ಆಪರೇಷನ್ ಆಪರೇಟರ್‌ಗಳಿಗೆ ಮಿತ್ರಮಂಡಳಿ ಶಾಸಕರು ತರಾಟೆ

Public TV
1 Min Read

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಈಗ ಆಗುತ್ತೆ ಅಂತ ಕಾದು ಕಾದು ಅರ್ಹ ಶಾಸಕರು ಸುಸ್ತಾಗಿದ್ದಾರೆ. ಉಪಚುನಾವಣೆ ಫಲಿತಾಂಶ ಬಂದು ಒಂದೂ ಕಾಲು ತಿಂಗಳಾಗುತ್ತಾ ಬರುತ್ತಿದೆ. ಆದರೆ ಸಂಪುಟ ವಿಸ್ತರಣೆ ಆಗುವ ಸುಳಿವೇ ಸಿಗುತ್ತಿಲ್ಲ. ಈಗಾಗಲೇ ಮಿತ್ರಮಂಡಳಿ ಶಾಸಕರು ಸಿಎಂ ಯಡಿಯೂರಪ್ಪ ಮತ್ತು ಬಿಜೆಪಿ ಹೈಕಮಾಂಡ್ ಮೇಲೆ ಅಸಮಧಾನಗೊಂಡಿರುವುದು ಹಳೆಯ ವಿಷಯ. ತಮ್ಮನ್ನು ಬಿಜೆಪಿಗೆ ಕರೆತರುವಲ್ಲಿ ಪ್ರಧಾನ ಪಾತ್ರ ವಹಿಸಿದ ಆಪರೇಷನ್ ಕಮಲದ ಆಪರೇಟರ್‌ಗಳ ದುಂಬಾಲು ಬಿದ್ದಿದ್ದಾರಂತೆ ಮಿತ್ರಮಂಡಳಿ ತಂಡದ ಸದಸ್ಯರು.

ಆಪರೇಷನ್ ಆಪರೇಟರ್ ಗಳ ಮೇಲೆ ವಲಸಿಗ ಮಿತ್ರಮಂಡಳಿ ಶಾಸಕರು ಒತ್ತಡ ತಂತ್ರ ಹಾಕಲಾರಂಭಿಸಿದ್ದಾರೆ. ಸಂಪುಟ ವಿಸ್ತರಣೆ ವಿಳಂಬ ಹಿನ್ನೆಲೆಯಲ್ಲಿ ಆಪರೇಷನ್ ಆಪರೇಟರ್ ಗಳನ್ನು ಮಿತ್ರಮಂಡಳಿ ತಂಡ ಹಿಡಿದು ಜಗ್ಗುತ್ತಿದೆಯಂತೆ. ಆಪರೇಷನ್ ಆಪರೇಟರ್ ಗಳಾದ ಡಿಸಿಎಂ ಅಶ್ವಥ್ ನಾರಾಯಣ, ಸಿ.ಪಿ ಯೋಗೇಶ್ವರ್, ಬಿ.ವೈ ವಿಜಯೇಂದ್ರ, ಆರ್ ಅಶೋಕ್ ಅವರ ವಿರುದ್ಧವೇ ಬೇಸರ, ಬೇಗುದಿ ತೋರ್ಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

ನಮ್ಮನ್ನು ಸಚಿವರಾಗಿ ಮಾಡೋದು ಇನ್ಯಾವಾಗ?, ನಾವಿದ್ದ ಪಕ್ಷ ಬಿಟ್ಟು ಬಿಜೆಪಿಗೆ ಬಂದರೆ ನಮಗೆ ಇಲ್ಲೂ ಪರದಾಟ ತಪ್ಪಿಲ್ಲ. ನಾವು ಯಾವುದೇ ಕಾರಣಕ್ಕೂ ರಾಜಿ ಆಗಲ್ಲ. ನಮ್ಮಿಂದಾನೇ ಬಿಜೆಪಿ ಸರ್ಕಾರ ರಚನೆಯಾಗಿದೆ. ಹಾಗಾಗಿ ನೀವು ನಮ್ಮೆಲ್ಲರಿಗೂ ಸಚಿವ ಸ್ಥಾನಗಳನ್ನು ಕೊಡಲೇಬೇಕು. ನಮ್ಮನ್ನು ಕರೆತರುವಾಗ ನೀವು ನಮಗೆ ಕೊಟ್ಟ ವಾಗ್ದಾನ ಮರೆತು ಹೋಯ್ತಾ? ಕೊಟ್ಟ ಮಾತನ್ನು ಉಳಿಸಿಕೊಳ್ಳದಿದ್ದರೆ ನಮ್ಮನ್ನೆಲ್ಲ ಯಾಕೆ ಕರೆತಂದ್ರಿ?, ಸರ್ಕಾರ ಬರಲು ನಾವು ಬೇಕು, ಸಚಿವರಾಗಲು ನಾವು ಬೇಡವಾ? ಹೀಗಂತ ಆಪರೇಷನ್ ಕಮಲಕ್ಕೆ ಕಾರಣಕರ್ತರಾದವರಿಗೆ ಪ್ರಶ್ನೆಗಳ ಬಾಣಗಳನ್ನೇ ಮಿತ್ರಮಂಡಳಿ ಶಾಸಕರು ಸುರಿಸುತ್ತಿದ್ದಾರಂತೆ.

ಮಿತ್ರಮಂಡಳಿ ಶಾಸಕರ ಈ ನಡೆಗೆ ಆಪರೇಷನ್ ಆಪರೇಟರ್ಸ್ ದಂಗಾಗಿದ್ದಾರೆ. ನಾವು ಅಂದುಕೊಂಡಿದ್ದೊಂದು ಆಗ್ತಿರೋದೊಂದು. ನಮಗೂ ಈಗಿನ ಸನ್ಮಿವೇಶಕ್ಕೂ ಸಂಬಂಧವಿಲ್ಲ ಅಂತ ಸಬೂಬು ಹೇಳುತ್ತಾ ತಪ್ಪಿಸಿಕೊಳ್ಳುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *