ನಮಗೆ ವೋಟ್ ಹಾಕಿದ್ದಕ್ಕೆ ಎಚ್‍ಡಿಕೆ ಸಿಎಂ – ಕೈ ಶಾಸಕ ರಾಘವೇಂದ್ರ ಹಿಟ್ನಾಳ್ ಟಾಂಗ್

Public TV
1 Min Read

ಕೊಪ್ಪಳ: ರೈತರ ಹೋರಾಟದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಸಿಎಂ ಕುಮಾರಸ್ವಾಮಿ ಅವರಿಗೆ ಕಾಂಗ್ರೆಸ್ ಶಾಸಕ ಕೊಪ್ಪಳ ವಿಧಾನಸಭಾ ಕ್ಷೇತ್ರದ ರಾಘವೇಂದ್ರ ಹಿಟ್ನಾಳ್ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ಜನರು ಚುನಾವಣೆಯಲ್ಲಿ ಜಾತಿ, ಹಣ ನೋಡಿ ಮತಹಾಕಿದ್ದಾರೆ ಎಂದು ಹೇಳಿದ್ದ ಸಿಎಂ ಎಚ್‍ಡಿಕೆ ಹೇಳಿಕೆಗೆ ಟಾಂಗ್ ನೀಡಿದ ಶಾಸಕ ರಾಘವೇಂದ್ರ, ಜನರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದ್ದರಿಂದ ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾರೆ ಎಂದು ಹೇಳಿದರು.

ತುಂಗಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಿ ಮಾತನಾಡಿದ ಶಾಸಕರು, ಮುಖ್ಯಮಂತ್ರಿಗಳು ಯಾವ ಅರ್ಥದಲ್ಲಿ ರೈತರ ಹೋರಾಟದ ಕುರಿತು ಹೇಳಿದ್ದಾರೆಂದು ನನಗೆ ಗೊತ್ತಿಲ್ಲ. ಅವರು ಹೇಳಿದ ಮಾತಿಗೆ ನೀವು ಅವರನ್ನೇ ಕೇಳಬೇಕು. ಆದರೆ ನನಗೆ, ಅಮರೇಗೌಡರಿಗೆ ರೈತರು ಮತ ಹಾಕಿದ್ದಾರೆ. ಕೊಪ್ಪಳದ ಜನರು ನಮಗೆ ಮತ ಹಾಕಿದ್ದಕ್ಕೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾರೆ. ಸಿಎಂ ಅವರ ಹೇಳಿಕೆ ಕುರಿತು ನಾನು ಅವರೊಂದಿಗೆ ಚರ್ಚೆ ಮಾಡುತ್ತೇನೆ ಎಂದು ತಿಳಿಸಿದರು.

ಜುಲೈ 23 ರಂದು ಚನ್ನಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಕುಮಾರಸ್ವಾಮಿ, ರೈತರು ಸಾಲ ಮನ್ನಾ ಕುರಿತು ಕೊಪ್ಪಳದಲ್ಲಿ ಈಗ ಪ್ರತಿಭಟನೆ ಮಾಡುತ್ತಿದ್ದಾರೆ. ಚುನಾವಣೆಯಲ್ಲಿ ನನ್ನನ್ನು ನೆನಪು ಮಾಡಿಕೊಳ್ಳದೆ ಹಣ, ಜಾತಿಗೆ ಮತ ಹಾಕಿದ್ದಾರೆ. ಅವರಿಗೆ ನನ್ನನ್ನು ಕೇಳುವ ನೈತಿಕತೆ ಇಲ್ಲ ಎಂದು ದೂರಿದ್ದರು.

Share This Article
Leave a Comment

Leave a Reply

Your email address will not be published. Required fields are marked *