮಕ್ಕಳ ಇಲಾಖೆ ಕಲ್ಯಾಣಾಧಿಕಾರಿ ಶಾಲೆಗೆ ತೆರಳಲು ಸಹಕಾರಿಯಾಗುವಂತಹ ಮೂರು ಗಾಲಿಯ ಸೈಕಲ್ ಹಾಗು ಕಿವಿಗೆ ಶ್ರವಣ ಸಾಧನಗಳನ್ನು ವಿತರಿಸಿದ್ದಾರೆ.

ತಾಯಿಯ ಹೆಗಲೇ ಆಸರೆ:
ವಿಶೇಷಚೇತನ ಮಗನ ವಿದ್ಯಾಭ್ಯಾಸಕ್ಕಾಗಿ ತಾಯಿಯ ಹೆಗಲೇ ಬಂಡಿಯಾಗಿರುವ ದೃಶ್ಯವೊಂದು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಕಡುದರಹಳ್ಳಿಯಲ್ಲಿ ಬೆಳಕಿಗೆ ಬಂದಿತ್ತು. ತಂತ್ರಜ್ಞಾನದ ಯುಗದಲ್ಲೂ ಈ ಗ್ರಾಮಕ್ಕೆ ಸಾರಿಗೆ ವ್ಯವಸ್ಥೆಯಿಲ್ಲ. ಹೀಗಾಗಿ ಆಟೋ, ಬಸ್ ಇಲ್ಲವೆಂಬ ನೆಪ ಹೇಳಿ ತನ್ನ ಮಗನ ವಿದ್ಯಾಭ್ಯಾಸ ಮೊಟಕುಗೊಳಿಸದ ವಾತ್ಸಲ್ಯಮಯಿ ತಾಯಿ ಜಯಲಕ್ಷ್ಮಿ ತಮ್ಮ ವಿಶೇಷ ಚೇತನನಾಗಿರುವ ಮಗನಾದ ರಾಜೇಶ್ ಬಾಬುನನ್ನು ನಿತ್ಯ ತನ್ನ ಹೆಗಲ ಮೇಲೆ ನಾಲ್ಕು ಕಿ.ಮೀ ಹೊತ್ತುಕೊಂಡು ಓದಿಸುತ್ತಿದ್ದಾರೆ.

ಐಎಎಸ್ ಓದಬೇಕೆಂಬ ಕನಸು ಹೊತ್ತಿರುವ ರಾಜೇಶ್ ನ ಕನಸು ಈಡೇರಿಸಲು ಜಯಲಕ್ಷ್ಮಿ ತನ್ನ ಜೀವನ ಧಾರೆ ಎರೆಯುತ್ತಿದ್ದಾರೆ. ಜಯಲಕ್ಷ್ಮಿ ಅವರಿಗೆ ಮೂವರು ಮಕ್ಕಳಿದ್ದು, ಮೊದಲನೇ ಮಗ ರಾಜೇಶ್‍ಗೆ ಅಂಗವಿಕಲತೆ ಕಾಡುತ್ತಿದೆ. ಪತಿ ಇಲ್ಲವಾದರೂ ಎದೆಗುಂದದ ಜಯಲಕ್ಷ್ಮಿ, ಸಣ್ಣಪುಟ್ಟ ಕೂಲಿ ಕೆಲಸ ಮಾಡಿ ಮೂವರು ಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು ನೀಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *