– ದಕ್ಷಿಣ ಕನ್ನಡ ಜಿಲ್ಲೆಯ ಸವಣೂರಿನ ಆರೇಲ್ತಡಿ ದೈವಸ್ಥಾನಕ್ಕೆ ಭೇಟಿ
– ನಿಜವಾಯ್ತು ದೈವದ ನುಡಿ; 1 ತಿಂಗಳೊಳಗೆ ಜೈಲು ಶಿಕ್ಷೆಯಿಂದ ಮುಕ್ತಿ ಸಿಗುತ್ತೆ ಎಂದಿದ್ದ ದೈವ
ಮಂಗಳೂರು: ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಕಡಬ ತಾಲೂಕಿನ ಸವಣೂರಿನ ಆರೇಲ್ತಡಿ ದೈವಸ್ಥಾನಕ್ಕೆ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ (Janardhan Reddy) ಭೇಟಿ ನೀಡಿದ್ದಾರೆ.
ಪ್ರಕರಣವೊಂದರಲ್ಲಿ ಜನಾರ್ದನ ರೆಡ್ಡಿ ಜೈಲು ಶಿಕ್ಷೆಗೆ ಗುರಿಯಾಗಿದ್ದರು. ಆಗ, ಒಂದು ತಿಂಗಳ ಒಳಗಾಗಿ ಶಿಕ್ಷೆಯಿಂದ ಮುಕ್ತಿ ಸಿಗುವುದು ಎಂದು ದೈವ ಅಭಯ ನೀಡಿತ್ತು. ದೈವದ ನುಡಿ ನಿಜವಾದ ಬೆನ್ನಲ್ಲೇ ಗಂಗಾವತಿ ಶಾಸಕ ದೈವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ: 50% ಒಟ್ಟಾರೆ ಮೀಸಲಾತಿ ಮಿತಿ ತೆಗೆದು, 75%ಗೆ ಹೆಚ್ಚಿಸಬೇಕು: ಸಿದ್ದರಾಮಯ್ಯ ಪ್ರಸ್ತಾಪ
ಆರೇಲ್ತಡಿ ಇರ್ವೆರ್ ಉಳ್ಳಾಕ್ಲು, ಕೆಡೆಂಜೋಡಿತ್ತಾಯಿ ಹಾಗೂ ಪರಿವಾರ ದೈವಸ್ಥಾನ (Savanur Areltadi Devasthanam) ಇದಾಗಿದೆ. ಕಳೆದ ಮೇ 13ರಂದು ದೈವಸ್ಥಾನದ ಬ್ರಹಕಲಶೋತ್ಸವಕ್ಕೆ ರೆಡ್ಡಿ ಆಗಮಿಸಬೇಕಿತ್ತು. ಆದರೆ, ಆಂಧ್ರಪ್ರದೇಶದ ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮೇ 6ರಂದು ಮತ್ತೆ ಜೈಲುಶಿಕ್ಷೆಗೆ ಗುರಿಯಾಗಿದ್ದರು. ರೆಡ್ಡಿ ಕಾನೂನಿನ ಕುಣಿಕೆಗೆ ಸಿಲುಕಿದ್ದ ಪರಿಣಾಮ ದೈವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಆಗಮಿಸಿರಲಿಲ್ಲ. ಹೀಗಾಗಿ ಮೇ 13 ರಂದು ದೈವಸ್ಥಾನದ ಬ್ರಹ್ಮಕಲಶೋತ್ಸವ ಸಮಾರಂಭದಲ್ಲಿ ದೈವದ ಬಳಿ ಜನಾರ್ದನ ರೆಡ್ಡಿ ಆಪ್ತರು ಜೈಲು ಶಿಕ್ಷೆಯಿಂದ ಮುಕ್ತಿಗೆ ಮೊರೆ ಇಟ್ಟಿದ್ದರು.
ಇಂದಿನಿಂದ 1 ತಿಂಗಳ ಒಳಗಡೆ ಜೈಲು ಶಿಕ್ಷೆಯಿಂದ ಮುಕ್ತಿ ಸಿಗಲಿದೆ ಎಂದು ದೈವ ನುಡಿ ನೀಡಿತ್ತು. ಗ್ರಾಮದ ದೈವ ಕೆಡೆಂಜೋಡಿತ್ತಾಯಿ ದೈವ ರೆಡ್ಡಿಗೆ ಜೈಲಿನಿಂದ ಬಿಡುಗಡೆಯಾಗುವ ಅಭಯ ನೀಡಿತ್ತು. ದೈವದ ಅಭಯದಂತೆ ಒಂದು ತಿಂಗಳ ಒಳಗೆ ಗಾಲಿ ಜನಾರ್ದನ ರೆಡ್ಡಿ ಅವರು ಶಿಕ್ಷೆಯಿಂದ ಪಾರಾಗಿದ್ದಾರೆ. ಹಾಗಾಗಿ, ಇಂದು ಸವಣೂರಿನಲ್ಲಿರುವ ಇರ್ವೆಲ್ ಉಳ್ಳಾಕ್ಲು ಮತ್ತು ಕೆಡೆಂಜೋಡಿತ್ತಾಯಿ ಆರೇಲ್ತಡಿ ದೈವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಇದನ್ನೂ ಓದಿ: ಮುಜರಾಯಿ ಇಲಾಖೆ ಸುಪರ್ದಿಗೆ ಗಾಳಿ ಆಂಜನೇಯ ದೇವಸ್ಥಾನ – ಹೈಕೋರ್ಟ್‌ನಲ್ಲಿ ಸರ್ಕಾರದ ಆದೇಶ ಪ್ರಶ್ನಿಸಿದ್ದ ಅರ್ಜಿ ವಜಾ
ಸಂಕ್ರಮಣದ ವಿಶೇಷ ದಿನದಂದು ದೈವಸ್ಥಾನಕ್ಕೆ ಭೇಟಿ ನೀಡಿ ತಂಬಿಲ ಸೇವೆ ನೀಡಿದ್ದಾರೆ. ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಜನಾರ್ದನ ರೆಡ್ಡಿಗೆ ಸಾಥ್ ನೀಡಿದ್ದಾರೆ. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಇದ್ದರು.