ತಂದೆ ಆಸ್ಪತ್ರೆಗೆ ದಾಖಲಾದ ಬಗ್ಗೆ ಹೇಳಿಕೊಂಡಿದ್ದರು- ಶಾಸಕ ಜ್ಞಾನೇಂದ್ರ

Public TV
1 Min Read

ಬೆಂಗಳೂರು: ಸಾವಿರಾರು ಯುವಕ, ಯುವತಿಯರಿಗೆ ಉದ್ಯೋಗ ನೀಡಿದ್ದ ಉದ್ಯಮಿ ಸಿದ್ಧಾರ್ಥ್ ಅವರು ನಾಪತ್ತೆಯಾಗಿರುವುದು ಆಘಾತ ತಂದಿದೆ. ತಮ್ಮ ತಂದೆ ಆಸ್ಪತ್ರೆಗೆ ದಾಖಲಾದ ಬಗ್ಗೆ ನನ್ನ ಬಳಿ ಹೇಳಿಕೊಂಡಿದ್ದರು ಎಂದು ತೀರ್ಥಹಳ್ಳಿ ಶಾಸಕ ಜ್ಞಾನೇಂದ್ರ ಹೇಳಿದ್ದಾರೆ.

ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ನಿವಾಸಕ್ಕೆ ಭೇಟಿ ನೀಡಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಶಾಸಕರು, ಕಳೆದ ಮೂರು ತಿಂಗಳಿನಿಂದ ಸಿದ್ಧಾರ್ಥ್ ತಂದೆ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸೀರಿಯೆಸ್ ಆಗಿದ್ದಾರೆ. ಆ ನೋವು ಅವರನ್ನು ತುಂಬಾನೇ ಕಾಡುತ್ತಿತ್ತು. ಹೀಗಾಗಿ ಅದನ್ನೇ ತಮ್ಮ ಮನಸ್ಸಿಗೆ ಹಾಕಿಕೊಂಡಿದ್ದಾರೋ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಸಿದ್ಧಾರ್ಥ್ ಅವರು ಚಿಕ್ಕ ವಯಸ್ಸಿನಲ್ಲಿ ದೊಡ್ಡ ಹೆಸರು ಮಾಡಿದ್ದರು. ಎಸ್.ಎಂ.ಕೃಷ್ಣ ಅವರಿಗೆ ಮಗನೂ ಅವರೇ, ಅಳಿಯನೂ ಅವರೇ ಆಗಿದ್ದರು. ಹೀಗಾಗಿ ಅವರು ತುಂಬಾ ದುಃಖದಲ್ಲಿದ್ದಾರೆ. ಇಳಿ ವಯಸ್ಸಿನಲ್ಲಿ ದೊಡ್ಡ ಆಘಾತಕ್ಕೆ ಒಳಗಾಗಿದ್ದಾರೆ. ಕುಟುಂಬದಲ್ಲಿ ಏನಾಯಿತು? ಯಾರು ಏನಾದರೂ ಅಂದಿದ್ದಾರಾ ಎನ್ನುವುದು ತಿಳಿದು ಬಂದಿಲ್ಲ. ಈಗ ಎಲ್ಲರೂ ನೋವಿನಲ್ಲಿದ್ದಾರೆ. ಇಂತಹ ಸಮಯದಲ್ಲಿ ವಿಚಾರಣೆ ಮಾಡುವುದು ಸೂಕ್ತವಲ್ಲ. ನದಿಯಲ್ಲಿ ಸುತ್ತಮುತ್ತಲಿನ ಪ್ರದೇಶದಲ್ಲಿ ಹುಡುಕಾಟ ನಡೆದಿದೆ ಎಂದು ಮಾಹಿತಿ ನೀಡಿದರು.

ನದಿ ತುಂಬಾ ಆಳವಾಗಿದೆ. ಒಂದು ವೇಳೆ ನದಿಗೆ ಯಾರೇ ಬಿದ್ದು ಆತ್ಮಹತ್ಯೆ ಮಾಡಿಕೊಂಡರೂ ದೇಹ ಮೇಲಕ್ಕೆ ಬರಲು ಸುಮಾರು 7 ಗಂಟೆ ಬೇಕಾಗುತ್ತದೆ. ಕೊನೆಯದಾಗಿ ಯಾರಿಗೆ ಕರೆ ಮಾಡಿದ್ದರು ಎಂದು ಪೊಲೀಸರು ತನಿಖೆ ಮಾಡುತ್ತಿದ್ದಾರೆ ಎಂದು ಹೇಳಿದರು.

ಚಾಲಕನಿಗೆ ಹೇಳಿ ವಾಕ್ ಮಾಡುತ್ತಿದ್ದ ಅವರು ಏಕಾಏಕಿ ನಾಪತ್ತೆಯಾಗಿದ್ದಾರೆ. ಸೇತುವೆ ಸಮಾರು ಒಂದು ಕಿ.ಮೀ. ಉದ್ದವಿದೆ. ಒಂದು ಬಾರಿ ವಾಕ್ ಮಾಡಿ ಕಾರಿನ ಬಳಿಗೆ ಬಂದು ನೀನು ಇಲ್ಲಿಯೇ ನಿಂತಿರು. ನಾನು ವಾಕ್ ಮಾಡಿ ಬರುತ್ತೇನೆ ಎಂದು ಚಾಲಕನಿಗೆ ಹೇಳಿ ಹೋಗಿದ್ದರು. ಬಹಳ ಸಮಯ ಕಳೆದರೂ ವಾಪಸ್ ಬರದಿದ್ದಾಗ ಚಾಲಕ ಗಾಬರಿಗೊಂಡು ಮನೆಯವರಿಗೆ ಮಾಹಿತಿ ನೀಡಿದ್ದಾನೆ ಎಂದು ಶಾಸಕರು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *