– ಮೃತ ವ್ಯಕ್ತಿ ಕುಟುಂಬಸ್ಥರಿಗೆ ಕಾಂಗ್ರೆಸ್ ಶಾಸಕ ಸಾಂತ್ವನ
ಚಿಕ್ಕಬಳ್ಳಾಪುರ: ಜಿಲ್ಲಾ ಪಂಚಾಯಿತಿ ಗುತ್ತಿಗೆ ನೌಕರ ಕಾರು ಚಾಲಕ ಬಾಬು ಆತ್ಮಹತ್ಯೆ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ. ಇದರ ನಡುವೆ ಭಾನುವಾರ ಮೃತ ಬಾಬು ನಿವಾಸಕ್ಕೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಗೌರಿಬಿದನೂರು ತಾಲೂಕಿನ ಇಡಗೂರು ಗ್ರಾಮಕ್ಕೆ ಭೇಟಿ ನೀಡಿ ಮೃತ ಬಾಬು ಪತ್ನಿ ಶಿಲ್ಪಾ ಹಾಗೂ ತಾಯಿ ಕಾಳಮ್ಮ ಸೇರಿದಂತೆ ಸಹೋದರ ಲೋಕೇಶ್‌ಗೆ ಧೈರ್ಯ ಹೇಳಿದರು. ಈ ವೇಳೆ, ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಶಾಸಕ ಪ್ರದೀಪ್ ಈಶ್ವರ್, ಸಂಸದ ಸುಧಾಕರ್‌ಗೆ ಸವಾಲು ಹಾಕಿದರು. ಇದನ್ನೂ ಓದಿ: ಗುತ್ತಿಗೆ ಕಾರು ಚಾಲಕ ಆತ್ಮಹತ್ಯೆ ಕೇಸ್ – ಸಂಸದ ಡಾ. ಕೆ.ಸುಧಾಕರ್ ವಿರುದ್ಧ FIR ದಾಖಲು
ಮೃತ ಬಾಬು ಪತ್ನಿ ಶಿಲ್ಪಾಗೆ ಸರ್ಕಾರಿ ಕೆಲಸ ಕೊಡಿಸುವಂತೆ ಸಂಬಂಧಿಕರು ಪ್ರದೀಪ್ ಈಶ್ವರ್‌ಗೆ ಬೇಡಿಕೆ ಇಟ್ಟಿದ್ದು, ಕೆಲಸ ಕೊಡಿಸುವುದಾಗಿ ಭರವಸೆ ನೀಡಿದರು. ತಾಯಿ ಕಾಳಮ್ಮಗೆ ಗುತ್ತಿಗೆ ಆಧಾರದಲ್ಲಿ ಸರ್ಕಾರಿ ಕಚೇರಿಯೊಂದರಲ್ಲಿ ಕೆಲಸ ಕೊಡಿಸುವ ಭರವಸೆ ಕೊಟ್ಟರು. ಸಹೋದರ ಲೋಕೇಶ್‌ಗೂ ಹೃದಯ ಸಂಬಂಧಿ ಸಮಸ್ಯೆ ಇದೆ ಅಂತ ತಿಳಿದು ಅವರ ಆರೋಗ್ಯಕ್ಕಾಗಿ ಸಹಾಯ ಹಾಗೂ ಕೆಲಸ ಕೊಡಿಸುವುದಾಗಿ ಹೇಳಿದರು. ಸರ್ಕಾರದಿಂದ ಎಸ್‌ಸಿ/ಎಸ್‌ಟಿ ದೌರ್ಜನ್ಯ ಪ್ರಕರಣದಡಿ ಬರುವ 8 ಲಕ್ಷ ರೂಪಾಯಿ ಪರಿಹಾರವನ್ನ ಅದಷ್ಟು ಬೇಗ ಕೊಡಿಸುತ್ತೇನೆ. ವೈಯುಕ್ತಿಕವಾಗಿ ಅರ್ಥಿಕವಾಗಿಯೂ ಸಹ ಕುಟುಂಬದ ಜೊತೆ ನಿಲ್ಲುವುದಾಗಿ ತಿಳಿಸಿದರು.
ಎಫ್‌ಐಆರ್‌ನಲ್ಲಿ ಸಂಸದ ಸುಧಾಕರ್ ಹೆಸರು ಸೇರ್ಪಡೆಗೆ ಬಿಜೆಪಿ ನಾಯಕರ ಅಕ್ಷೇಪಕ್ಕೆ ಪ್ರತಿಕ್ರಿಯಿಸಿದ ಪ್ರದೀಪ್ ಈಶ್ವರ್, ಬಿಜೆಪಿ ನಾಯಕರಿಗೆ ಕಾಮನ್‌ಸೆನ್ಸ್ ಇಲ್ಲ. ಗೌರಿಬಿದನೂರಿಗೆ ಬಂದು ಸುದ್ದಿಗೋಷ್ಟಿ ಮಾಡುವ ಬದಲು ಬಾಬು ಮನೆಗೆ ಬಂದು ಕಣ್ಣೀರು ಒರೆಸಬಹುದಿತ್ತಲ್ಲ? ಸಂಸದ ಸುಧಾಕರ್ ಅವರೇ, ನಮ್ಮ ಪೊಲೀಸರ ಮೇಲೆ ನಂಬಿಕೆ ಇಲ್ಲ ಅಂದ್ರೆ ನಿಮ್ಮದೇ ಕೇಂದ್ರ ಸರ್ಕಾರ ಇದೆಯಲ್ಲ. ಸಿಬಿಐ ತನಿಖೆ ಮಾಡಿಸಿ ಆರೋಪದಿಂದ ಮುಕ್ತರಾಗಿ ಎಂದು ಸವಾಲು ಹಾಕಿದರು. ಇದನ್ನೂ ಓದಿ: ನನ್ನ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಯಾರೆಂದು ಗೊತ್ತಿಲ್ಲ: ಡಾ.ಸುಧಾಕರ್ ರಿಯಾಕ್ಷನ್
ಮಗನ ನೆನೆದು ಕುಟುಂಬಸ್ಥರು ಶಾಸಕರ ಎದುರು ಕಣ್ಣೀರಿಟ್ಟರು. ಬಿಜೆಪಿಯವರು ಆರೋಪ ಮಾಡಿದಂತೆ ನಾವು ಯಾರು ಕೂಡ ಒತ್ತಡದಿಂದ ದೂರು ದಾಖಲಿಸಿಲ್ಲ. ನಮ್ಮ ಮಗ ಬರೆದಿರುವ ಡೆತ್‌ನೋಟ್ ಆಧಾರದ ಮೇಲೆಯೇ ದೂರು ನೀಡಿದ್ದೇವೆ. ರಾಜಕಾರಣಕ್ಕೂ ನಮಗೂ ಸಂಬಂಧ ಇಲ್ಲ ಎಂದು ಮೃತ ಬಾಬು ತಾಯಿ ಕಾಳಮ್ಮ ಸ್ಪಷ್ಟಪಡಿಸಿದ್ದಾರೆ.