ಬಿಎಸ್‍ವೈ ಅಸ್ತಿತ್ವ ನನ್ನ ಕೈಲಿದೆ: ಶರಣಗೌಡ

Public TV
2 Min Read

-ಸಿಎಂ ವಿರುದ್ಧ ಬಿಜೆಪಿಯಲ್ಲಿಯೇ ಷಡ್ಯಂತ್ರ

ಯಾದಗಿರಿ: ಸಿಎಂ ಬಿ.ಎಸ್.ಯಡಿಯೂರಪ್ಪನವರ ಅಸ್ತಿತ್ವ ನನ್ನ ಕೈಯಲ್ಲಿದೆ. ಆಪರೇಷನ್ ಕಮಲದ ಆಡಿಯೋ ಪ್ರಕರಣವನ್ನು ರೀ ಓಪನ್ ಮಾಡುವಂತೆ ಬಿಜೆಪಿಯ ಹಿರಿಯ ನಾಯಕರು ನನಗೆ ಸೂಚನೆ ನೀಡಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ಮಹಾ ಪ್ರಧಾನ ಕಾರ್ಯದರ್ಶಿ ಶರಣಗೌಡ ಕಂದಕೂರ ಹೊಸ ಬಾಂಬ್ ಸಿಡಿಸಿದ್ದಾರೆ.

ಇಂದು ಯಾದಗಿರಿಯಲ್ಲಿ ಕುಮಾರಸ್ವಾಮಿ ಸರ್ಕಾರ ನೀಡಿದ್ದ ಅನುದಾನ ಹಿಂಪಡೆದ ಹಿನ್ನೆಲೆಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯ್ತು. ಈ ವೇಳೆ ಮಾತನಾಡಿದ ಶರಣಗೌಡ ಕಂದಕೂರ, ಸಿಎಂ ವಿರುದ್ಧವೇ ಕೆಲ ಬಿಜೆಪಿ ನಾಯಕರು ಷಡ್ಯಂತ್ರ ರಚಿಸುತ್ತಿದ್ದಾರೆ. ನನ್ನ ಮೂಲಕ ಸಿಎಂಗೆ ಖೆಡ್ಡಾ ತೋಡಿದ್ದು, ಹಾಗಾಗಿ ಬಿಎಸ್‍ವೈ ಅಸ್ತಿತ್ವ ನನ್ನ ಕೈಯಲಿದೆ ಎಂದು ಗುಡುಗಿದರು.

ಕುಮಾರಸ್ವಾಮಿ ಅವರ ಆಡಳಿತಾವಧಿಯಲ್ಲಿ ನೀಡಿದ್ದ ಅನುದಾನ ಬಿಜೆಪಿ ಸರ್ಕಾರ ಹಿಂಪಡೆಯುವ ಮೂಲಕ ದ್ವೇಷದ ರಾಜಕಾರಣಕ್ಕೆ ಮುಂದಾಗಿದೆ. ಆಡಳಿತ ಪಕ್ಷದ ಶಾಸಕರಿರುವ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡುವುದು ಸಹಜ. ಆದ್ರೆ ಈ ಹಿಂದೆ ನೀಡಲಾಗಿದ್ದ ಅನುದಾನವನ್ನು ಕಡಿತಗೊಳಿಸಬಾರದು. ಪ್ರದೇಶಾಭಿವೃದ್ಧಿ ನಿಧಿಗೆ ನೀಡಿದ್ದ 4.50 ಕೋಟಿ ರೂ. ಪಿಡಬ್ಲೂಡಿ ಹಾಗೂ ಖಾಸಾಮಠಕ್ಕೆ ನೀಡಿದ್ದ ಅನುದಾನವನ್ನೂ ಹಿಂಪಡೆಯಲಾಗಿದೆ. ಆಪರೇಷನ್ ಕಮಲದ ಆಡಿಯೋ ಬಿಡುಗಡೆ ಮಾಡಿದ್ದೇನೆ ಎಂಬ ಉದ್ದೇಶದಿಂದ ಸಿಎಂ ದ್ವೇಷ ಸಾಧಿಸುತ್ತಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ದೇವದುರ್ಗ ಐಬಿಯಲ್ಲಿ ಬಿಎಸ್‍ವೈಯಿಂದ ಆಪರೇಷನ್ ಕಮಲ – ಸ್ಫೋಟಕ ಆಡಿಯೋ ಔಟ್

ಕ್ಷೇತ್ರಕ್ಕೆ ನೀಡಲಾಗುವ ಅನುದಾನವನ್ನು ಕಡಿತಗೊಳಿಸಿದ್ರೆ ನಾವು ಶರಣಾಗುತ್ತೇವೆ ಎಂದು ಸಿಎಂ ತಿಳಿದುಕೊಂಡಿರಬಹುದು. ಕಂದಕೂರ ರಕ್ತದಲ್ಲೇ ಶರಣಾಗತಿ ಎಂಬ ಪದವೇ ಇಲ್ಲ. ಒಂದು ಮಠಕ್ಕೆ ಅನುದಾನ ನೀಡದಿದ್ದರೆ, ಭಿಕ್ಷೆ ನೀಡಿ ಅಭಿವೃದ್ಧಿ ಮಾಡುತ್ತೇನೆ. ಈ ಪ್ರತಿಭಟನೆ ಕೇವಲ ಟ್ರೈಲರ್, ಹೀಗೆ ಮುಂದುವರಿದ್ರೆ ಸಿನಿಮಾ ತೋರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಯಾರು ಈ ಶರಣಗೌಡ ಕಂದಕೂರ?
ಗುರುಮಿಠಕಲ್ ಶಾಸಕ ನಾಗನಗೌಡ ಪುತ್ರನೇ ಶರಣಗೌಡ ಕಂದಕೂರು. ಫೆಬ್ರವರಿಯಲ್ಲಿ ಶಾಸಕ ನಾಗನಗೌಡರನ್ನು ಬಿಜೆಪಿಗೆ ಸೆಳೆಯಲು ಯಡಿಯೂರಪ್ಪನವರು ಶರಣಗೌಡ ಸಂಪರ್ಕಿಸಿದ್ದರು ಎನ್ನಲಾದ ಆಡಿಯೋವನ್ನು ಹೆಚ್.ಡಿ.ಕುಮಾರಸ್ವಾಮಿ ಬಿಡುಗಡೆಗೊಳಿಸಿದ್ದರು. ಆಡಿಯೋದಲ್ಲಿ 50 ಕೋಟಿ ರೂ. ಆಫರ್ ಮತ್ತು ಚುನಾವಣೆಯಲ್ಲಿ ಬೆಂಬಲದದ ಜೊತೆ ಮಂತ್ರಿ ಸ್ಥಾನ ನೀಡಲಾಗುವುದು ಎಂಬ ಧ್ವನಿ ಕೇಳಿ ಬಂದಿತ್ತು. ಅಷ್ಟೇ ಅಲ್ಲದೇ ತಂದೆಯವರು ಅನರ್ಹರಾದರೆ ಏನು ಎಂದು ಕೇಳಿದ್ದಕ್ಕೆ ಅದಕ್ಕೆ ಏನು ತಲೆ ಕೆಡಿಸಿಕೊಳ್ಳಬೇಡ. ಸ್ಪೀಕರ್ ರಮೇಶ್ ಕುಮಾರ್ ಅವರನ್ನು 50 ಕೋಟಿ ರೂ. ನೀಡಿ ಬುಕ್ ಮಾಡಲಾಗಿದೆ ಎಂದು ತಿಳಿಸಿದರು. ಈ ವೇಳೆ ಕೋರ್ಟ್ ನಲ್ಲಿ ಏನಾದರೆ ಆದರೆ ಎಂದು ಕೇಳಿದ್ದಕ್ಕೆ ಅದಕ್ಕೆಲ್ಲ ಹೆದರುವ ಅಗತ್ಯವಿಲ್ಲ. ಅಮಿತ್ ಶಾ, ಮೋದಿ ಇದ್ದಾರೆ. ಸುಪ್ರೀಂ ಕೋರ್ಟ್ ಜಡ್ಜ್ ಗಳನ್ನು ಬುಕ್ ಮಾಡಿದ್ದಾರೆ ಎಂದು ಅಡಿಯೋದಲ್ಲಿ ಹೇಳಲಾಗಿತ್ತು. ಅಂದು ಹೆಚ್.ಡಿ.ಕುಮಾರಸ್ವಾಮಿ ಅವರು ನಡೆಸಿದ್ದ ಸುದ್ದಿಗೋಷ್ಠಿಯಲ್ಲಿ ಶರಣಗೌಡ ಕಂದಕೂರ ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *